
ಬೀಜಿಂಗ್: ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆ, ಸಮಾಲೋಚನೆ ಮೂಲಕ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದಾದ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎಂದು ಚೀನಾ ಗುರುವಾರ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಕೇಳಿದ ಕಾಶ್ಮೀರ ವಿಷಯ ಕುರಿತ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಕಾಶ್ಮೀರದ ವಿಷಯದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಹೇಳಿದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಧೀರ್ಘಕಾಲೀನ ಸಮಸ್ಯೆಯಾಗಿದೆ ಮತ್ತು ಯುಎನ್ ಚಾರ್ಟರ್, ಭದ್ರತಾ ಮಂಡಳಿಯ ಸಂಬಂಧಿತ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಶಾಂತಿಯುತ ರೀತಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಭಾರತ ಮತ್ತು ಪಾಕಿಸ್ತಾನ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು, ವಿವಾದವನ್ನು ಪರಿಹರಿಸಿಕೊಳ್ಳಲು ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಾತುಕತೆ ಮತ್ತು ಸಮಾಲೋಚನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳು ಸಂಪೂರ್ಣವಾಗಿ ಅದರ ಆಂತರಿಕ ವ್ಯವಹಾರಗಳು ಎಂದು ಹೇಳುವ ಮೂಲಕ ಕಾಶ್ಮೀರ ವಿವಾದ ಕುರಿತು ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಭಾರತ ಈ ಹಿಂದೆ ತಿರಸ್ಕರಿಸಿತ್ತು. ಚೀನಾ ಸೇರಿದಂತೆ ಇತರ ದೇಶಗಳಿಗೆ ಪ್ರತಿಕ್ರಿಯಿಸಲು ಯಾವುದೇ ಹಕ್ಕಿಲ್ಲ. ಭಾರತವು ತಮ್ಮ ಆಂತರಿಕ ವಿಷಯಗಳ ಸಾರ್ವಜನಿಕ ತೀರ್ಪಿನಿಂದ ದೂರವಿರುವುದನ್ನು ಅವರು ಗಮನಿಸಬೇಕು ಎಂದು ವಿದೇಶಾಂಗ ಸಚಿವಾಲಯ ಈ ವರ್ಷದ ಮಾರ್ಚ್‌ನಲ್ಲಿ ಹೇಳಿತ್ತು.
ಪಾಕಿಸ್ತಾನದಿಂದ ಹೊರಹೊಮ್ಮುವ ಸಮಸ್ಯೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹದಗೆಟ್ಟಿದೆ. ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 5, 2019 ರಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ದ್ವಿಪಕ್ಷೀಯ ಸಂಬಂಧಗಳು ತೀವ್ರ ಹದಗೆಟ್ಟಿದೆ.
Advertisement