ನಭೋ ಮುಖಾಮುಖಿ: ಟಿಬೆಟ್ ನಲ್ಲಿ ಭಾರತದ ವಾಯು ಪ್ರಾಬಲ್ಯ ಹಿಮ್ಮೆಟ್ಟಿಸಲು ಚೀನಾ ಪೈಪೋಟಿ!

ವಾಯುಪಡೆಯ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತ ಹಾಗೂ ಚೀನಾಗಳು ಸಮಬಲ ಹೊಂದಿದ್ದರಿಂದ ಟಿಬೆಟ್ ಮೇಲಿನ ವಾಯುಪ್ರದೇಶಕ್ಕಾಗಿ ಚೀನಾ ಭಾರತದೊಡನೆ ದಾಳಿ ಮಾಡುವುದಕ್ಕಾಗಲಿ, ಸ್ವಯಂರಕ್ಷಣೆಗಾಗಲಿ ಮುಂದಾಗಿರಲಿಲ್ಲ.
ಚೀನಾದ ಜೆ20 ಯುದ್ದ ವಿಮಾನ, ರಫೇಲ್
ಚೀನಾದ ಜೆ20 ಯುದ್ದ ವಿಮಾನ, ರಫೇಲ್

By ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

1960ರ ದಶಕದಲ್ಲಿ, ಚೀನಾ ತನ್ನ ನೆರೆಯ ದೇಶಗಳೊಡನೆ ನಿರಂತರವಾಗಿ ಕಿತ್ತಾಟ ನಡೆಸುತ್ತಿತ್ತು. ಆದ್ದರಿಂದ ಸೋವಿಯತ್ ಒಕ್ಕೂಟದೊಡನೆಯೂ ಚೀನಾದ ಸಂಬಂಧ ಸಂಪೂರ್ಣ ಹದಗೆಟ್ಟಿತ್ತು. ಭಾರತ ಸೋವಿಯತ್ ಒಕ್ಕೂಟದೊಡನೆ ಸ್ನೇಹ ಸಂಬಂಧ ಹೊಂದಿ, ಮಿಗ್-21 ಯುದ್ಧ ವಿಮಾನದ ಉತ್ಪಾದನೆಯಲ್ಲಿ ತೊಡಗಿತ್ತು. ಇದನ್ನು ಭಾರತವೇ ನಿರ್ಮಿಸಲು ಸಾಧ್ಯವಾಗಿತ್ತು. 1970ರ ದಶಕದಲ್ಲಿ ಭಾರತದ ಬಳಿ 200ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳಿದ್ದವು. ಆ ಅವಧಿಯಲ್ಲಿ ಚೀನಾಗೆ ಮಿಗ್-21ಕ್ಕೆ ಸರಿಸಮನಾಗಿದ್ದ ಜೆ-7 ಯುದ್ಧ ವಿಮಾನದ ನಿರ್ಮಾಣ ಕಷ್ಟಕರವಾಗಿ, ಅದು ಮಿಗ್-19ಕ್ಕೆ ಸಮನಾಗಿದ್ದ ಜೆ-6 ಯುದ್ಧ ವಿಮಾನವನ್ನು ಬಳಸುತ್ತಿತ್ತು. ಆ ನಿಟ್ಟಿನಲ್ಲಿ ನೋಡಿದರೆ, ಭಾರತವೇ ಚೀನಾದ ಮೇಲೆ ಮೇಲುಗೈ ಹೊಂದಿತ್ತು ಎಂದು ಫ್ರಾಂಟಿಯರ್ ಇಂಡಿಯಾ ಸಂಪಾದಕರಾದ ಜೋಸೆಫ್ ಚಾಕೋ ಅಭಿಪ್ರಾಯ ಪಟ್ಟಿದ್ದಾರೆ.

1990ರ ದಶಕಕ್ಕೂ ಮೊದಲು ಚೀನಾದ ವೈಮಾನಿಕ ಮತ್ತು ಇಲೆಕ್ಟ್ರಾನಿಕ್ ಸಾಮರ್ಥ್ಯ ಭಾರತೀಯ ವಾಯುಪಡೆಯಷ್ಟು ಉತ್ತಮವಾಗಿರಲಿಲ್ಲ. ವಾಯುಪಡೆಯ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತ ಹಾಗೂ ಚೀನಾಗಳು ಸಮಬಲ ಹೊಂದಿದ್ದರಿಂದ ಟಿಬೆಟ್ ಮೇಲಿನ ವಾಯುಪ್ರದೇಶಕ್ಕಾಗಿ ಚೀನಾ ಭಾರತದೊಡನೆ ದಾಳಿ ಮಾಡುವುದಕ್ಕಾಗಲಿ, ಸ್ವಯಂರಕ್ಷಣೆಗಾಗಲಿ ಮುಂದಾಗಿರಲಿಲ್ಲ.

1980ರ ದಶಕದಲ್ಲಿ, ಚೀನಾದ ವಾಯುಪಡೆ ಭಾರತೀಯ ವಾಯುಪಡೆಗಿಂತ ಹಿಂದುಳಿದಿತ್ತು. ಆ ಕಾರಣದಿಂದ ಚೀನಾದ ದಾಳಿ ಮತ್ತು ರಕ್ಷಣಾ ಸಾಮರ್ಥ್ಯ ಅಪಾಯದಲ್ಲಿತ್ತು. ಭಾರತೀಯ ವಾಯುಪಡೆಯ ಬಳಿ ಮಿಗ್-23, ಮಿಗ್-27, ಫ್ರೆಂಚ್ ಮಿರೇಜ್ 2000 ನಂತಹ ಆಧುನಿಕ ಯುದ್ಧ ವಿಮಾನಗಳಿದ್ದವು. ಈ ವಿಮಾನಗಳು ನಾಲ್ಕನೇ ತಲೆಮಾರಿನ ಯುದ್ಧ ವಿಮಾನಗಳಷ್ಟು ಉತ್ತಮವಾಗಿದ್ದು, ದೀರ್ಘ ವ್ಯಾಪ್ತಿಯ ಯುದ್ಧದಲ್ಲಿ ಮಾತ್ರ ಕೆಲವು ಮಿತಿಗಳನ್ನು ಹೊಂದಿದ್ದವು.

ಇದಕ್ಕೆ ವ್ಯತಿರಿಕ್ತವಾಗಿ, ಚೀನಾ ಬಹುತೇಕ ಜೆ-6, ಜೆ-7 ಹಾಗೂ ಜೆ-8ನಂತಹ ಯುದ್ಧ ವಿಮಾನಗಳನ್ನು ಬಳಸುತ್ತಿತ್ತು. ಆದರೆ ಭಾರತೀಯ ವಾಯುಪಡೆಯ ಬಳಿ ಚೀನಾದ ಅತ್ಯುತ್ತಮ ಯುದ್ಧ ವಿಮಾನವಾದ ಎರಡನೇ ತಲೆಮಾರಿನ ಜೆ-8 ಗಿಂತಲೂ ಅತ್ಯುತ್ತಮವಾದ ವಿಮಾನಗಳಿದ್ದವು. ಭಾರತ 1986ರಲ್ಲಿ ಮಿಗ್-29 ವಿಮಾನಗಳನ್ನು ಪಡೆದುಕೊಂಡಾಗ, ಚೀನಾಗೆ ದಾಳಿ ನಡೆಸುವುದು ಕಷ್ಟಕರವಾಗಿ ಪರಿಣಮಿಸಿತ್ತು. ಅದರೊಡನೆ, ಭಾರತಕ್ಕೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳನ್ನೂ ಎದುರಿಸಬೇಕಿತ್ತು.

ಟಿಬೆಟಿನ ವಾಯು ಪ್ರದೇಶದ ಮೇಲೆ ಭಾರತದ ನಿಯಂತ್ರಣವನ್ನು ಎದುರಿಸಲು, ಚೀನಾದ ವಾಯು ಸೇನೆ ನೆಲದಿಂದಲೇ ಗುರುತಿಸಬಲ್ಲ ರೇಡಾರ್ ನಿರ್ದೇಶಿತ ಯುದ್ಧ ವಿಮಾನಗಳು ಮತ್ತು ರಕ್ಷಣೆಗಾಗಿ ಆ್ಯಂಟಿ ಏರ್‌ಕ್ರಾಫ್ಟ್ ಆರ್ಟಿಲರಿಗಳನ್ನು ಬಳಸಿಕೊಳ್ಳುತ್ತಿತ್ತು. ಆದರೆ, ಭಾರತ ತನ್ನ ಯುದ್ಧ ವಿಮಾನಗಳ ಪಡೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದ ಕಾರಣದಿಂದ, ಚೀನಾದ ಈ ಕಾರ್ಯತಂತ್ರ ದುರ್ಬಲವಾಯಿತು. ಭಾರತ ಅತ್ಯಂತ ದೂರದಿಂದ ದಾಳಿ ನಡೆಸಬಲ್ಲ (ಬಿಯಾಂಡ್ ವಿಶುವಲ್ ರೇಂಜ್) ಹಾಗೂ ಸನಿಹದಲ್ಲಿ ಕಾದಾಟ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಮಿಗ್-29ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಪರಿಚಯಿಸಿದ ಬಳಿಕ ಟಿಬೆಟ್‌ನಲ್ಲಿದ್ದ ಚೀನಾದ ಏರ್ ಫೋರ್ಸ್ ಮತ್ತು ಆ್ಯಂಟಿ ಏರ್‌ಕ್ರಾಫ್ಟ್ ವ್ಯವಸ್ಥೆಗಳಯ ಇನ್ನಷ್ಟು ದುರ್ಬಲವಾದವು.

ಆಧುನಿಕ ಮಿಗ್-29 ಯುದ್ಧ ವಿಮಾನಗಳು ಟಿಬೆಟ್ ವಾಯು ಪ್ರದೇಶದಲ್ಲಿ ಚೀನಾದ ವಾಯುಪಡೆಯ ಚಟುವಟಿಕೆಗಳಿಗೆ ಹೊಸ, ದೊಡ್ಡದಾದ ಸವಾಲನ್ನೇ ತಂದೊಡ್ಡಿತ್ತು. ಇದರ ವಿಶೇಷ ಯುದ್ಧ ಸಾಮರ್ಥ್ಯ, ಹೆಚ್ಚಿನ ಕಾರ್ಯಾಚರಣಾ ವ್ಯಾಪ್ತಿಯ ಕಾರಣದಿಂದ, ಇಂತಹ ನೂತನ ಮಾದರಿಯ ಯುದ್ಧ ವಿಮಾನವನ್ನು ಎದುರಿಸಲು ಚೀನಾದ ವಾಯು ಸೇನೆ ತನ್ನ ರಕ್ಷಣಾ ತಂತ್ರಗಳನ್ನು ಇನ್ನಷ್ಟು ಬದಲಾಯಿಸಬೇಕಾಗಿ ಬಂತು.

ಈ ಅಪಾಯಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಚೀನಾದ ವಾಯು ಸೇನೆಗೆ ಉತ್ತಮವಾದ ರೇಡಾರ್ ವೀಕ್ಷಣೆ ಮತ್ತು ಭಾರತೀಯ ವಾಯುಪಡೆಯ ಚಲನೆಯ ಕುರಿತು ಕ್ಷಿಪ್ರವಾಗಿ ಮಾಹಿತಿ ನೀಡಬಲ್ಲ, ಮೊದಲೇ ಎಚ್ಚರಿಕೆ ನೀಡಬಲ್ಲ ವ್ಯವಸ್ಥೆಗಳ ಅವಶ್ಯಕತೆಯಿತ್ತು. ಟಿಬೆಟ್ ಮೇಲಿನ ತನ್ನ ವಾಯು ಪ್ರದೇಶದ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಚೀನಾದ ವಾಯು ಸೇನೆ ಆ್ಯಂಟಿ ಮಿಸೈಲ್ ವ್ಯವಸ್ಥೆಗಳನ್ನು ವೃದ್ಧಿಸಬೇಕಾಗಿತ್ತು.

ಭಾರತೀಯ ವಾಯುಪಡೆಯ ತಾಂತ್ರಿಕ ಮಟ್ಟಕ್ಕೆ ಸರಿಸಮನಾಗಲು ಚೀನಾದ ವಾಯು ಸೇನೆ ಸತತವಾಗಿ ತಾಂತ್ರಿಕ ಅಭಿವೃದ್ಧಿ ಮತ್ತು ಆಧುನೀಕರಣವನ್ನು ಸಾಧಿಸಲು ಪ್ರಯತ್ನ ನಡೆಸುತ್ತಾ ಬಂತು. ಸಮಯ ಕಳೆದಂತೆ, ಚೀನಾ ಹೆಚ್ಚು ಶಕ್ತಿಶಾಲಿಯಾದ, ಆಧುನಿಕವಾದ ಜೆ-10 ಹಾಗೂ ಜೆ-11 (ರಷ್ಯಾದ ಸು-27 ಯುದ್ಧ ವಿಮಾನದ ಮಾದರಿಯ ವಿಮಾನ) ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಿತು. ಈ ವಿಮಾನಗಳು ಚೀನಾದ ಯುದ್ಧ ಸಾಮರ್ಥ್ಯ ಮತ್ತು ಕಾರ್ಯಾಚರಣೆಗಳನ್ನು ವೃದ್ಧಿಸಿದವು.

ಚೀನಾ 1990ರ ದಶಕದಲ್ಲಿ ಕೈಗೊಂಡ ಸುಧಾರಣೆಗಳ ಪರಿಣಾಮವಾಗಿ, ಚೀನಾದ ರಾಷ್ಟ್ರೀಯ ಸಾಮರ್ಥ್ಯದಲ್ಲೂ ಹೆಚ್ಚಳ ಕಂಡಿತು. ಈ ಅವಧಿಯಲ್ಲಿ, ಮಿಲಿಟರಿ ತಂತ್ರಜ್ಞಾನ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿ, ಚೀನಾದ ವಾಯುಸೇನೆಯ ಒಟ್ಟಾರೆ ಸಾಮರ್ಥ್ಯವನ್ನು ಹೆಚ್ಚಿಸಿತು. ಸೋವಿಯತ್ ಒಕ್ಕೂಟದ ವಿಭಜನೆಯ ಬಳಿಕ, ರಷ್ಯಾ ಚೀನಾದ ಜೊತೆ ಮಿಲಿಟರಿ ವ್ಯಾಪಾರ ವ್ಯವಹಾರಗಳನ್ನು ಕೈಗೊಂಡು, ತನ್ನ ಆರ್ಥಿಕತೆಯ ಹಿನ್ನಡೆಯನ್ನು ಸರಿಪಡಿಸುವ ಸಲುವಾಗಿ ಚೀನಾಗೆ ಆಧುನಿಕ ಸು-27 ಯುದ್ಧ ವಿಮಾನಗಳನ್ನು ಮಾರಾಟ ಮಾಡಿತು ಎಂದು‌ ಚಾಕೋ ಹೇಳುತ್ತಾರೆ.

ಚೀನಾದ ವಾಯು ಸೇನೆ ಸು-27 ಯುದ್ಧ ವಿಮಾನಗಳನ್ನು 1992ರಲ್ಲಿ ಪರಿಚಯಿಸಿತು. ಸಮಯ ಕಳೆದಂತೆ, ಚೀನಾ ವಾಯು ಸೇನೆ ಭಾರತೀಯ ವಾಯುಪಡೆಯನ್ನು ಎದುರಿಸಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿತು. 2000ನೇ ದಶಕದಲ್ಲಿ ಭಾರತೀಯ ವಾಯುಪಡೆ ಸು-30ಎಂಕೆಐ ಯುದ್ಧ ವಿಮಾನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಆರಂಭಿಸಿತು. ಚೀನಾ ಸಹ ಸು-30ಎಂಕೆಕೆ, ಸು-35 ಯುದ್ಧ ವಿಮಾನಗಳನ್ನು ಪಡೆದುಕೊಂಡು, ಸು-27ರ ತನ್ನದೇ ಆವೃತ್ತಿಗಳನ್ನು ಅಭಿವೃದ್ಧಿ ಪಡಿಸಲು ಆರಂಭಿಸಿತು. ಚೀನಾದ ವಾಯು ಸೇನೆ ಸಾಕಷ್ಟು ಅಭಿವೃದ್ಧಿ ಹೊಂದಿ, ಜೆ-20, ಜೆ-16 (ಜೆ-11 ಆಧಾರಿತವಾದ, ಸೋವಿಯತ್ ಸು-27 ನಿಂದ ಸ್ಫೂರ್ತಿ ಪಡೆದ ವಿಮಾನ) ರೀತಿಯ ಆಧುನಿಕ ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಿತು.

ಚೀನಾದ ವಾಯುಪಡೆಯ ಮೇಲಿನ ತನ್ನ ಮೇಲುಗೈಯನ್ನು ಉಳಿಸಿಕೊಳ್ಳಲು ಭಾರತೀಯ ವಾಯುಪಡೆ ಪ್ರಸ್ತುತ ಬಳಕೆಯಲ್ಲಿದ್ದ ತನ್ನ ಮಿರೇಜ್ 2000, ಹಾಗೂ ಸು-30ಎಂಕೆಐ ವಿಮಾನಗಳನ್ನು ಮೇಲ್ದರ್ಜೆಗೇರಿಸಿ, ಅತ್ಯಾಧುನಿಕ ಫ್ರೆಂಚ್ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿ, ಅವುಗಳಿಗೆ ಶಕ್ತಿಶಾಲಿ ಮಿಟಿಯೋರ್ ಬಿವಿಆರ್ ಕ್ಷಿಪಣಿಗಳನ್ನು ಅಳವಡಿಸಿತು.

ಚೀನಾದ ಯುದ್ಧ ವಿಮಾನಗಳು ಇಂದಿಗೂ ಟಿಬೆಟಿಯನ್ ನೆಲೆಗಳಿಂದ ಕನಿಷ್ಠ ಪ್ರಮಾಣದ ಇಂಧನ ಮತ್ತು ಆಯುಧಗಳೊಡನೆ ಹಾರಾಟ ನಡೆಸಬಲ್ಲವಾದ್ದರಿಂದ, ಚೀನಾ ಇಂದಿಗೂ ಸವಾಲನ್ನು ಎದುರಿಸುತ್ತಿದೆ. ದೂರದ ಪ್ರದೇಶಗಳಿಂದ ಬರುವಾಗ ಚೀನಾದ ಯುದ್ಧ ವಿಮಾನಗಳಿಗೆ ಇಂಧನ ಮರುಪೂರಣ ನಡೆಸಬೇಕಾಗುತ್ತದೆ. ಈ ಹಿನ್ನಡೆಯನ್ನು ಸರಿದೂಗಿಸಲು, ಚೀನಾ ಶಕ್ತಿಶಾಲಿ ರೇಡಾರ್ ವ್ಯವಸ್ಥೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿದೆ. ಟಿಬೆಟ್‌ನಲ್ಲಿನ ಯುದ್ಧ ವಿಮಾನಗಳು ಹೆಚ್ಚು ಭಾರ ಹೊತ್ತು ಹಾರಾಟ ನಡೆಸಲು ಸಾಧ್ಯವಿಲ್ಲದ ಕಾರಣ, ಚೀನಾ ಸಾಕಷ್ಟು ಯುಎವಿಗಳನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ.

<strong>ಗಿರೀಶ್ ಲಿಂಗಣ್ಣ</strong>
ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com