ವಾಷಿಂಗ್ಟನ್: ಇರಾನ್(Iran) ಜೊತೆಗೆ ಭಾರತ ಚಾಬಹಾರ್ ಬಂದರು (Chabahar port) ಒಪ್ಪಂದ ಮಾಡಿಕೊಂಡಿರುವ ಬೆನ್ನಲ್ಲೇ ಅಮೆರಿಕ ನಿರ್ಬಂಧ(US sanction) ಹೇರುವ ಎಚ್ಚರಿಕೆ ನೀಡಿದ್ದು, ಭಾರತೀಯ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುವುದಾಗಿ ಹೇಳಿದೆ.
ಇರಾನ್ ಜೊತೆಗೆ ವ್ಯಾಪಾರ-ವಹಿವಾಟಿಗಳನ್ನು ಮುಂದುವರೆಸಿದರೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಅಮೆರಿಕ ಎಲ್ಲಾ ದೇಶಗಳಿಗೆ ಎಚ್ಚರಿಸಿದ್ದು, ಈ ಬಗ್ಗೆ ಸ್ಟೇಟ್ ಡಿಪಾರ್ಟ್‌ಮೆಂಟ್ ಉಪ ವಕ್ತಾರ ವೇದಾಂತ್ ಪಟೇಲ್(State Department Deputy Spokesperson Vedant Patel) ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಭಾರತ-ಇರಾನ್ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ಇರಾನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದಂತೆ ತನ್ನದೇ ಆದ ವಿದೇಶಾಂಗ ನೀತಿ ಅನುಸರಿಸಲು ಭಾರತ ಮುಕ್ತವಾಗಿದೆ. ಆದರೆ ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿರುವುದನ್ನು ಭಾರತ ಗಮನದಲ್ಲಿಟ್ಟುಕೊಳ್ಳಬೇಕು. ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಇನ್ನೂ ಮುಂದುವರೆಯಲಿದೆ. ಇದು ಭಾರತಕ್ಕೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಮೈಮೇಲೆ ಅಪಾಯ ಎಳೆದುಕೊಳ್ಳಬೇಡಿ
ಕೆಲವು ದಿನಗಳ ಹಿಂದೆ ಇರಾನ್ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದ ಸಂಸ್ಥೆಗಳು, ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ ಹೇಳಿರುವ ಬಗ್ಗೆ ನಿಮಗೆ ತಿಳಿದಿರಬಹುದು. ಹೀಗಾಗಿ ಇರಾನ್ ಜೊತೆಗೆ ಸಂಬಂಧ ಬೆಳೆಸಿ ನಿರ್ಬಂಧದ ರಿಸ್ಕ್ ಅನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಅಮೆರಿಕ ಹೇಳಿದೆ.
ಎರಡು ವಾರಗಳ ಹಿಂದೆ ಇರಾನಿಯನ್ ಸೇನೆ ಜೊತೆ ಅಕ್ರಮ ವ್ಯಾಪಾರ ವಹಿವಾಟು ಹೊಂದಿರುವ 12ಕ್ಕೂ ಅಧಿಕ ಕಂಪನಿಗಳು, ಹಡುಗುಗಳು ಮತ್ತು ಉದ್ಯಮಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು. ಇದರಲ್ಲಿ ಭಾರತ ಮೂರು ಕಂಪನಿಗಳು(Indian based firms) ಸೇರಿದ್ದವು. ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ಈ ಕಂಪನಿಗಳು, ಹಡಗುಗಳು ಮತ್ತು ವ್ಯಕ್ತಿಗಳು ಇರಾನ್‌ನ ಮಾನವ ರಹಿತ ವೈಮಾನಿಕ ವಾಹನ- ಡ್ರೋನ್(UAVs) ಗಳನ್ನು ರಷ್ಯಾಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅಮೆರಿಕದ ಆರೋಪಿಸಿತ್ತು.
ಇನ್ನು ಇರಾನ್‌ನ ಸಾಗರೋತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪನಿಗಳಲ್ಲಿ ಸಹರಾ ಥಂಡರ್ ಪ್ರಮುಖವಾಗಿದೆ. ಈ ಕಂಪನಿಗೆ ಭಾರತೀಯ ಮೂಲದ ಮೂರು ಕಂಪನಿಗಳು ಸಹಾಯ ನೀಡುತ್ತಿವೆ. ಹೀಗಾಗಿ ಭಾರತೀಯ ಮೂಲದ ಜೆನ್ ಶಿಪ್ಪಿಂಗ್, ಪೋರ್ಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಸೀ ಆರ್ಟ್ ಶಿಪ್ ಮ್ಯಾನೇಜ್‌ಮೆಂಟ್(OPC) ಪ್ರೈವೆಟ್ ಲಿಮಿಟೆಡ್‌ಗೆ ಅಮೆರಿಕ ನಿರ್ಬಂಧ ವಿಧಿಸಿದೆ.
Advertisement