
ಬೀಜಿಂಗ್: ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಚೀನಾ ಕಿಡಿಕಾರಿದೆ.
ಟ್ರಂಪ್ ಸುಂಕ ಬೆದರಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಚೀನಾದ ವಾಣಿಜ್ಯ ಸಚಿವಾಲಯವು, ಇದು ಬೆದರಿಕೆಯ ತಂತ್ರವಾಗಿದ್ದು. ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅಂತ್ಯದವರೆಗೂ ಹೋರಾಡಲು ಸಿದ್ಧ ಎಂದು ಹೇಳಿದೆ.
ಚೀನಾ ತೆಗೆದುಕೊಂಡ ಕ್ರಮಗಳು ನಮ್ಮ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕ್ರಮವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿವೆ. ಅವು ಸಂಪೂರ್ಣ ನ್ಯಾಯಸಮ್ಮತವಾಗಿವೆ. ಆದರೆ, ಪ್ರತಿಯಾಗಿ ಅಮೆರಿಕಾ ನೀಡುತ್ತಿರುವ ಸುಂಕವು ಬೆದರಿಕೆಯ ತಂತ್ರವಾಗಿದ್ದು, ಇದು ಅಮೆರಿಕಾದ ಬ್ಲ್ಯಾಕ್ ಮೇಲ್ ಮಾಡುವ ಸ್ವಭಾವವನ್ನು ಬಹಿರಂಗಪಡಿಸುತ್ತಿದೆ. ನಾವು ಇದನ್ನು ಎಂದಿಗೂ ಒಪ್ಪುವುದಿಲ್ಲ. ಬೆದರಿಕೆ ತಂತ್ರಗಳಿಗೆ ನಾವು ಬಗ್ಗುವುದಿಲ್ಲ. ಈ ನಿಟ್ಟಿನಲ್ಲಿ ಅಂತ್ಯದ ವರೆಗೂ ಹೋರಾಡಲು ಸಿದ್ಧ ಎಂದು ಹೇಳಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಟ್ರಂಪ್ ಅವರು, ನಾಳೆ ಅಂದರೆ ಏಪ್ರಿಲ್ 8, 2025 ರೊಳಗೆ ಚೀನಾವು ಶೇ. 34 ರಷ್ಟು ಪ್ರತೀಕಾರದ ತೆರಿಗೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಅಮೆರಿಕ ಚೀನಾದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುತ್ತದೆ. ಇದು ಏಪ್ರಿಲ್ 9 ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದ್ದರು.
ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.
ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ನಂತರ ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಶೇ. 20 ರಷ್ಟು ಸುಂಕ ಘೋಷಿಸಿದ್ದ ಟ್ರಂಪ್, ಬುಧವಾರದಿಂದ ಶೇ. 34 ರಷ್ಟು ತೆರಿಗೆ ವಿಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಕೂಡಾ ಅಮೆರಿಕ ಸರಕುಗಳ ಮೇಲೆ ತೆರಿಗೆ ವಿಧಿಸಿದ್ದು, ಏಪ್ರಿಲ್ 10 ರಂದು ಜಾರಿಗೆ ತರಲು ನಿರ್ಧರಿಸಿದೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಚೀನಾದ ತೆರಿಗೆ ನೀತಿಯನ್ನು ಟೀಕಿಸಿರುವ ಟ್ರಂಪ್, ಚೀನಾದೊಂದಿಗಿನ ಎಲ್ಲಾ ಮಾತುಕತೆಗಳನ್ನು ಕೊನೆಗೊಳಿಸಲಾಗುವುದು. ಆದರೆ "ಬೇರೆ ದೇಶಗಳೊಂದಿಗೆ ಮಾತುಕತೆ, ಸಭೆಯನ್ನು ತಕ್ಷಣವೇ ಪ್ರಾರಂಭಿಸುತ್ತವೆ ಎಂದು ಹೇಳಿದ್ದರು.
Advertisement