
ಟೆಹರಾನ್: ಅಣುಸ್ಥಾವರಗಳ ಮೇಲಿನ ಅಮೆರಿಕಾ ದಾಳಿಯಿಂದ ಇರಾನ್ ನಿವಾಸಿಗಳಿಗೆ 'ಯಾವುದೇ ಅಪಾಯವಿಲ್ಲ' ಎಂದು ಇರಾನ್ ಭಾನುವಾರ ಹೇಳಿದೆ.
ಅಮೆರಿಕಾ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ರಾಷ್ಟ್ರದ ಅಧಿಕಾರಿಗಳು, ಅಮೆರಿಕ ದಾಳಿಯಿಂದ ಟೆಹ್ರಾನ್‌ನ ದಕ್ಷಿಣದಲ್ಲಿರುವ ಕೋಮ್ ನಗರದ ನಿವಾಸಿಗಳಿಗೆ "ಯಾವುದೇ ಅಪಾಯವಿಲ್ಲ" ಎಂದು ಹೇಳಿದ್ದಾರೆ.
ಫೋರ್ಡೊ ಪರಮಾಣು ತಾಣದ ಸುತ್ತಲಿನ "ಕೋಮ್ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯಾವುದೇ ಅಪಾಯವಿಲ್ಲ" ಎಂದು ಪ್ರಾಂತ್ಯದ ಬಿಕ್ಕಟ್ಟು ನಿರ್ವಹಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಈ ನಡುವೆ ಅಮೆರಿಕದ ದಾಳಿ ನಮ್ಮ ಪರಮಾಣು ಚಟುವಟಿಕೆಗಳನ್ನು 'ನಿಲ್ಲಿಸುವುದಿಲ್ಲ' ಎಂದು ಇರಾನ್‌ನ ಪರಮಾಣು ಸಂಸ್ಥೆ ಹೇಳಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರ ಸಲಹೆಗಾರರಾದ ಮಹ್ದಿ ಮೊಹಮ್ಮದಿ ಅವರು ಮಾತನಾಡಿ, ಫೋರ್ಡೋ ಮೇಲಿನ ಅಮೆರಿಕದ ದಾಳಿಯನ್ನು ಇರಾನ್ ನಿರೀಕ್ಷಿಸಿತ್ತು. ಹೀಗಾಗಿ ಸ್ಥಳವನ್ನು ಬಹಳ ಹಿಂದೆಯೇ ಸ್ಥಳಾಂತರಿಸಲಾಗಿತ್ತು, ದಾಳಿಯಿಂದ ಹಾನಿಗಳಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ನಮ್ಮ ಜ್ಞಾನದ ಮೇಲೆ ಯಾರೂ ದಾಳಿ ಮಾಡಲು ಸಾಧ್ಯವಿಲ್ಲ ಎಂದಿರುವ ಅವರು, ಈ ಬಾರಿಯೂ ಆಟಕ್ಕಿಳಿದಿರುವವರು ಈ ಬಾರಿಯೂ ಸೋಲು ಕಾಣುತ್ತಾರೆಂದು ಹೇಳಿದ್ದಾರೆ.
ಇನ್ನು ಅಮೆರಿಕಾ ದಾಳಿ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಹೌತಿ ಬಂಡುಕೋರರು, ಅಮೆರಿಕಾ ಇದರ ಪರಿಣಾಮ ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯೆಮೆನ್ ಗುಂಪಿನ ರಾಜಕೀಯ ಬ್ಯೂರೋದ ಸದಸ್ಯ ಹೆಜಮ್ ಅಲ್-ಅಸಾದ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ. ವಾಷಿಂಗ್ಟನ್ ಇದರ ಪರಿಣಾಮಗಳನ್ನು ಅನುಭವಿಸಲೇಬೇಕು ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
ಹಮಾಸ್ ಖಂಡನೆ
ಅಮೆರಿಕದ ಯುದ್ಧವಿಮಾನಗಳು ಟೆಹ್ರಾನ್‌ನ ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ದಾಳಿ ನಡೆಸಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಪ್ಯಾಲೆಸ್ಟೀನಿಯನ್ ಗುಂಪು ಹಮಾಸ್ ಅಮೆರಿಕಾ ವಿರುದ್ಧ ಕಿಡಿಕಾರಿದೆ
ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ (ಹಮಾಸ್), ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಪ್ರದೇಶ ಮತ್ತು ಸಾರ್ವಭೌಮತ್ವದ ವಿರುದ್ಧದ ಸ್ಪಷ್ಟ ಆಕ್ರಮಣವನ್ನು ಕಠಿಣ ಪದಗಳಲ್ಲಿ ಖಂಡಿಸುತ್ತದೆ ಎಂದು ಹೇಳಿದೆ. ]
ಈ ದಾಳಿಯು ಅಪಾಯಕಾರಿಯ ಉಲ್ಬಣವಾಗಿದೆ, ಈ ದಾಳಿ "ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಮತ್ತು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ನೇರ ಬೆದರಿಕೆಯಾಗಿದೆ ಎಂದು ತಿಳಿಸಿವೆ.
ಪ್ರತಿಕ್ರಿಯಿಸುವ ಸರದಿ ನಮ್ಮದು: ಇರಾನ್
ಅಮೆರಿಕಾ ದಾಳಿ ಕುರಿತು ಇರಾನ್‌ನ ಸರ್ವೋಚ್ಚ ನಾಯಕನ ಪ್ರಮುಖ ಸಲಹೆಗಾರರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ನೌಕಾಪಡೆಯ ಹಡಗು ಮತ್ತು ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವಂತೆ ಕರೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡರುವ ಸರದಿ ಈಗ ನಮ್ಮದಾಗಿದೆ ಎಂದಿರುವ ಅವರು, "ಸಂಶಯವಿಲ್ಲದೆ ಅಥವಾ ವಿಳಂಬವಿಲ್ಲದೆ, ಮೊದಲ ಹೆಜ್ಜೆಯಾಗಿ ನಾವು ಬಹ್ರೇನ್‌ನಲ್ಲಿರುವ ಅಮೇರಿಕನ್ ನೌಕಾ ಪಡೆಯ ಮೇಲೆ ಕ್ಷಿಪಣಿ ದಾಳಿಗಳನ್ನು ಪ್ರಾರಂಭಿಸಬೇಕು. ಇದೇ ವೇಳೆ ಹಾರ್ಮುಜ್ ಜಲಸಂಧಿಯನ್ನು ಅಮೇರಿಕನ್, ಬ್ರಿಟಿಷ್, ಜರ್ಮನ್ ಮತ್ತು ಫ್ರೆಂಚ್ ಹಡಗು ಸಾಗಣೆಗೆ ಮುಚ್ಚಬೇಕು ಎಂದು ಹೇಳಿದ್ದಾರೆ.
Advertisement