

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋರಿಕೆಯ ಮೇರೆಗೆ ಭಾರತವು ರಷ್ಯಾದ ತೈಲ ಆಮದಿನಿಂದ ಹಿಂದೆ ಸರಿಯಲಿದೆ ಎಂದು ಶ್ವೇತಭವನ ಹೇಳಿದೆ.
ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ಸೂಕ್ತ ಮತ್ತು ಅಗತ್ಯ ಎಂದು ಭಾವಿಸಿದಾಗ ರಷ್ಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಅವರು ಹೇಳಿದ್ದರು. ನಿನ್ನೆ ಆ ದಿನವಾಗಿತ್ತು ಎಂದು ಹೇಳಿದರು.
ಶಾಂತಿ ಮಾರ್ಗದತ್ತ ಸಾಗುವಲ್ಲಿ ಆಸಕ್ತಿ ತೋರಿಸದ ಪುಟಿನ್ ಬಗ್ಗೆ ಟ್ರಂಪ್ ಹತಾಶೆ ವ್ಯಕ್ತಪಡಿಸಿದ್ದಾರೆ ಈ ವರ್ಷದ ಕೊನೆಯಲ್ಲಿ ಹಂಗೇರಿಯಲ್ಲಿ ಟ್ರಂಪ್ ಹಾಗೂ ಪುಟಿನ್ ಭೇಟಿಯಾಗುವ ನಿರೀಕ್ಷೆಯಿದ್ದು. ಆದರೆ, ಆ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗೆಂದು ಭೇಟಿಯಾಗುವುದೇ ಇಲ್ಲ ಎಂದಲ್ಲ, ಒಂದು ದಿನ ಉಭಯ ನಾಯಕರ ಭೇಟಿಯಾಗಲಿದೆ ಎಂದು ತಿಳಿಸಿದರು.
ಮಾಸ್ಕೋದ ಯುದ್ಧ-ಹಣಕಾಸು ಮಾರ್ಗಗಳ ವಿರುದ್ಧ ಒತ್ತಡದ ಭಾಗವಾಗಿ ವಾಷಿಂಗ್ಟನ್ ಯುರೋಪಿಯನ್ ಮಿತ್ರರಾಷ್ಟ್ರಗಳನ್ನು ರಷ್ಯಾದ ತೈಲ ಆಮದುಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸಿದೆ. ಅಮೆರಿಕಾ ರಷ್ಯಾ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ನೋಡಿದರೆ, ಅವು ಕಠಿಣವಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ತಡೆಯಲು ಮಾಸ್ಕೋದ ಪ್ರಮುಖ ಆದಾಯದ ಮೂಲಗಳನ್ನು ಹತ್ತಿಕ್ಕುವ ಪ್ರಯತ್ನಗಳ ಭಾಗವಾಗಿ, ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಮೇಲೆ ನಿರ್ಬಂಧ ಹೇರಲಾಗಿದೆ.
ಚೀನಾ ರಷ್ಯಾದಿಂದ ತೈಲ ಖರೀದಿಗಳನ್ನು ಕಡಿಮೆ ಮಾಡುತ್ತಿದೆ ಎಂದು ಸೂಚಿಸುವ ಕೆಲವು ಅಂತರರಾಷ್ಟ್ರೀಯ ಸುದ್ದಿಗಳನ್ನು ನಾನು ನೋಡಿದೆ. ಟ್ರಂಪ್ ಕೋರಿಕೆಯ ಮೇರೆಗೆ ಭಾರತವೂ ಅದೇ ಮಾರ್ಗವನ್ನು ಅನುಸರಿಸುತ್ತದೆ ಎಂಬ ಭರವಸೆ ನಮಗಿದೆ ಎಂದರು.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಟ್ರಂಪ್ ಅವರು, ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಗಳನ್ನು ಕ್ರಮೇಣವಾಗಿ ನಿಲ್ಲಿಸಲು ಬದ್ಧವಾಗಿದೆ, ರಷ್ಯಾ ತೈಲ ಆಮದನ್ನು ನಿಲ್ಲಿಸುವುದಾಗಿ ಭಾರತ ಹೇಳಿತ್ತು. ಇದು ಒಂದು ಪ್ರಕ್ರಿಯೆಯಾಗಿದ್ದು, ಎಲ್ಲವನ್ನೂ ಒಂದೇ ಬಾರಿಗೆ ರಾತ್ರೋರಾತ್ರಿ ನಿಲ್ಲಿಸಲು ಸಾಧ್ಯವಿಲ್ಲ. ವರ್ಷಾಂತ್ಯದ ವೇಳೆಗೆ ಹಂತ ಹಂತವಾಗಿ ಆಮದನ್ನು ನಿಲ್ಲಿಸಲಿದ್ದಾರೆ. ರಷ್ಯಾದಿಂದ ತೈಲ ಆಮದನ್ನು ಭಾರತ ಶೇ 40ಕ್ಕೆ ಇಳಿಸಲಿದೆ ಎಂದು ಹೇಳಿದ್ದರು.
Advertisement