
ಟಿಯಾನ್‌ಜಿನ್: ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಗೆ ತೆರಳಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಇದೀಗ ವಿಶ್ವದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.
ಇಂದು ಶೃಂಗಸಭೆಯ ಕೊನೆಯ ದಿನವಾಗಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ.
ನಿನ್ನೆ ಎಸ್‌ಸಿಒ ಶೃಂಗಸಭೆಯಲ್ಲಿ ಎಲ್ಲಾ ನಾಯಕರು ಗುಂಪು ಫೋಟೋ ತೆಗೆಸಿಕೊಂಡರು. ನಂತರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪುಟಿನ್ ಮತ್ತು ಪ್ರಧಾನಿ ಮೋದಿ ಅವರು ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿತು. ಈ ಫೋಟೋದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಇದ್ದರು.
ಇಂದು ಮೋದಿಯವರು ಪುಟಿನ್ ಅವರನ್ನು ಭೇಟಿ ಮಾಡಿದ್ದು, ಭೇಟಿ ವೇಳೆ ನಾಯಕರ ಮಾತುಕತೆ ಕುರಿತು ಕುತೂಹಲಗಳು ಹೆಚ್ಚಾಗಿವೆ.
ಪುಟಿನ್ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿ ಯಾವಾಗಲೂ ಸಂತಸ ತರುತ್ತದೆ ಎಂದು ಹೇಳಿದ್ದಾರೆ.
ಟಿಯಾಂಜಿನ್‌ನಲ್ಲಿ ಮಾತುಕತೆಗಳು ಮುಂದುವರಿಯುತ್ತದೆ. SCO ಶೃಂಗಸಭೆಯ ಸಮಯದಲ್ಲಿ ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಅವರೊಂದಿಗೆ ನಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
25 ನೇ ಶೃಂಗಸಭೆಯು ಭಾನುವಾರ ರಾತ್ರಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಭರ್ಜರಿ ಔತಣಕೂಟದೊಂದಿಗೆ ಔಪಚಾರಿಕವಾಗಿ ಪ್ರಾರಂಭವಾಯಿತು.
ಟಿಯಾಂಜಿನ್ ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ಕೆಲ ತಿಂಗಳಿನಿಂದ ಭಾರತ, ಚೀನಾ, ರಷ್ಯಾ ಸೇರಿ ವಿಶ್ವದ ಹಲವು ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿರುದ್ಧ ತೆರಿಗೆ ಯುದ್ಧ ಆರಂಭಿಸಿದ್ದಾರೆ. ಅದರ ಬೆನ್ನಲ್ಲೇ ನಡೆಯುತ್ತಿರುವ ಶಾಂಘೈ ಶೃಂಗಸಭೆಯನ್ನು ಗ್ಲೋಬಲ್ ಸೌತ್ ದೇಶಗಳು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಂಡಿವೆ.
ರಷ್ಯಾದಿಂದ ಭಾರತದ ತೈಲ ಖರೀದಿ ಮುಂದಿಟ್ಟಿಕೊಂಡೇ ಭಾರತದ ಮೇಲೆ ಟ್ರಂಪ್ ಶೇ.25ರಷ್ಟು ಹೆಚ್ಚುವರಿ ತೆರಿಗೆ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಇಂದು ಮೋದಿ-ಪುಟಿನ್ ಭೇಟಿ ನಿಗದಿಯಾಗಿದ್ದು, ಭೇಟಿ ವೇಳೆ ಈ ವಿಷಯ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆ ಇದೆ. ಜೊತೆಗೆ ಈ ಭೇಟಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ನೇರ ಸಂದೇಶ ರವಾನಿಸುವ ಯತ್ನವಾಗಿರಲಿದೆ ಎಂದು ಬಣ್ಣಿಸಲಾಗಿದೆ.
ಭಾನುವಾರ, ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು, ಉಭಯ ನಾಯಕರು ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಹಕಾರವನ್ನು ಬಲಪಡಿಸಲು ಪ್ರತಿಜ್ಞೆ ಮಾಡಿದರು.
ಉಭಯ ರಾಷ್ಟ್ರಗಳ ನಾಯಕರ ನಡುವಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಚೀನಾ ಭಾರತಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
2020ರ ಗಡಿ ಸಂಘರ್ಷದ ನಂತರ ಭಾರತ ಹಾಗೂ ಚೀನಾ ಸಂಬಂಧ ಹದಗೆಟ್ಟಿತ್ತು. ಇದರ ಬಳಿಕ ಚೀನಾಕ್ಕೆ ಮೋದಿ ಅವರ ಮೊದಲ ಭೇಟಿ ಇದಾಗಿದೆ.
Advertisement