

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ತಾರಕ್ಕೇರುತ್ತಲೇ ಇದ್ದು, ಈ ನಡುವಲ್ಲೇ ಹಾರ್ಮುಜ್ ಜಲಸಂಧಿ (Strait of Hormuz)ಯನ್ನು ತೆರೆಯುವಂತೆ ಜಾಗತಿಕ ವೇದಿಕೆಯಲ್ಲಿ ಭಾರತ ಒತ್ತಾಯಿಸಿದೆ.
ಬ್ರಿಟನ್ ಆಯೋಜಿಸಿದ್ದ ಮಹತ್ವದ ಸಭೆಯಲ್ಲಿ ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ಸೇರಿದಂತೆ 60ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸಿದ್ದವು. ಆದರೆ, ಅಮೆರಿಕ ಈ ಸಭೆಯಿಂದ ದೂರ ಉಳಿದಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇನ್ನು ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು, ಹಾರ್ಮುಜ್ ಜಲಸಂಧಿಯ ಸಂಘರ್ಷದಲ್ಲಿ ಭಾರತವು ತನ್ನ ನಾವಿಕರನ್ನು ಕಳೆದುಕೊಂಡಿರುವ ಏಕೈಕ ದೇಶವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ಆಗ್ರಹಿಸಿದರು.
ಹಾರ್ಮುಜ್ ಜಲಸಂಧಿ (Strait of Hormuz) ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ದಾಳಿ ಹಿನ್ನೆಲೆ, ಅಲ್ಲಿ ಸಾಗುವ ಹಡಗುಗಳಿಗೆ ಸುರಕ್ಷತೆ ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಜಾಗತಿಕ ತೈಲ ಸಾಗಣೆಗೆ ಈ ಮಾರ್ಗ ಅತ್ಯಂತ ಪ್ರಮುಖವಾಗಿದ್ದು, ಯಾವುದೇ ಅಡ್ಡಿ ವಿಶ್ವ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಹಾರ್ಮುಜ್ ಜಲಸಂಧಿಯಲ್ಲಿ ನಿರ್ಬಂಧರಹಿತ ಹಾಗೂ ಸುರಕ್ಷಿತ ಸಾಗಣೆ ಮುಖ್ಯವಾಗಿದ್ದು, ಎಲ್ಲಾ ದೇಶಗಳು ಸೇರಿ ಸಮುದ್ರ ಮಾರ್ಗಗಳ ಭದ್ರತೆಯನ್ನು ಖಚಿತಪಡಿಸಬೇಕು ಎಂದು ಕರೆ ನೀಡಿದರು.
ನಾವಿಕರ ಸುರಕ್ಷತೆ, ಜಾಗತಿಕ ವ್ಯಾಪಾರ ಮತ್ತು ಶಾಂತಿಯ ದೃಷ್ಟಿಯಿಂದ ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ತಕ್ಷಣದ ಕ್ರಮಗಳು ಅಗತ್ಯವೆಂದು ಭಾರತ ಸ್ಪಷ್ಟಪಡಿಸಿದೆ.
ಸಮುದ್ರ ಮಾರ್ಗಗಳಲ್ಲಿ ಸ್ವಾತಂತ್ರ್ಯ ಕಾಪಾಡುವುದು ಅಂತಾರಾಷ್ಟ್ರೀಯ ಕಾನೂನುಗಳ ಪ್ರಮುಖ ಅಂಶವಾಗಿದ್ದು, ಇದನ್ನು ಎಲ್ಲ ರಾಷ್ಟ್ರಗಳು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಇದಲ್ಲದೆ, ಭಾರತೀಯ ನಾವಿಕರ ಸುರಕ್ಷತೆ ಪ್ರಮುಖ ವಿಷಯವಾಗಿದ್ದು, ಇತ್ತೀಚಿನ ಘಟನೆಗಳಲ್ಲಿ ಭಾರತೀಯರು ಬಲಿಯಾಗಿರುವುದು ದೇಶದ ಆತಂಕವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಸಮುದಾಯವು ಒಟ್ಟಾಗಿ ಕೆಲಸ ಮಾಡಿ ಸಮುದ್ರ ಭದ್ರತೆಯನ್ನು ಬಲಪಡಿಸಬೇಕೆಂದು ಭಾರತ ಕರೆ ನೀಡಿದೆ.
ಹಾರ್ಮುಜ್ ಪ್ರದೇಶದ ಉದ್ವಿಗ್ನತೆ ಕೇವಲ ಪ್ರಾದೇಶಿಕ ಸಮಸ್ಯೆಯಲ್ಲ, ಅದು ಜಾಗತಿಕ ವ್ಯಾಪಾರ, ಇಂಧನ ಭದ್ರತೆ ಮತ್ತು ನೌಕಾಯಾನ ಸ್ವಾತಂತ್ರ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇದನ್ನು ನಿಯಂತ್ರಿಸಲು ತಕ್ಷಣದ ಮತ್ತು ಸಮನ್ವಯಿತ ಕ್ರಮಗಳ ಅಗತ್ಯವಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಅಂತಾರಾಷ್ಟ್ರೀಯ ಸಮುದ್ರ ಕಾನೂನುಗಳ ಪ್ರಕಾರ, ಯಾವುದೇ ರಾಷ್ಟ್ರವೂ ಈ ಮಾರ್ಗವನ್ನು ಅಡ್ಡಿಪಡಿಸಬಾರದು. ಸಮುದ್ರ ಮಾರ್ಗಗಳ ಸ್ವಾತಂತ್ರ್ಯ ಕಾಪಾಡುವುದು ಜಾಗತಿಕ ವ್ಯಾಪಾರ ನಿರಂತರತೆಗೆ ಅತ್ಯಗತ್ಯ ಎಂದt ಅಭಿಪ್ರಾಯಪಟ್ಟಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ನಡೆದ ದಾಳಿಗಳಲ್ಲಿ ವಿದೇಶಿ ಧ್ವಜದ ವಾಣಿಜ್ಯ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಕನಿಷ್ಠ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮಧ್ಯಪ್ರಾಚ್ಯ ಸಂಘರ್ಷದ ಆರಂಭಿಕ ಹಂತದಲ್ಲೇ ಒಟ್ಟು ಎಂಟು ಭಾರತೀಯರು ಪ್ರಾಣ ಕಳೆದುಕೊಂಡಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಭಾರತದ ಇಂಧನ ಭದ್ರತೆಗೆ ಹಾರ್ಮುಜ್ ಜಲಸಂಧಿ ಅತ್ಯಂತ ಮುಖ್ಯವಾಗಿದ್ದು, ಎಲ್‌ಪಿಜಿ (LPG), ಎಲ್‌ಎನ್‌ಜಿ (LNG) ಸೇರಿದಂತೆ ಪ್ರಮುಖ ಇಂಧನ ಸಾಗಣೆ ಇದೇ ದಾರಿಯಿಂದ ನಡೆಯುತ್ತದೆ.
ಈ ಹಿನ್ನೆಲೆ, ಭಾರತವು ಇರಾನ್ ಸೇರಿದಂತೆ ಇತರೆ ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತೀಯ ಹಡಗುಗಳಿಗೆ ಸುರಕ್ಷಿತ ಮತ್ತು ನಿರ್ಬಂಧರಹಿತ ಸಂಚಾರ ಖಚಿತಪಡಿಸಲು ಪ್ರಯತ್ನಿಸುತ್ತಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ನೀಡಿರುವ ಮಾಹಿತಿಯಂತೆ, ಇತ್ತೀಚಿನ ದಿನಗಳಲ್ಲಿ ಕನಿಷ್ಠ ಆರು ಭಾರತೀಯ ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಇದರಿಂದ ರಾಜತಾಂತ್ರಿಕ ಪ್ರಯತ್ನಗಳು ಫಲ ನೀಡುತ್ತಿರುವುದು ಸ್ಪಷ್ಟವಾಗುತ್ತಿವೆ.
ಈ ಸಂಕಷ್ಟಕ್ಕೆ ಶಾಶ್ವತ ಪರಿಹಾರವೆಂದರೆ ಉದ್ವಿಗ್ನತೆಯನ್ನು ತಗ್ಗಿಸಿ, ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸುವುದೇ ಎಂದು ಭಾರತ ಪುನರುಚ್ಚರಿಸಿದೆ.
Advertisement