

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜ ಇರುವ ಹಡಗುಗಳ ಮೇಲೆ ನಡೆದ ಗುಂಡಿನ ದಾಳಿ ಬೆಳವಣಿಗೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದ್ದು, ಇದರ ಬೆನ್ನಲ್ಲೇ ಭಾರತ ಸರ್ಕಾರ ತಕ್ಷಣ ಕಠಿಣ ರಾಜತಾಂತ್ರಿಕ ಕ್ರಮ ಕೈಗೊಂಡಿದೆ.
ಘಟನೆಯ ಹಿನ್ನೆಲೆ ಭಾರತ, ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರಿಗೆ ಸಮನ್ಸ್ ನೀಡಿದೆ. ಜೊತೆಗೆ ರಾಯಭಾರ ಕಚೇರಿಯಲ್ಲಿ ಔಪಚಾರಿಕ ಪ್ರತಿಭಟನೆ ದಾಖಲಿಸಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು, ಮೊಹಮ್ಮದ್ ಫಥಾಲಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯ ಹಡಗುಗಳ ಸುರಕ್ಷತೆ ಪ್ರಮುಖ ವಿಚಾರವಾಗಿದ್ದು, ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಮತ್ತು ತೈಲ ಸಾಗಣೆಗೆ ಮಹತ್ವದ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಶಾಂತಿ ಉಂಟಾದರೆ ಅದರ ಪರಿಣಾಮ ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಬೀಳುತ್ತದೆ ಎಂಬುದನ್ನು ಸ್ಪಷ್ಟಪಡಿಸಿದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಈ ಮಾರ್ಗ ಈಗ ಅಪಾಯದ ವಲಯವಾಗಿದ್ದು, ಭಾರತೀಯ ಹಡಗುಗಳಿಗೆ ತಕ್ಷಣ ಭದ್ರತಾ ಭರವಸೆ ನೀಡಬೇಕೆಂದು ಒತ್ತಾಯಿಸಿದರು ಎಂದು ತಿಳಿದುಬಂದಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಎರಡು ಭಾರತೀಯ ಹಡಗುಗಳ ಮೇಲೆ ನಡೆದ ಗುಂಡಿನ ದಾಳಿ ಅತ್ಯಂತ ಗಂಭೀರ ಘಟನೆಯಾಗಿದೆ ಎಂದು ಹೇಳಿದ್ದಾರೆ.
ಸಮುದ್ರ ಮಾರ್ಗದಲ್ಲಿ ಸಾಗುವ ವ್ಯಾಪಾರ ಹಡಗುಗಳು ಮತ್ತು ನೌಕಾಯಾನಿಕರ ಜೀವ ಭದ್ರತೆ ಭಾರತಕ್ಕೆ ಅತ್ಯಂತ ಆದ್ಯತೆಯ ವಿಷಯವಾಗಿದ್ದು, ಈ ವಿಷಯದಲ್ಲಿ ಯಾವುದೇ ತಾರತಮ್ಯ ಸಹಿಸಲಾರದೆಂದು ತಿಳಿಸಿದ್ದಾರೆ.
ಇದೇ ವೇಳೆ, ಈ ಮಾರ್ಗದಲ್ಲಿ ಭಾರತದ ಹಡಗುಗಳ ಸುರಕ್ಷಿತ ಸಂಚಾರವನ್ನು ಶೀಘ್ರದಲ್ಲೇ ಮರು ಆರಂಭಿಸಬೇಕೆಂದು ಇರಾನ್‌ಗೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ, ಇದೇ ಹಾರ್ಮುಜ್ ಮಾರ್ಗದಲ್ಲಿ ಭಾರತೀಯ ಹಡಗುಗಳ ಸುರಕ್ಷತೆಗೆ ಇರಾನ್ ಸಹಕಾರ ನೀಡಿದ್ದನ್ನು ಭಾರತ ಸ್ಮರಿಸಿದ್ದು, ಈಗಲೂ ಅದೇ ರೀತಿಯ ಸಹಕಾರ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದೆ.
ಈ ಸಂಬಂಧ ಭಾರತದ ನಿಲುವುಗಳನ್ನು ತನ್ನ ಸರ್ಕಾರಕ್ಕೆ ತಕ್ಷಣವೇ ತಲುಪಿಸುವುದಾಗಿ ಇರಾನ್ ರಾಯಭಾರಿ ಭರವಸೆ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.
ಒಮಾನ್ ಈಶಾನ್ಯ ಭಾಗದ ಸಮುದ್ರ ಪ್ರದೇಶದಲ್ಲಿ ಸಾಗುತ್ತಿದ್ದ ಎರಡು ಭಾರತೀಯ ಧ್ವಜದ ಹಡಗುಗಳು ಮೇಲೆ ಗುಂಡಿನ ದಾಳಿ ನಡೆದಿವೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಹಡಗುಗಳಿಗೆ ಹಾನಿ ಸಂಭವಿಸದಿದ್ದರೂ, ಭದ್ರತಾ ಕಾರಣಗಳಿಂದ ಹಡಗುಗಳು ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾರ್ಮುಜ್ ಜಲಸಂಧಿಯು ಜಾಗತಿಕ ಮಟ್ಟದಲ್ಲಿ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ದೊಡ್ಡ ಪ್ರಮಾಣದ ಇಂಧನ ಸರಬರಾಜು ಇದೇ ಮಾರ್ಗದ ಮೂಲಕ ಸಾಗುತ್ತದೆ. ಭಾರತ ತನ್ನ ಇಂಧನ ಅಗತ್ಯದ ಬಹುಪಾಲನ್ನು ಈ ಮಾರ್ಗದಿಂದಲೇ ಪೂರೈಸಿಕೊಳ್ಳುತ್ತಿರುವುದರಿಂದ, ಇಲ್ಲಿ ಉಂಟಾಗುವ ಯಾವುದೇ ಅಶಾಂತಿ ದೇಶದ ಇಂಧನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ನೇರ ಪರಿಣಾಮ ಬೀರುತ್ತದೆ.
ಇದೀಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲು ಕಾರಣವಾಗಿರುವುದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿ. ಈ ಸಂಘರ್ಷದ ಪರಿಣಾಮವಾಗಿ ಹಾರ್ಮುಜ್ ಸಮುದ್ರಸಂಕುಲವು “ಚೋಕಿಂಗ್ ಪಾಯಿಂಟ್” ಆಗಿ ಪರಿಣಮಿಸಿದ್ದು, ಹಡಗುಗಳ ಸಂಚಾರದ ಮೇಲೆ ಅನಿಶ್ಚಿತತೆ ಹೆಚ್ಚಿಸಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಬೆಲೆಗಳ ಏರಿಳಿತ ಸಾಧ್ಯತೆಯೂ ಹೆಚ್ಚಾಗಿದೆ.
ಈ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಹಾರ್ಮೂಜ್ ಸಮುದ್ರ ಮಾರ್ಗವನ್ನು ಒತ್ತಡ ಸಾಧನವಾಗಿ ಬಳಸಬಾರದು ಎಂದು ಹೇಳಿದ್ದಾರೆ.
ಇರಾನ್ ನಿಲುವಿನಲ್ಲಿ ಏರುಪೇರುಗಳು ಕಂಡುಬರುತ್ತಿರುವುದಾಗಿ ಆರೋಪಿಸಿದ ಅವರು, ಸಮುದ್ರ ಮಾರ್ಗವನ್ನು ಮುಚ್ಚುವ ಅಥವಾ ನಿಯಂತ್ರಿಸುವ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ಒಪ್ಪಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಇರಾನ್ ಜೊತೆ ಮಾತುಕತೆಗಳು ನಡೆಯುತ್ತಿವೆ ಮತ್ತು ಪರಿಸ್ಥಿತಿ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಬಗ್ಗೆ ಶೀಘ್ರದಲ್ಲೇ ಸ್ಪಷ್ಟತೆ ಸಿಗಲಿದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ.
Advertisement