

ವಾಷಿಂಗ್ಟನ್: ಅಮೆರಿಕಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರ ಭಾವಚಿತ್ರವು ದೇಶದ ಅಧಿಕೃತ ಪಾಸ್‌ಪೋರ್ಟ್ ಪುಟಗಳಲ್ಲಿ ಮುದ್ರಿಸಲಾಗುತ್ತಿದ್ದು, ಇದು ಹೊಸ ವಿವಾದವನ್ನು ಸೃಷ್ಟಿಸಿದೆ.
ಅಮೆರಿಕಾದ 250ನೇ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಡೊನಾಲ್ಡ್ ಟ್ರಂಪ್ ಅವರ ಫೋಟೋ ಮತ್ತು ಸಹಿ ಇರುವ ವಿಶೇಷ ಆವೃತ್ತಿಯ ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ.
ಪಾಸ್‌ಪೋರ್ಟ್‌ನ ಒಳಗಿನ ಪುಟವೊಂದರಲ್ಲಿ ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಪಠ್ಯದ ಮೇಲೆ ಟ್ರಂಪ್ ಅವರ ಅಧಿಕೃತ ಭಾವಚಿತ್ರವಿರುತ್ತದೆ. ಅದರ ಕೆಳಗೆ ಅವರ ಸಹಿಯು ಚಿನ್ನದ ಬಣ್ಣದಲ್ಲಿ ಮುದ್ರಿತವಾಗಿರುತ್ತದೆ ಎಂದು ತಿಳಿಸಿದೆ.
ಈ ವಿಶೇಷ ಪಾಸ್‌ಪೋರ್ಟ್‌ಗಳು ಕೇವಲ 25,000 ದಿಂದ 30,000 ಪ್ರತಿಗಳಲ್ಲಿ ಮಾತ್ರ ಲಭ್ಯವಿರಲಿದ್ದು, ವಾಷಿಂಗ್ಟನ್ ಪಾಸ್‌ಪೋರ್ಟ್ ಏಜೆನ್ಸಿಯಲ್ಲಿ ಅರ್ಜಿ ಸಲ್ಲಿಸುವ ಅಮೆರಿಕನ್ ನಾಗರಿಕರಿಗೆ ಮಾತ್ರ ಸಿಗಲಿದೆ ಎಂದು ತಿಳಿಸಿದೆ.
ಸಾಮಾನ್ಯವಾಗಿ ಅಬ್ರಹಾಂ ಲಿಂಕನ್ ಮತ್ತು ಜಾರ್ಜ್ ವಾಷಿಂಗ್ಟನ್ ಅಂತಹ ಐತಿಹಾಸಿಕ ವ್ಯಕ್ತಿಗಳ ಚಿತ್ರಗಳಿರುತ್ತಿದ್ದ ಜಾಗದಲ್ಲಿ, ಈಗ ಟ್ರಂಪ್ ತಮ್ಮದೇ ಚಿತ್ರವನ್ನು ಸೇರಿಸುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಟ್ರಂಪ್ ಅವರ ಪ್ರಭಾವ ಕೇವಲ ಪಾಸ್‌ಪೋರ್ಟ್‌ಗೆ ಸೀಮಿತವಾಗಿಲ್ಲ. ಅಮೆರಿಕದ ಕರೆನ್ಸಿ ನೋಟುಗಳ (Dollar Bills) ಮೇಲೂ ಅವರ ಸಹಿ ಇರಲಿದೆ. ಅಲ್ಲದೆ, ರಾಜಧಾನಿಯಲ್ಲಿರುವ ಹಲವಾರು ಸರ್ಕಾರಿ ಕಟ್ಟಡಗಳ ಮೇಲೆ ಅವರ ಬ್ಯಾನರ್‌ಗಳನ್ನು ಇರಿಸಲಾಗಿದ್ದು, ಕೆನಡಿ ಸೆಂಟರ್ ಮತ್ತು ಈಗ ವಿಸರ್ಜಿಸಲಾದ ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್‌ಗೆ ಅವರ ಹೆಸರನ್ನು ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಟ್ರಂಪ್ ಅವರ ಈ ನಿರ್ಧಾರವನ್ನು ವಿರೋಧ ಪಕ್ಷದ ಡೆಮೋಕ್ರಾಟ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇದು "ವ್ಯಕ್ತಿ ಆರಾಧನೆಯ ಪರಮಾವಧಿ" ಮತ್ತು ದೇಶದ ಸಾಂಪ್ರದಾಯಿಕ ಮೌಲ್ಯಗಳಿಗೆ ಧಕ್ಕೆ ತರುವ ಪ್ರಯತ್ನ ಎಂದು ಟೀಕಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲಿ 'ರಾಷ್ಟ್ರಪಿತ'ನ ಸ್ಥಾನ ಪಡೆಯಲು ಟ್ರಂಪ್ ಈ ಹಾದಿ ತುಳಿಯುತ್ತಿದ್ದಾರೆಯೇ ಎಂಬ ಅನುಮಾನವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ.
ಇತಿಹಾಸದ ದೃಷ್ಟಿಯಿಂದ ನೋಡಿದರೆ, ಪಾಸ್‌ಪೋರ್ಟ್‌ಗಳು ಸಾಮಾನ್ಯವಾಗಿ ದೇಶದ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಭೌಗೋಳಿಕ ಗುರುತುಗಳನ್ನು ಪ್ರತಿಬಿಂಬಿಸುವ ದಾಖಲೆಗಳಾಗಿವೆ. ಜೀವಂತ ನಾಯಕರ ಚಿತ್ರವನ್ನು ಅದರಲ್ಲಿ ಸೇರಿಸುವುದು ಅಪರೂಪ.
ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಅಧಿಕಾರದಲ್ಲಿರುವ ನಾಯಕನ ಚಿತ್ರವನ್ನು ಪಾಸ್‌ಪೋರ್ಟ್‌ನಲ್ಲಿ ಬಳಸುವ ಪದ್ಧತಿ ಇಲ್ಲ. ಈ ಹಿನ್ನೆಲೆ, ಟ್ರಂಪ್ ಈ ರೀತಿಯ ವಿಶೇಷ ಪಾಸ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ ಮೊದಲ ಅಮೆರಿಕ ಅಧ್ಯಕ್ಷರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ.
ಟ್ರಂಪ್ ಅವರನ್ನಷ್ಟೇ ಅಲ್ಲದೆ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರ ಮೇಲೂ ಟೀಕೆಯ ಮಳೆ ಸುರಿಯುತ್ತಿವೆ. “ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗಳ ಮೇಲೆ ಗಮನ ಹರಿಸುವ ಬದಲು, ಟ್ರಂಪ್ ಅವರ ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗಿದ್ದಾರೆ” ಎಂದು ಡೆಮಾಕ್ರಾಟ್ ಸದಸ್ಯರು ಆರೋಪಿಸಿದ್ದಾರೆ.
ವಿಶೇಷವಾಗಿ ಇರಾನ್ ಸಂಬಂಧಿತ ಉದ್ವಿಗ್ನ ಪರಿಸ್ಥಿತಿ ನಡುವೆ ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಸರ್ಕಾರದ ಸಂಪನ್ಮೂಲಗಳನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನೊಂದೆಡೆ, ಇತರೆ ದೇಶಗಳ ಉದಾಹರಣೆಗಳನ್ನೂ ನೀಡಲಾಗುತ್ತಿದ್ದು, ಉತ್ತರ ಕೊರಿಯಾದಲ್ಲಿ ನಾಯಕ ಕಿಮ್ ಜಾಂಗ್ ಉನ್ ಅವರ ಪ್ರಭಾವ ವ್ಯಾಪಕವಾಗಿದ್ದರೂ, ಪಾಸ್‌ಪೋರ್ಟ್‌ನಲ್ಲಿ ಅವರ ಚಿತ್ರವನ್ನು ಬಳಸುವುದಿಲ್ಲ. ಬದಲಾಗಿ ಪವಿತ್ರ ಪೇಕ್ಟು ಪರ್ವತದ ಚಿತ್ರವನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಅಮೆರಿಕದ ಪ್ರಸ್ತುತದ ಪಾಸ್‌ಪೋರ್ಟ್‌ಗಳಲ್ಲಿ ಅಪೊಲೊ 11, ಚಂದ್ರನ ಮೇಲೆ ಇಳಿಯುವುದು ಮತ್ತು ಸ್ವಾತಂತ್ರ್ಯದ ಪ್ರತಿಮೆಯಂತಹ ಐತಿಹಾಸಿಕ ತಾಣಗಳು ಮತ್ತು ಘಟನೆಗಳನ್ನು ಮುದ್ರಿಸಲಾಗಿದೆ. ಇವು ರಾಷ್ಟ್ರದ ಸಂಯುಕ್ತ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದು, ಯಾವುದೇ ಒಬ್ಬ ವ್ಯಕ್ತಿಯನ್ನು ಈ ವರೆಗೂ ಮುದ್ರಿಸಲಾಗಿಲ್ಲ,
ಇತ್ತೀಚಿನ ಅವಧಿಯಲ್ಲಿ ಟ್ರಂಪ್ ಆಡಳಿತವು ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ತನ್ನ ಗುರುತನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೆಲವು ಕಟ್ಟಡಗಳಲ್ಲಿ ಅವರ ಹೆಸರು, ಚಿತ್ರಗಳನ್ನು ಪ್ರದರ್ಶಿಸುವುದು, ಮತ್ತು ಕೆಲವು ಸಂಸ್ಥೆಗಳ ಹೆಸರಿನಲ್ಲಿ ಬದಲಾವಣೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಿನಲ್ಲಿ, ಟ್ರಂಪ್ ಅವರ ಫೋಟೋ ಪಾಸ್‌ಪೋರ್ಟ್‌ನಲ್ಲಿ ಸೇರಿಸುವ ಯೋಜನೆ ಕೇವಲ ಸ್ಮಾರಕ ಕ್ರಮವಾಗಿದ್ದರೂ, ಅದರ ಹಿಂದಿರುವ ರಾಜಕೀಯ ಸಂಕೇತಗಳು, ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಪರಿಣಾಮ ಮತ್ತು ರಾಷ್ಟ್ರದ ಗುರುತಿನ ಮೇಲೆ ಅದರ ಪ್ರಭಾವ ಕುರಿತು ಅಮೆರಿಕಾದಲ್ಲಿ ಗಂಭೀರ ಹಾಗೂ ದೀರ್ಘ ಚರ್ಚೆಗೆ ಕಾರಣವಾಗಿದೆ.
Advertisement