

ಟೆಹ್ರಾನ್: ಅಯತೊಲ್ಲಾ ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಅಥವಾ ಇಲ್ಲವೋ ಎಂಬುದರ ಆತಂಕದ ನಡುವೆ ಅವರ ಹಳೆಯ ವಿಡಿಯೋ ದೃಶ್ಯಾವಳಿಗಳನ್ನು (Archival footage) ಇರಾನ್‌ನ 'ಫಾರ್ಸ್ ನ್ಯೂಸ್' ಸಂಸ್ಥೆಯು ಬಿಡುಗಡೆ ಮಾಡಿದೆ ಎಂದು 'ಅಲ್ ಅರೇಬಿಯಾ' ವರದಿ ಮಾಡಿದೆ.
'ಅಲ್ ಅರೇಬಿಯಾ' ಪ್ರಕಾರ, ಈ ದೃಶ್ಯಾವಳಿಗಳನ್ನು ಖಮೇನಿ ಸರ್ವೋಚ್ಚ ನಾಯಕರಾಗುವ ಮುನ್ನವೇ ಚಿತ್ರೀಕರಿಸಲಾಗಿತ್ತು ಎನ್ನಲಾಗಿದೆ. ಇದರಲ್ಲಿ ಅವರು ಜನರ ಗುಂಪಿನೊಂದಿಗೆ ಕಂಡುಬರುತ್ತಾರೆ ಮತ್ತು ಚರ್ಚೆಗಳನ್ನು ಪ್ರಾರಂಭಿಸುವ ಮುನ್ನಾ ಅವರೆಲ್ಲರೂ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಾಣಿಸುತ್ತದೆ. ಗಮನಾರ್ಹವೆಂದರೆ, ಆಗಸ್ಟ್ ತಿಂಗಳಲ್ಲಿ ಇರಾನಿನ ಮಾಧ್ಯಮಗಳು ಖಮೇನಿ ವೀಡಿಯೊ ಬಿಡುಗಡೆ ಮಾಡಿರುವುದು ಇದು ಎರಡನೇ ಬಾರಿಯಾಗಿದೆ.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ್ದವು. ಇದಾದ ಕೆಲವೇ ದಿನಗಳಲ್ಲಿ, ಇರಾನ್‌ನ ಅರೆ-ಅಧಿಕೃತ 'ಮೆಹ್ರ್ ನ್ಯೂಸ್' ಸಂಸ್ಥೆಯು ದಿನಾಂಕವಿಲ್ಲದ ವೀಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಮೊಜ್ತಾಬಾ ಖಮೇನಿ ಉತ್ತಮ ಆರೋಗ್ಯದಿಂದಿರುವಂತೆ ಕಂಡುಬಂದಿದ್ದರು.
ಖಮೇನಿ ಅವರ ಆರೋಗ್ಯ ಮತ್ತು ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳ ನಡುವೆ ಇರಾನ್ ಸರ್ಕಾರದ ಬೆಂಬಲವಿರುವ ಮತ್ತು ಸರ್ಕಾರದ 'ಇಸ್ಲಾಮಿಕ್ ಅಭಿವೃದ್ಧಿ ಸಂಸ್ಥೆ'ಯಿಂದ ನಿರ್ವಹಿಸಲ್ಪಡುವ ಅರೆ-ಅಧಿಕೃತ ಸುದ್ದಿ ಸಂಸ್ಥೆಯಾದ 'ಮೆಹ್ರ್', ಮೊಜ್ತಾಬಾ ಖಮೇನಿ ಅವರ ಈ ವೀಡಿಯೊವನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ಆರೋಗ್ಯದ ಕುರಿತಾದ ಊಹಾಪೋಹಗಳಿಗೆ ಪ್ರತಿಕ್ರಿಯೆ: ಈ ಹಿಂದೆ, ಖಮೇನಿ "ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ" ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದ್ದವು. ಇರಾನ್‌ನೊಳಗಿನ ಮೂಲಗಳನ್ನು ಉಲ್ಲೇಖಿಸಿ 'ಚಾನೆಲ್ 14', ಹಾಗೂ 'ಇರಾನ್ ವೈರ್' ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರ ಆಡಳಿತಕ್ಕೆ ಹತ್ತಿರವಿರುವ ಮೂಲಗಳನ್ನು ಉಲ್ಲೇಖಿಸಿ 'ಜೆರುಸಲೆಮ್ ಪೋಸ್ಟ್' ಪ್ರಕಟಿಸಿದ್ದ ವರದಿಗಳ ಪ್ರಕಾರ, ಇರಾನ್‌ನ ನಾಯಕತ್ವದ ವಲಯದಲ್ಲಿ ಅವರ ಆರೋಗ್ಯದ ಬಗ್ಗೆ ಆತಂಕಗಳು ವ್ಯಕ್ತವಾಗಿದ್ದವು.
ISNA ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ , ಮೊಜ್ತಾಬಾ ಖಮೇನಿ ಅವರ ಆರೋಗ್ಯ ಸ್ಥಿತಿಯ ಕುರಿತಾದ ಊಹಾಪೋಹಗಳನ್ನು ತಳ್ಳಿಹಾಕಿದ್ದು, ಅವರು "ಸಂಪೂರ್ಣ ಆರೋಗ್ಯವಂತರಾಗಿದ್ದಾರೆ" ಎಂದು ಹೇಳಿದ್ದಾರೆ. ಏಳರಿಂದ ಎಂಟು ಗಂಟೆಗಳ ಕಾಲ ಕುಳಿತು ಚರ್ಚಿಸಬಲ್ಲ ವ್ಯಕ್ತಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲು ಸಾಧ್ಯವಿಲ್ಲ" ಎಂದು ಹೇಳಿದ ಅಧ್ಯಕ್ಷರು, ಆಗಸ್ಟ್ ಆರಂಭದಲ್ಲಿ ತಾವು ಖಮೇನಿ ಅವರೊಂದಿಗೆ "ಅತ್ಯುತ್ತಮ" ಸಭೆಯನ್ನು ನಡೆಸಿದ್ದನ್ನು ಉಲ್ಲೇಖಿಸಿದರು.
ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಖಮೇನಿ: ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಸೇನಾ ದಾಳಿಯಲ್ಲಿ ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ, ಮೊಜ್ತಾಬಾ ಖಮೇನಿ ಅವರು ಸರ್ವೋಚ್ಚ ನಾಯಕನ ಹುದ್ದೆಯನ್ನು ವಹಿಸಿಕೊಂಡಿದ್ದರು. ಈ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಮತ್ತು ಕೇವಲ ಲಿಖಿತ ಹೇಳಿಕೆಗಳ ಮೂಲಕವಷ್ಟೇ ಸಂವಹನ ನಡೆಸುತ್ತಿದ್ದಾರೆ.