

ಟೆಹ್ರಾನ್: ಇರಾನ್ ಸರ್ಕಾರದ ವಿರುದ್ದ ಜನಾಕ್ರೋಶ ಭುಗಿಲೆದಿದ್ದು, ಸುಮಾರು 13 ದಿನಗಳಿಂದ ಜನರಪು ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಇರಾನ್ ಸರ್ಕಾರ ದೇಶದಾದ್ಯಂತ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲು ಉದ್ವಿಗ್ನತೆ ತಣ್ಣಗಾಗಿಲ್ಲ.
ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಿರುವ ವರದಿಗಳು ಹೊರಬರುತ್ತಿವೆ.
ಸ್ಥಳೀಯ ವರದಿಗಳ ಪ್ರಕಾರ, ರಾಜಧಾನಿ ಟೆಹ್ರಾನ್‌ನ ವಿವಿಧ ಆಸ್ಪತ್ರೆಗಳಲ್ಲಿ ಕನಿಷ್ಠ 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಉತ್ತರ ಟೆಹ್ರಾನ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಭದ್ರತಾ ಪಡೆಗಳು ಏಕಾಏಕಿ ಗುಂಡಿನ ಮಳೆ ಸುರಿಸಿದ್ದು, 30ಕ್ಕೂ ಹೆಚ್ಚು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.
ಪ್ರತಿಭಟನೆ ವ್ಯಾಪಕವಾಗುತ್ತಿದ್ದಂತೆ, ಸರ್ಕಾರ ದೇಶಾದ್ಯಂತ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಹೋರಾಟಗಳು ಇನ್ನೂ ಮುಂದುವರೆದಿವೆ ಎಂದು ತಿಳಿದುಬಂದಿದೆ.
ಆರ್ಥಿಕತೆ ಕುಸಿತದಿಂದಾಗಿ ಡಿ.28ರಂದು ತೆಹ್ರಾನ್ ನಲ್ಲಿ ಆರಂಭವಾದ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ʼಸರ್ವಾಧಿಕಾರಿಗೆ ಸಾವಾಗಲಿʼ ಹಾಗೂ ಖಮೇನಿ ನಾಶವಾಗಲಲಿ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಈ ನಡುವೆ ಇರಾನ್ ಪ್ರತಿಭಟನಾಕಾರರನನ್ನು ಹಿಂಸಾತ್ಮಕವಾಗಿ ಕೊಂದರೆ ಅಮೆರಿಕಾ ಮಧ್ಯಪ್ರವೇಶಿಸಿ ಅವರ ರಕ್ಷಣೆಗೆ ಮುಂದಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆಯನ್ನು ನೀಡಿದ್ದು, ಯುದ್ದಕ್ಕೆ ಸಿದ್ದ ಎಂಬ ಸಂದೇಶ ನೀಡಿದ್ದಾರೆ.
ನಿನ್ನೆ ಹೇಳಿಕೆ ನೀಡಿದ್ದ ಇರಾನ್ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ, ಡೊನಾಲ್ಡ್ ಟ್ರಂಪ್ ವಿರುದ್ಧ ಕಿಡಿಕಾರಿದ್ದರು ನಿಮ್ಮ ದೇಶದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ, ಬೇರೆ ದೇಶಗಳ ಆಡಳಿತದಲ್ಲಿ ಕೈಹಾಕದಿರಿ ಎಂದು ಎಚ್ಚರಿಕೆ ನೀಡಿದ್ದರು.
ಇರಾನ್‌ನಲ್ಲಿ ವಿದೇಶಿ ಬೆಂಬಲಿತ ಪ್ರತಿಭಟನೆ ಅಥವಾ ಭಯೋತ್ಪಾದಕ ಏಜೆಂಟ್‌ಗಳನ್ನು ಸಹಿಸುವುದಿಲ್ಲ. ಕೆಲವು ಗಲಭೆಕೋರರು ಸರ್ಕಾರಿ ಆಸ್ತಿಗೆ ಹಾನಿ ಮಾಡುವ ಮೂಲಕ ಟ್ರಂಪ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇರಾನ್ ವಿದೇಶಿ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದರು.
ಇರಾನ್ ಯುವಕರು ದೇಶದ ಪರವಾಗಿ ಒಂದಾಗಿ ನಿಲ್ಲಬೇಕು. ಬಾಹ್ಯ ಒತ್ತಡಗಳಿಗೆ ಮಣಿಯದೆ ಏಕತೆಯನ್ನು ಕಾಪಾಡಿಕೊಳ್ಳಿ. ಮತ್ತು ಯಾವಾಗಲೂ ಯಾವುದೇ ಸ್ಥಿತಿ ಎದುರಿಸಲು ಸಿದ್ಧರಾಗಬೇಕು. ಏಕೆಂದರೆ ಒಗ್ಗಟ್ಟಿನ ಬಲ ಹೊಂದಿರುವ ಒಂದು ರಾಷ್ಟ್ರವು ಯಾವುದೇ ಶತ್ರು ದೇಶವನ್ನು ಸೋಲಿಸುವ ಶಕ್ತಿಯನ್ನು ಹೊಂದಿರುತ್ತದೆ ಎಂದು ಹೇಳುವ ಮೂಲಕ ಅವರು ಇರಾನಿನ ಯುವಕರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ.
ಅಮೆರಿಕನ್ ಅಧ್ಯಕ್ಷರ ಕೈಗಳು 1,000ಕ್ಕೂ ಹೆಚ್ಚು ಇರಾನಿಯನ್ನರ ರಕ್ತದ ಕಲೆಗಳಿಂದ ಕೂಡಿವೆ ಎಂದು ಹೇಳುವ ಮೂಲಕ, ಕಳೆದ ಜೂನ್ ತಿಂಗಳಲ್ಲಿ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ. ಅಮೆರಿಕ ನಡೆಸಿದ್ದ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಇರಾನಿ ಜನರು ಸಾವಿಗೀಡಾಗಿದ್ದರು.
ಪ್ರತಿಭಟನಕಾರರು ಅಮೆರಿಕದ ಅಧ್ಯಕ್ಷರನ್ನು ಸಂತೃಪ್ತಿಗೊಳಿಸಲು ಬಯಸಿದ್ದಾರೆ. ಆತನಿಗೆ ತನ್ನ ದೇಶವನ್ನು ಹೇಗೆ ಮುನ್ನಡೆಸಬೇಕೆಂದು ತಿಳಿದಿದ್ದರೆ, ಅದೇ ಕೆಲಸವನ್ನು ಮಾಡುತ್ತಿದ್ದರು. ಅಲ್ಲಿಯೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ತಿಳಿಸಿದ್ದಾರೆ.
Advertisement