

ವಾಷಿಂಗ್ಟನ್: ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕಿದ ಬಳಿಕ ಇರಾನ್ ಮಾತುಕತೆಗೆ ಮನವಿ ಮಾಡಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಹೇಳಿದ್ದಾರೆ.
ಇರಾನ್‌ನಲ್ಲಿ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಹತ್ಯಾಕಾಂಡವಾಗಿ ಮಾರ್ಪಟ್ಟಿದೆ ಎಂದು ಮಾನವ ಹಕ್ಕು ಸಂಘಟನೆಗಳು ಎಚ್ಚರಿಸಿವೆ. ಆದಾಗ್ಯೂ, ಪ್ರತಿಭಟನೆಗಳು ತೀವ್ರಗೊಂಡಿವೆ.ಹಣದುಬ್ಬರ, ಏರುತ್ತಿರುವ ಜೀವನ ವೆಚ್ಚದ ವಿರುದ್ಧ ಆರಂಭವಾದ ಪ್ರತಿಭಟನೆಗಳು, ಹಿಂಸಾಚಾರಕ್ಕೆ ತಿರುಗಿವೆ.
ಈ ನಡುವೆ ಪ್ರತಿಭಟನೆಯನ್ನು ಹತ್ತಿಕ್ಕಲು ಇಂಟರ್ನೆಟ್ ಸೇವೆ ಹಾಗೂ ವಿದ್ಯುತ್ ಕಡಿತ ಸೇರಿದಂತೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಅಲ್ಲಿನ ಸರ್ಕಾರ ಮಾಡಿದೆ. ಆದಾಗ್ಯೂ, ಪ್ರತಿಭಟನೆಯ ಕಾವು ಏರುತ್ತಲೇ ಇದೆ.
ರಾಜಧಾನಿ ಟೆಹ್ರಾನ್ ಹಾಗೂ ಇತರ ನಗರಗಳಲ್ಲಿ ಪ್ರತಿಭಟನೆಗಳು ತಾರಕಕ್ಕೇರಿದ್ದು, ಹಿಂಸಾಚಾರದ ವೇಳೆ, 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದರಲ್ಲಿ, 40 ಮಂದಿ ಭದ್ರತಾ ಸಿಬ್ಬಂದಿಗಳೇ ಇದ್ದಾರೆಂದು ಹೇಳಲಾಗುತ್ತಿದೆ.
ಈ ಬೆಳವಣಿಗೆ ನಡುವೆ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಅವರು, ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶ ಮಾಡುವುದಾಗಿ ಪದೇ ಪದೆ ಬೆದರಿಕೆ ಹಾಕಲಾಗಿದ್ದು, ಇದರ ಬೆನ್ನಲ್ಲೇ ಇರಾನ್ ಮಾತುಕತೆಗೆ ಮುಂದಾಗಿದೆ ಎಂದು ಹೇಳಿದ್ದಾರೆ.
ಇರಾನ್ ನಾಯಕರು ಕರೆ ಮಾಡಿದ್ದರು. ಸಭೆಗೆ ಸಿದ್ಧತೆ ನಡೆಯುತ್ತಿದೆ. ಅವರಿಗೆ ಸಂಧಾನ ಬೇಕಿದೆ. ಆದರೆ, ಸಭೆಗೂ ಮುನ್ನವೇ ನಾವು ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ತಿಳಿಸಿದ್ದಾರೆ.
Advertisement