Hormuz ಸಂಘರ್ಷ ತೀವ್ರ: Iran ಮೇಲೆ ಅಮೆರಿಕಾ ಭೀಕರ ವಾಯುದಾಳಿ; ಪ್ರತೀಕಾರವಾಗಿ ಕತಾರ್ ಮೇಲೆ Tehran ಕ್ಷಿಪಣಿ ದಾಳಿ

ಇದಕ್ಕೆ ಪ್ರತಿಯಾಗಿ ಇರಾನ್, ಪರ್ಷಿಯನ್ ಕೊಲ್ಲಿಯಲ್ಲಿರುವ ಕತಾರ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದ್ದು, ಇಡೀ ಪಶ್ಚಿಮ ಏಷ್ಯಾ ವಲಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ.
This screen grab made on July 15, 2026, from a handout video released by US Central Command.
ಇರಾನ್ ಮೇಲೆ ಅಮೆರಿಕಾ ದಾಳಿ ನಡೆಸಿರುವುದು.
Updated on

ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕ ಮತ್ತಷ್ಟು ತೀವ್ರಗೊಳಿಸಿದೆ. ಸತತ ಆರನೇ ರಾತ್ರಿಯೂ ಅಮೆರಿಕ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.

ಇದಕ್ಕೆ ಪ್ರತಿಯಾಗಿ ಇರಾನ್, ಪರ್ಷಿಯನ್ ಕೊಲ್ಲಿಯಲ್ಲಿರುವ ಕತಾರ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದ್ದು, ಇಡೀ ಪಶ್ಚಿಮ ಏಷ್ಯಾ ವಲಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ.

ಕಳೆದ ತಿಂಗಳು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮ ಸಂಪೂರ್ಣವಾಗಿ ಮುರಿದುಬಿದ್ದ ಬೆನ್ನಲ್ಲೇ ಈ ಸಂಘರ್ಷ ತಾರಕಕ್ಕೇರಿದೆ.

ಇರಾನ್‌ನ ನಾಗರಿಕ ಮತ್ತು ಮಿಲಿಟರಿ ಸಾರಿಗೆ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಈ ದಾಳಿ ನಡೆಸಲಾಗಿದೆ.

ಶುಕ್ರವಾರ ಮುಂಜಾನೆ ಇರಾನ್‌ನ ಹಲವು ಮೂಲಸೌಕರ್ಯಗಳ ಮೇಲೆ, ವಿಶೇಷವಾಗಿ ಸೇತುವೆಗಳ ಮೇಲೆ ಅಮೆರಿಕಾ ದಾಳಿ ನಡೆಸಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೆ ಪ್ರತಿಯಾಗಿ ಇರಾನ್, ಅಮೆರಿಕದ ಮಿತ್ರ ರಾಷ್ಟ್ರಗಳಾದ ಕತಾರ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ದೇಶಗಳ ಮೇಲೆ ಹೊಸ ಕ್ಷಿಪಣಿ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಕತಾರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಗಳನ್ನು ಹೊಡೆದುರುಳಿಸಿದ ವೇಳೆ ಬಿದ್ದ ಅವಶೇಷಗಳಿಂದ ಒಂದು ಮಗು ಗಾಯಗೊಂಡಿದೆ ಎಂದು ಅಲ್ಲಿನ ಗೃಹ ಸಚಿವಾಲಯ ತಿಳಿಸಿದೆ.

ಮುರಿದು ಬಿದ್ದ ಕದನ ವಿರಾಮ

ಕಳೆದ ತಿಂಗಳು ಜಾರಿಯಾಗಿದ್ದ ತಾತ್ಕಾಲಿಕ ಕದನ ವಿರಾಮ ಸಂಪೂರ್ಣವಾಗಿ ಮುರಿದುಬಿದ್ದಿದ್ದು, ಕಳೆದ ಆರು ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ. ಹಾರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಎರಡೂ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿದೆ.

ಇರಾನ್ ಅಧಿಕಾರಿಗಳ ಪ್ರಕಾರ, ಅಮೆರಿಕದ ದಾಳಿಯಲ್ಲಿ ಇದುವರೆಗೆ 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರದ ದಾಳಿಯಲ್ಲೂ ಹೊಸ ಸಾವುನೋವುಗಳು ವರದಿಯಾಗಿವೆ.

This screen grab made on July 15, 2026, from a handout video released by US Central Command.
ನೌಕಾ ದಿಗ್ಬಂಧನ ಉಲ್ಲಂಘನೆ: ಇರಾನ್‌ಗೆ ತೆರಳುತ್ತಿದ್ದ 3 ಹಡಗುಗಳಿಗೆ ಅಮೆರಿಕಾ ತಡೆ, 1 ಹಡಗು ವಶಕ್ಕೆ..!

ಇರಾನ್ ಸೇತುವೆಗಳೇ ಅಮೆರಿಕಾ ಗುರಿ

ಶುಕ್ರವಾರ ಬೆಳಗಿನ ಜಾವ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ದಕ್ಷಿಣ ಭಾಗದ ಹೋರ್ಮೊಜ್ಗಾನ್ ಪ್ರಾಂತ್ಯದ ಬಂದರ್ ಖಮೀರ್ ನಗರದಲ್ಲಿನ ಪ್ರಮುಖ ಸೇತುವೆಗಳು ಗುರಿಯಾಗಿವೆ. ಈ ಪ್ರದೇಶ ಹಾರ್ಮುಜ್ ಜಲಸಂಧಿಯ ತೀರದಲ್ಲಿದೆ.

ಅಮೆರಿಕದ ಕೇಂದ್ರೀಯ ಕಮಾಂಡ್ (CENTCOM) ಪ್ರಕಾರ, ಆರನೇ ದಿನದ ಕಾರ್ಯಾಚರಣೆಯಲ್ಲಿ ಡಜನ್‌ಗಟ್ಟಲೆ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ.

ಇದೇ ವೇಳೆ, ಗುರುವಾರ ಅಮೆರಿಕದ ದಾಳಿಗಳು ಟೆಹ್ರಾನ್ ಹಾಗೂ ಇರಾನ್‌ನ ಕ್ಷಿಪಣಿ ಉತ್ಪಾದನೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಪ್ರಮುಖವಾದ ಸೆಮ್ನಾನ್ ಪ್ರಾಂತ್ಯಕ್ಕೂ ವಿಸ್ತರಿಸಿದ್ದವು ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

ಇರಾನ್ ಕ್ಷಿಪಣಿ ದಾಳಿ ಹಿನ್ನೆಲೆಯಲ್ಲಿ ಕತಾರ್ ಸರ್ಕಾರ ಜನರಿಗೆ ಎರಡು ಬಾರಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿತು. ಆಕಾಶದಲ್ಲಿ ಭಾರೀ ಸ್ಫೋಟಗಳು ಕೇಳಿಬಂದಿದ್ದು, ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಗಳನ್ನು ಹೊಡೆದುರುಳಿಸಿದವು.

ಇರಾನ್ ಯುದ್ಧಕ್ಕೆ ಅಂತ್ಯ ಹಾಡುವ ಪ್ರಯತ್ನದಲ್ಲಿ ಕತಾರ್ ಪ್ರಮುಖ ಮಧ್ಯವರ್ತಿಯಾಗಿದ್ದರೂ, ಹಾರ್ಮುಜ್ ಜಲಸಂಧಿ ವಿವಾದದಿಂದ ಮಾತುಕತೆಗಳು ಸ್ಥಗಿತಗೊಂಡಿವೆ.

ಹಾರ್ಮುಜ್ ಹಿಡಿತಕ್ಕಾಗಿ ಸಂಘರ್ಷ

ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಐದನೇ ಒಂದು ಭಾಗ ಸಾಮಾನ್ಯವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಇರಾನ್ ಮೇಲಿನ ಒತ್ತಡ ಹೆಚ್ಚಿಸಲು ಅಮೆರಿಕ ವಿದ್ಯುತ್ ಘಟಕಗಳು, ಸೇತುವೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದೆ.

ಇರಾನ್‌ನ ಕಚ್ಚಾ ತೈಲ ರಫ್ತು ತಡೆಯಲು ಅಮೆರಿಕ ಮತ್ತೆ ಇರಾನ್ ಬಂದರುಗಳ ವಿರುದ್ಧ ನೌಕಾ ದಿಗ್ಬಂಧನ ಜಾರಿಗೊಳಿಸಿದೆ.

ಸಮುದ್ರ ಸಾಗಣೆ ಸಂಸ್ಥೆ ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಪ್ರಕಾರ, ತಿಂಗಳ ಆರಂಭದಲ್ಲೇ ಹೋರ್ಮುಜ್ ಜಲಸಂಧಿಯ ಮೂಲಕ ಸಾಗುವ ಸರಕು ಸಾಗಣೆ ಸುಮಾರು ಶೇ.25ರಷ್ಟು ಕುಸಿದಿದೆ. ಇತ್ತೀಚಿನ ದಾಳಿ-ಪ್ರತಿದಾಳಿಗಳ ನಂತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.

ಅಪಾಯದ ಹಿನ್ನೆಲೆಯಲ್ಲಿ ಹಲವು ತೈಲ ಸಾಗಣೆ ಹಡಗುಗಳು ತಮ್ಮ ಸ್ಥಳ ಮಾಹಿತಿ ಪ್ರಸಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಸಂಚರಿಸುತ್ತಿದ್ದು, ಇನ್ನೂ ಕೆಲವು ಹಡಗುಗಳು ಸುರಕ್ಷತೆ ದೃಷ್ಟಿಯಿಂದ ಸಮುದ್ರದಲ್ಲೇ ನಿಂತಿವೆ.

ಅಮೆರಿಕದ ಸೆಂಟ್‌ಕಾಮ್ ಪ್ರಕಾರ, ನೌಕಾ ದಿಗ್ಬಂಧನ ಉಲ್ಲಂಘಿಸಲು ಯತ್ನಿಸಿದ್ದ ಮೂರು ವಾಣಿಜ್ಯ ಹಡಗುಗಳ ದಾರಿಯನ್ನು ಬದಲಾಯಿಸಲಾಗಿದೆ. ಆದೇಶ ಪಾಲಿಸದ ಒಂದು ಹಡಗನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಮತ್ತೊಂದು ಹಡಗನ್ನು ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com