ಟ್ರಂಪ್ ಒತ್ತಡಕ್ಕೆ ಮಣಿದ ನೆತನ್ಯಾಹು; ಲೆಬನಾನ್ ಮೇಲಿನ ದಾಳಿಗೆ ಬ್ರೇಕ್, ಸಂಘರ್ಷ ನಿಲ್ಲಿಸಲು ಇಸ್ರೇಲ್-ಹಿಜ್ಬುಲ್ಲಾ ಸಮ್ಮತಿ..!

ಇಸ್ರೇಲ್-ಹಿಜ್ಬುಲ್ಲಾ ನಡುವಿನ ದಾಳಿಗಳನ್ನು ನಿಲ್ಲಿಸುವ ಕುರಿತು ಒಪ್ಪಂದಕ್ಕೆ ಬರಲಾಗಿದೆ ಎಂದು ಟ್ರಂಪ್ ಹೇಳಿದ್ದು, ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಹಾಗೂ ಮಧ್ಯವರ್ತಿಗಳ ಮೂಲಕ ಹಿಜ್ಬುಲ್ಲಾಗೆ ಸಂದೇಶ ರವಾನಿಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಹೇಳಿದ್ದಾರೆ.
File photo
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್: ಲೆಬನಾನ್‌ನಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಆತಂಕದ ನಡುವೆಯೇ ಮಧ್ಯಪ್ರಾಚ್ಯ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮಧ್ಯಸ್ಥಿಕೆಯ ಬಳಿಕ ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘರ್ಷವನ್ನು ನಿಲ್ಲಿಸಲು ಒಪ್ಪಿಗೆ ನೀಡಿವೆ ಎಂದು ತಿಳಿದುಬಂದಿದೆ.

ಲೆಬನಾನ್ ಮೇಲೆ ಮತ್ತಷ್ಟು ದಾಳಿ ನಡೆಸಲು ಸಜ್ಜಾಗಿದ್ದ ಇಸ್ರೇಲ್ ತನ್ನ ಯೋಜನೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಉಭಯ ರಾಷ್ಟ್ರಗಳು ದಾಳಿಗಳನ್ನು ನಿಲ್ಲಿಸಲು ಒಪ್ಪಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಯುದ್ಧದ ಭೀತಿಯನ್ನು ಸದ್ಯಕ್ಕೆ ತಗ್ಗಿಸಿದಂತಾಗಿದೆ.

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ದಾಳಿಗಳನ್ನು ನಿಲ್ಲಿಸುವ ಕುರಿತು ಒಪ್ಪಂದಕ್ಕೆ ಬರಲಾಗಿದೆ ಎಂದು ಟ್ರಂಪ್ ಅವರು ಹೇಳಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಹಾಗೂ ಮಧ್ಯವರ್ತಿಗಳ ಮೂಲಕ ಹಿಜ್ಬುಲ್ಲಾಗೆ ಸಂದೇಶ ರವಾನಿಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಇಸ್ರೇಲ್ ಬೈರೂತ್ ಕಡೆಗೆ ಯಾವುದೇ ಸೈನಿಕರನ್ನು ಕಳುಹಿಸುವುದಿಲ್ಲ. ಈಗಾಗಲೇ ತೆರಳುತ್ತಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಲಾಗಿದೆ. ಹಿಜ್ಬುಲ್ಲಾ ಕೂಡ ಎಲ್ಲಾ ರೀತಿಯ ಗುಂಡಿನ ದಾಳಿಗಳನ್ನು ನಿಲ್ಲಿಸಲು ಒಪ್ಪಿದೆ. ಇಸ್ರೇಲ್ ದಾಳಿ ನಡೆಸುವುದಿಲ್ಲ ಮತ್ತು ಹಿಜ್ಬುಲ್ಲಾ ಕೂಡ ಪ್ರತಿದಾಳಿ ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ.

ಆದರೆ ಟ್ರಂಪ್ ಈ ಘೋಷಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಉತ್ತರ ಇಸ್ರೇಲ್ ಭಾಗದಲ್ಲಿ ಲೆಬನಾನ್‌ನಿಂದ ಕ್ಷಿಪಣಿಗಳು ಉಡಾವಣೆಯಾದ ಬಗ್ಗೆ ವರದಿಯಾಗಿದೆ.

ಇದರಿಂದಾಗಿ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಇಸ್ರೇಲ್ ಸೇನೆ ಉತ್ತರ ಭಾಗದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಎಚ್ಚರಿಕೆ ನೀಡಿದೆ.

File photo
ಲೆಬನಾನ್ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಸ್ಫೋಟ, 'ನಾನಿಲ್ಲದಿದ್ದರೆ ಜೈಲಿನಲ್ಲಿರುತ್ತಿದ್ದೆ'; ನೆತನ್ಯಾಹು ವಿರುದ್ಧ ಗುಡುಗಿದ ಟ್ರಂಪ್

ರೂಬಿಯೊ ಪ್ರಸ್ತಾವನೆಗೆ ಒಪ್ಪಿಗೆ

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಮಂಡಿಸಿದ್ದ ಪ್ರಸ್ತಾವನೆಯನ್ನು ಲೆಬನಾನ್ ಸರ್ಕಾರ ಹಾಗೂ ಹಿಜ್ಬುಲ್ಲಾ ಒಪ್ಪಿಕೊಂಡಿವೆ ಎಂದು ಅಮೆರಿಕದಲ್ಲಿರುವ ಲೆಬನಾನ್ ರಾಯಭಾರ ಕಚೇರಿ ತಿಳಿಸಿದೆ.

ಈ ಪ್ರಸ್ತಾವನೆಯ ಪ್ರಕಾರ ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ದಾಳಿ ನಡೆಸಬಾರದು ಮತ್ತು ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ ಮಾಡಬಾರದು ಎಂಬ ಷರತ್ತುಗಳನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.

ಟ್ರಂಪ್ ಈ ಕುರಿತು ಲೆಬನಾನ್ ರಾಯಭಾರಿ ನಡಾ ಹಮಾದೆ ಮೊವಾಡ್ ಅವರೊಂದಿಗೆ ಮಾತುಕತೆ ನಡೆಸಿದ್ದು, ನೆತನ್ಯಾಹು ಕೂಡ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿರುವುದಾಗಿ ರಾಯಭಾರ ಕಚೇರಿ ಹೇಳಿದೆ. ಆದರೆ, ಹಿಜ್ಬುಲ್ಲಾ ಕಡೆಯಿಂದ ಈವರೆಗೆ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ವಾಷಿಂಗ್ಟನ್‌ನಲ್ಲಿ ಮಹತ್ವದ ಮಾತುಕತೆ

ಈ ಬೆಳವಣಿಗೆಗಳ ನಡುವೆ ಇಸ್ರೇಲ್ ಮತ್ತು ಲೆಬನಾನ್ ಪ್ರತಿನಿಧಿಗಳ ನಡುವೆ ವಾಷಿಂಗ್ಟನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಮಹತ್ವದ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಲೆಬನಾನ್ ಪ್ರತಿನಿಧಿಗಳು ದೇಶದ ವಿವಿಧ ಭಾಗಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಕುರಿತು ಒಪ್ಪಂದ ಸಾಧಿಸಲು ಪ್ರಯತ್ನ ನಡೆಸಲಿದ್ದಾರೆ. ಅಂತಿಮವಾಗಿ ಪೂರ್ಣ ಪ್ರಮಾಣದ ಕದನ ವಿರಾಮ ಜಾರಿಗೆ ತರಬೇಕೆಂಬುದು ಅವರ ಉದ್ದೇಶವಾಗಿದೆ.

ಬೈರೂತ್ ಉಪನಗರಗಳ ಮೇಲೆ ದಾಳಿ ಆದೇಶ

ಟ್ರಂಪ್ ಅವರ ಘೋಷಣೆಗೂ ಮುನ್ನ ಇಸ್ರೇಲ್ ಸರ್ಕಾರ ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ನಡೆಸಲು ಆದೇಶ ನೀಡಿತ್ತು. ಹಿಜ್ಬುಲ್ಲಾ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ಇಸ್ರೇಲ್ ನಗರಗಳು ಹಾಗೂ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಹಿಜ್ಬುಲ್ಲಾ ನೆಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು.

ಇಸ್ರೇಲ್ ಸೇನೆಯ ಅರೇಬಿಕ್ ಭಾಷಾ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿ, ಬೈರೂತ್‌ನ ದಕ್ಷಿಣ ಉಪನಗರ ಪ್ರದೇಶದ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದರು. ಹಿಜ್ಬುಲ್ಲಾ ದಾಳಿಗಳನ್ನು ಮುಂದುವರಿಸಿದರೆ ದಹಿಯೆ ಪ್ರದೇಶದ ಮೇಲೆ ವ್ಯಾಪಕ ದಾಳಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದರು.

File photo
'ಶತ್ರುವಿನ ಮಾತು, ಭರವಸೆ ನಂಬಲ್ಲ'; ಇರಾನಿಯರ ಹಕ್ಕು ಸಂಪೂರ್ಣ ಖಚಿತವಾಗದಿದ್ದರೆ ಅಮೆರಿಕ ಜೊತೆ ಒಪ್ಪಂದ ಇಲ್ಲ: ಇರಾನ್‌ ಸಂಧಾನಕಾರ

ಭಯದಿಂದ ಸಾವಿರಾರು ಜನರ ವಲಸೆ

ಈ ಎಚ್ಚರಿಕೆಯ ನಂತರ ಬೈರೂತ್‌ನ ದಕ್ಷಿಣ ಭಾಗದಲ್ಲಿರುವ ಸಾವಿರಾರು ನಿವಾಸಿಗಳು ಪ್ರದೇಶ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದರು. ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಉಂಟಾಗಿದ್ದು, ಜನರು ಕುಟುಂಬ ಸಮೇತರಾಗಿ ಬೇರೆ ಪ್ರದೇಶಗಳಿಗೆ ತೆರಳುತ್ತಿರುವ ದೃಶ್ಯಗಳು ಕಂಡುಬಂದವು.

ರಾತ್ರಿ ಪೂರ್ತಿ ಗುಂಡಿನ ಕಾಳಗ

ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ನಬಾತಿಯೆ ನಗರದ ಸಮೀಪದ ಗ್ರಾಮವೊಂದರಲ್ಲಿ ಸಿರಿಯನ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಟೈರ್ ನಗರದಲ್ಲಿರುವ ಜಬಲ್ ಅಮೆಲ್ ಆಸ್ಪತ್ರೆಯ ಮೇಲೂ ದಾಳಿ ನಡೆದಿದ್ದು, ಕಟ್ಟಡಕ್ಕೆ ಭಾರೀ ಹಾನಿಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮತ್ತೊಂದೆಡೆ, ಲೆಬನಾನ್‌ನಿಂದ ಉಡಾವಣೆಯಾದ ಎರಡು ಕ್ಷಿಪಣಿಗಳನ್ನು ತನ್ನ ವಾಯುಪಡೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಹಿಜ್ಬುಲ್ಲಾ ಕೂಡ ಉತ್ತರ ಇಸ್ರೇಲ್ ಪ್ರದೇಶಗಳ ಮೇಲೆ ರಾಕೆಟ್ ಹಾಗೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಈ ಸಂಘರ್ಷ ಈಗ ಕೇವಲ ಇಸ್ರೇಲ್-ಹಿಜ್ಬುಲ್ಲಾ ನಡುವಿನ ಸಮಸ್ಯೆಯಾಗಿಲ್ಲ. ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಗಳ ಮೇಲೂ ಇದರ ಪರಿಣಾಮ ಬೀಳುತ್ತಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಅಮೆರಿಕ-ಇರಾನ್ ನಡುವೆ ಯಾವುದೇ ಕದನ ವಿರಾಮ ಒಪ್ಪಂದವಾದರೂ ಅದು ಲೆಬನಾನ್ ಸೇರಿದಂತೆ ಎಲ್ಲಾ ಪ್ರದೇಶಗಳಿಗೂ ಅನ್ವಯಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

"ಒಂದು ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆಯಾದರೆ, ಅದನ್ನು ಎಲ್ಲ ಪ್ರದೇಶಗಳಲ್ಲಿಯೂ ಉಲ್ಲಂಘನೆಯಾಗಿಯೇ ಪರಿಗಣಿಸಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿರುವ ಸಂದರ್ಭದಲ್ಲಿ, ಟ್ರಂಪ್ ಘೋಷಿಸಿರುವ ಈ ತಾತ್ಕಾಲಿಕ ಒಪ್ಪಂದ ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದು ಈಗ ಜಾಗತಿಕ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com