ಲೆಬನಾನ್ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಸ್ಫೋಟ, 'ನಾನಿಲ್ಲದಿದ್ದರೆ ಜೈಲಿನಲ್ಲಿರುತ್ತಿದ್ದೆ'; ನೆತನ್ಯಾಹು ವಿರುದ್ಧ ಗುಡುಗಿದ ಟ್ರಂಪ್

ಲೆಬನಾನ್‌ನಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ತೀವ್ರಗೊಳ್ಳುತ್ತಿರುವ ನಡುವಲ್ಲೇ ಟ್ರಂಪ್ ಹಾಗೂ ನೆತನ್ಯಾಹು ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದ್ದು, ಈ ವೇಳೆ ನೆತನ್ಯಾಹು ವಿರುದ್ಧ ಟ್ರಂಪ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
US President Donald Trump with Israel's Prime Minister Benjamin Netanyahu
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿದಿರುವ ನಡುವೆಯೇ ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಬಿರುಕು ಮೂಡಿರುವ ಲಕ್ಷಣಗಳು ಗೋಚರಿಸುತ್ತಿವೆ.

ಲೆಬನಾನ್‌ನಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ತೀವ್ರಗೊಳ್ಳುತ್ತಿರುವ ನಡುವಲ್ಲೇ ಟ್ರಂಪ್ ಹಾಗೂ ನೆತನ್ಯಾಹು ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದ್ದು, ಈ ವೇಳೆ ನೆತನ್ಯಾಹು ವಿರುದ್ಧ ಟ್ರಂಪ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರ ಸಂಘಟನೆಯ ವಿರುದ್ಧ ಇಸ್ರೇಲ್ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿರುವ ಹಿಜ್ಬುಲ್ಲಾ ನಿಯಂತ್ರಿತ ಪ್ರದೇಶಗಳ ಮೇಲೆ ವಾಯುದಾಳಿ ನಡೆಸಲು ಹಾಗೂ ದಕ್ಷಿಣ ಲೆಬನಾನ್‌ನಲ್ಲಿ ಭೂ ಕಾರ್ಯಾಚರಣೆಯನ್ನು ವಿಸ್ತರಿಸಲು ಇಸ್ರೇಲ್ ಸರ್ಕಾರ ನಿರ್ಧರಿಸಿತ್ತು. ಈ ಬೆಳವಣಿಗೆ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಅದೇ ಸಮಯದಲ್ಲಿ ಅಮೆರಿಕವು ಇರಾನ್ ಜೊತೆ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ಶಾಂತಿ ಮಾತುಕತೆಗಳನ್ನು ನಡೆಸುತ್ತಿತ್ತು. ಇರಾನ್ ಬೆಂಬಲಿತ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ವ್ಯಾಪಕ ದಾಳಿಗಳು ಈ ರಾಜತಾಂತ್ರಿಕ ಪ್ರಯತ್ನಗಳನ್ನು ಹಾಳುಮಾಡಬಹುದು ಎಂಬ ಆತಂಕ ಅಮೆರಿಕ ಆಡಳಿತದಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಟ್ರಂಪ್ ನೆತನ್ಯಾಹು ಜೊತೆ ನೇರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಅಮೆರಿಕಾದ ಅಧಿಕಾರಿಗಳ ಮಾಹಿತಿ ಪ್ರಕಾರ, ದೂರವಾಣಿ ಸಂಭಾಷಣೆಯ ವೇಳೆ ಟ್ರಂಪ್ ಅತ್ಯಂತ ಕೋಪಗೊಂಡಿದ್ದರು. ಇಸ್ರೇಲ್‌ನ ಕ್ರಮಗಳು ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತ್ಯೇಕಗೊಳಿಸುತ್ತಿವೆ ಮತ್ತು ಅಮೆರಿಕದ ಹಿತಾಸಕ್ತಿಗಳಿಗೂ ಹಾನಿ ಉಂಟುಮಾಡುತ್ತಿವೆ ಎಂದು ನೆತನ್ಯಾಹುಗೆ ಖಡಕ್ ಎಚ್ಚರಿಕೆ ನೀಡಿದ್ದಾರೆಂದು ಹೇಳಿದ್ದಾರೆ.

“ನೀನು ಸಂಪೂರ್ಣ ಹುಚ್ಚನಂತೆ ವರ್ತಿಸುತ್ತಿದ್ದೀಯ. ನಾನು ಇರದೇ ಇದ್ದರೆ ಈಗಾಗಲೇ ಜೈಲಿನಲ್ಲಿರುತ್ತಿದ್ದೆ. ನಿನ್ನನ್ನು ನಾನು ಉಳಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ನಿನ್ನ ಕ್ರಮಗಳಿಂದ ಇಸ್ರೇಲ್ ಮೇಲಿನ ಜಾಗತಿಕ ಬೆಂಬಲವೂ ಕುಸಿಯುತ್ತಿದೆ” ಎಂದು ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ.

US President Donald Trump with Israel's Prime Minister Benjamin Netanyahu
ಹೃದಯ ವಿದ್ರಾವಕ ಘಟನೆ: ಹನಿಮೂನ್‌ಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್‌ ಪತನ; ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತ್ನಿ ಮಡಿಲಲ್ಲೇ ಪ್ರಾಣಬಿಟ್ಟ ಪೈಲಟ್!

ಮಾತುಕತೆಯ ವೇಳೆ ಒಂದು ಹಂತದಲ್ಲಿ ಟ್ರಂಪ್ ಧ್ವನಿ ಏರಿಸಿ “ನೀನು ಏನು ಮಾಡುತ್ತಿದ್ದೀಯ?” ಎಂದು ಪ್ರಶ್ನಿಸಿದ್ದಾರೆಂದು ಮೂಲಗಳು ತಿಳಿಸಿವೆ. ನೆತನ್ಯಾಹು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಅಂತರರಾಷ್ಟ್ರೀಯ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಇಸ್ರೇಲ್ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ, ಹಿಜ್ಬುಲ್ಲಾ ನಿರಂತರವಾಗಿ ರಾಕೆಟ್ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿರುವ ಕಾರಣ ಪ್ರತಿಕ್ರಿಯಿಸುವುದು ಅನಿವಾರ್ಯವಾಗಿದೆ ಎಂದು ಅಮೆರಿಕಕ್ಕೆ ತಿಳಿಸಿದೆ. ಆದರೆ, ಟ್ರಂಪ್ ಆಡಳಿತದ ಕೆಲವು ಅಧಿಕಾರಿಗಳ ಪ್ರಕಾರ, ಹಿಜ್ಬುಲ್ಲಾ ದಾಳಿಗಳಿಗೆ ಪ್ರತಿಕ್ರಿಯೆ ಅಗತ್ಯವಿದ್ದರೂ ಇಸ್ರೇಲ್ ಕೈಗೊಂಡಿರುವ ಕ್ರಮಗಳು ಪ್ರಮಾಣ ಮೀರುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಶೇಷವಾಗಿ ನಾಗರಿಕರ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಮತ್ತು ಒಂದು ಗುರಿಯನ್ನು ಹೊಡೆಯಲು ವ್ಯಾಪಕ ಪ್ರಮಾಣದ ವಾಯುದಾಳಿಗಳನ್ನು ನಡೆಸುತ್ತಿರುವುದು ಅಮೆರಿಕಾದ ಕಳವಳಕ್ಕೆ ಕಾರಣವಾಗಿದೆ.

ಈ ಕಠಿಣ ಮಾತುಕತೆಯ ಬಳಿಕ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಬದಲಾವಣೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಬೈರೂತ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಕೆಲವು ದಾಳಿಗಳನ್ನು ಇಸ್ರೇಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿಸಿವೆ.

ಇದರ ಬೆನ್ನಲ್ಲೇ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ತಾವು ನೆತನ್ಯಾಹು ಜೊತೆ “ಅತ್ಯಂತ ಫಲಪ್ರದ” ಮಾತುಕತೆ ನಡೆಸಿರುವುದಾಗಿ ಬರೆದುಕೊಂಡು, ಬೈರೂತ್ ಕಡೆಗೆ ಸಾಗುತ್ತಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಹಿಜ್ಬುಲ್ಲಾ ಕೂಡ ಮಧ್ಯವರ್ತಿಗಳ ಮೂಲಕ ಇಸ್ರೇಲ್ ಮೇಲಿನ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಮ್ಮತಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಈ ಹೇಳಿಕೆಗೆ ಸಂಬಂಧಿಸಿದಂತೆ ಹಿಜ್ಬುಲ್ಲಾ ಅಥವಾ ಲೆಬನಾನ್ ಅಧಿಕಾರಿಗಳಿಂದ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಮತ್ತೊಂದೆಡೆ ನೆತನ್ಯಾಹು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ತನ್ನ ಭದ್ರತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತದೆ ಎಂದು ಹೇಳಿರುವ ಅವರು, ಹಿಜ್ಬುಲ್ಲಾ ದಾಳಿಗಳನ್ನು ನಿಲ್ಲಿಸದಿದ್ದರೆ ಲೆಬನಾನ್‌ನಲ್ಲಿನ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಗತ್ಯವಿದ್ದರೆ ಬೈರೂತ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೂ ಮತ್ತೆ ದಾಳಿ ನಡೆಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ.

ರಾಜಕೀಯ ವಿಶ್ಲೇಷಕರ ಪ್ರಕಾರ, ಟ್ರಂಪ್ ಮತ್ತು ನೆತನ್ಯಾಹು ನಡುವಿನ ಈ ಭಿನ್ನಾಭಿಪ್ರಾಯ ಕೇವಲ ಲೆಬನಾನ್ ವಿಷಯಕ್ಕೆ ಸೀಮಿತವಾಗಿಲ್ಲ. ಅಮೆರಿಕ-ಇರಾನ್ ಮಾತುಕತೆಗಳು, ಗಾಜಾ ಯುದ್ಧದ ಪರಿಣಾಮಗಳು, ಜಾಗತಿಕ ಮಟ್ಟದಲ್ಲಿ ಇಸ್ರೇಲ್ ಎದುರಿಸುತ್ತಿರುವ ಟೀಕೆಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಸೇರಿದಂತೆ ಹಲವು ಅಂಶಗಳು ಇದರ ಹಿಂದೆ ಕೆಲಸ ಮಾಡುತ್ತಿವೆ.

ಟ್ರಂಪ್ ಆಡಳಿತ ಇರಾನ್ ಜೊತೆಗಿನ ಮಾತುಕತೆಗಳನ್ನು ಮುಂದುವರಿಸಲು ಬಯಸುತ್ತಿರುವ ಸಂದರ್ಭದಲ್ಲಿ, ನೆತನ್ಯಾಹು ಮಾತ್ರ ಇರಾನ್ ಬೆಂಬಲಿತ ಗುಂಪುಗಳ ವಿರುದ್ಧ ಕಠಿಣ ಸೇನಾ ಕ್ರಮಗಳನ್ನೇ ಮುಂದುವರಿಸಲು ಬದ್ಧರಾಗಿರುವುದು ಉಭಯ ನಾಯಕರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ.

ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಗಾಜಾ, ಲೆಬನಾನ್ ಮತ್ತು ಸಿರಿಯಾ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಅಮೆರಿಕಾ ಹಾಗೂ ಇಸ್ರೇಲ್ ನಾಯಕರ ನಡುವಿನ ಈ ಬಹಿರಂಗ ಸಂಘರ್ಷ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಲೆಬನಾನ್ ಪರಿಸ್ಥಿತಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಮತ್ತು ಟ್ರಂಪ್-ನೆತನ್ಯಾಹು ಸಂಬಂಧಗಳು ಯಾವ ರೀತಿಯಲ್ಲಿ ಬೆಳೆಯುತ್ತವೆ ಎಂಬುದರ ಮೇಲೆ ವಿಶ್ವದ ಗಮನ ನೆಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com