

ಜಾಗತಿಕ ಮಟ್ಟದಲ್ಲಿ ಇಸ್ರೇಲ್ ವಿರುದ್ಧ ಟೀಕೆಗಳು, ಪ್ರತಿಭಟನೆಗಳು ಮತ್ತು ರಾಜತಾಂತ್ರಿಕ ಒತ್ತಡಗಳು ಹೆಚ್ಚುತ್ತಿರುವ ನಡುವೆಯೂ ಭಾರತ ಮಾತ್ರ ತಮ್ಮ ದೇಶದ ಪರವಾಗಿ ನಿಂತಿದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.
ವೆಸ್ಟ್ ಬ್ಯಾಂಕ್‌ನಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು,"ವಿಶ್ವದಾದ್ಯಂತ ಇಸ್ರೇಲ್ ಅನ್ನು ಪ್ರತ್ಯೇಕಿಸುವ (Delegitimisation) ಯತ್ನಗಳು ನಡೆಯುತ್ತಿದ್ದರೂ, ಭಾರತದಲ್ಲಿ ಮಾತ್ರ ನಮ್ಮ ಮೇಲೆ 'ಹುಚ್ಚರಂತೆ ಪ್ರೀತಿ' (Absolutely crazy love) ಇದೆ" ಎಂದು ಹೇಳಿದ್ದಾರೆ.
ನಾನು ಈ ಮಾತನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಇಂದು ಜಗತ್ತಿನ ಬಹುತೇಕ ಭಾಗಗಳಲ್ಲಿ ನಾವು ಪ್ರತ್ಯೇಕತೆಯನ್ನು ಎದುರಿಸುತ್ತಿದ್ದೇವೆ. ಆದರೆ ಭಾರತದಲ್ಲಿ ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಅಲ್ಲಿ ಇಸ್ರೇಲ್ ಕುರಿತು ಸಂಪೂರ್ಣವಾಗಿ ಹುಚ್ಚರಂತೆ ಪ್ರೀತಿಸುವ ಜನರಿದ್ದಾರೆ, ಅದು ನಿಜಕ್ಕೂ ಅದ್ಭುತ" ಎಂದು ತಿಳಿಸಿದ್ದಾರೆ.
ವಿಶ್ವದ ಬೇರೆ ಯಾವುದೇ ದೇಶಕ್ಕಿಂತಲೂ ನನಗೆ ಭಾರತದಿಂದಲೇ ಅತಿ ಹೆಚ್ಚು ಸೋಶಿಯಲ್ ಮೀಡಿಯಾ ಫಾಲೋವರ್ಸ್ ಇದ್ದಾರೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇಸ್ರೇಲ್ ಜಾಗತಿಕವಾಗಿ ಒಂಟಿಯಾಗಿದೆ ಎಂಬ ವಾದವನ್ನು ತಳ್ಳಿಹಾಕಿದ ನೆತನ್ಯಾಹು, 140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಂತಹ ಜಾಗತಿಕ ದೊಡ್ಡ ಶಕ್ತಿ ಇಸ್ರೇಲ್ ಜೊತೆಗಿದೆ ಎಂದು ಹೇಳಿದರು.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪ್ರಚಾರದ ಬಗ್ಗೆ ಮಾತನಾಡುತ್ತಾ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಹಳಸುವಂತೆ ಮಾಡಲು ಮತ್ತು ಇಸ್ರೇಲ್ ವಿರುದ್ಧ ನಕಲಿ ಕಥೆಗಳನ್ನು ಹರಡಲು ಪಾಕಿಸ್ತಾನ ಮೂಲದ ಬಾಟ್ ಫಾರ್ಮ್‌ಗಳು (Bot farms/Fake accounts) ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಳಿಕ ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿ ಹಾಗೂ ತಾವು ಭಾರತಕ್ಕೆ ನೀಡಿದ್ದ ಭೇಟಿಯನ್ನು ಸ್ಮರಿಸಿದ ನೆತನ್ಯಾಹು, ಈ ಸಂಬಂಧವನ್ನು ಕೇವಲ ರಾಜತಾಂತ್ರಿಕತೆಯಲ್ಲ, ಅದೊಂದು 'ಲವ್ ಫೆಸ್ಟ್' (Love fest) ಎಂದು ಕರೆದಿದ್ದಾರೆ.
ಗಾಜಾ, ಲೆಬನಾನ್ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಯುರೋಪಿನ ಹಲವು ದೇಶಗಳಲ್ಲಿ ಇಸ್ರೇಲ್ ವಿರುದ್ಧ ಸಾರ್ವಜನಿಕ ಆಕ್ರೋಶ ಮತ್ತು ಟೀಕೆಗಳು ಹೆಚ್ಚಾಗುತ್ತಿವೆ.
Advertisement