

ಇರಾನ್ ವಿರುದ್ಧದ ಯುದ್ಧ ಮತ್ತು ರಾಜತಾಂತ್ರಿಕ ಕಾರ್ಯತಂತ್ರದ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಭಿನ್ನಮತ ಸ್ಫೋಟಗೊಂಡಿದೆ.
ಇತ್ತೀಚೆಗೆ ಇವರಿಬ್ಬರ ನಡುವೆ ನಡೆದ ಸುಮಾರು ಒಂದು ಗಂಟೆಯ ಸುದೀರ್ಘ ಫೋನ್ ಕರೆಯಲ್ಲಿ ಇರಾನ್ ವಿಚಾರವಾಗಿ ಇಬ್ಬರು ನಾಯಕರು ಪರಸ್ಪರ ಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದ್ದು, ಮಾತುಕತೆ ಸಾಕಷ್ಟು ಉದ್ವಿಗ್ನತೆಯಿಂದ ಕೂಡಿತ್ತು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಮೇಲಿನ ವೈಮಾನಿಕ ದಾಳಿಗಳನ್ನು ತಕ್ಷಣವೇ ಪುನರಾರಂಭಿಸಬೇಕು ಎಂದು ಬೆಂಜಮಿನ್ ನೆತನ್ಯಾಹು ಪಟ್ಟು ಹಿಡಿದಿದ್ದು, ದಾಳಿಗಳನ್ನು ಮುಂದೂಡುವುದು ದೊಡ್ಡ ತಪ್ಪು ಎಂದು ಟ್ರಂಪ್ ಅವರೊಂದಿಗೆ ವಾದಿಸಿದ್ದಾರೆಂದು ತಿಳಿದುಬಂದಿದೆ.
ಇರಾನ್‌ನ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಲು ಸತತ ಮಿಲಿಟರಿ ಕಾರ್ಯಾಚರಣೆಯೊಂದೇ ದಾರಿ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಆದರೆ, ಸದ್ಯಕ್ಕೆ ಇರಾನ್ ಜೊತೆಗಿನ ಸಂಘರ್ಷಕ್ಕೆ ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಡೊನಾಲ್ಡ್ ಟ್ರಂಪ್ ಬಯಸಿದ್ದು, ಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸಲು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮ ಹಾಗೂ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಕುರಿತು 30 ದಿನಗಳ ಕಾಲ ಮಾತುಕತೆ ನಡೆಸಲು ಒಪ್ಪಂದದ ಪತ್ರವೊಂದನ್ನು ಸಿದ್ಧಪಡಿಸುವತ್ತ ಗಮನ ಹರಿಸಿದ್ದಾರೆನ್ನಲಾಗುತ್ತಿದೆ.
ಗಲ್ಫ್ ಭಾಗದ ಮಿತ್ರ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ (UAE) ಮತ್ತು ಕತಾರ್ ನೀಡಿದ ರಾಜತಾಂತ್ರಿಕ ಸಲಹೆಗಳ ಮೇರೆಗೆ ಟ್ರಂಪ್ ಅವರು, ಇರಾನ್ ಮೇಲಿನ ನಿಗದಿತ ದಾಳಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ. ಆದರೆ, ಟ್ರಂಪ್ ಅವರ ಈ ನಿರ್ಧಾರ ಇಸ್ರೇಲ್ ನಾಯಕತ್ವದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.
ಇಸ್ರೇಲ್ ಆಡಳಿತದೊಳಗೂ ಇದೇ ಅಭಿಪ್ರಾಯ ಬಲವಾಗಿ ಕೇಳಿಬರುತ್ತಿದ್ದು, ಇರಾನ್ ಮಾತುಕತೆ ಹೆಸರಿನಲ್ಲಿ ಕಾಲಹರಣ ಮಾಡುತ್ತಿದೆ ಎಂಬ ಅನುಮಾನ ಅಲ್ಲಿನ ನಾಯಕರಲ್ಲಿ ಹೆಚ್ಚುತ್ತಿದೆ ಎನ್ನಲಾಗಿದೆ.
ಈ ನಡುವೆ ಆಂತರಿಕವಾಗಿ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದರೂ, ಟ್ರಂಪ್ ಅವರು ಸಾರ್ವಜನಿಕವಾಗಿ ಇಸ್ರೇಲ್ ಮತ್ತು ಅಮೆರಿಕ ನಡುವೆ ಎಲ್ಲವೂ ಸರಿ ಇದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ವಿಚಾರದಲ್ಲಿ ನೆತನ್ಯಾಹು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, "ನಾನು ಏನು ಹೇಳುತ್ತೇನೋ ಅದನ್ನೇ ನೆತನ್ಯಾಹು ಮಾಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಒಂದು ವೇಳೆ ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಮಿಲಿಟರಿ ದಾಳಿ ನಡೆಸಲು ತಾವು ಸಿದ್ಧವಾಗಿರುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ನಡುವೆ ಉಭಯ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆಗೆ ಕತಾರ್ ಮತ್ತು ಪಾಕಿಸ್ತಾನ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಅಂತರ ಕಡಿಮೆ ಮಾಡಲು ಹೊಸ ಶಾಂತಿ ಪ್ರಸ್ತಾವ ಸಿದ್ಧಪಡಿಸಿರುವುದಾಗಿ ವರದಿಯಾಗಿದೆ.
ಅಕ್ಸಿಯೊಸ್ ಪ್ರಕಾರ, “ಲೆಟರ್ ಆಫ್ ಇಂಟೆಂಟ್” ರೂಪದ ಪ್ರಾಥಮಿಕ ಒಪ್ಪಂದದ ಕರಡು ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದು, ಅದರಿಂದ ಯುದ್ಧಕ್ಕೆ ತಾತ್ಕಾಲಿಕ ಅಂತ್ಯ ಘೋಷಿಸಿ ಮುಂದಿನ 30 ದಿನಗಳ ಕಾಲ ಅಣು ಕಾರ್ಯಕ್ರಮ, ಪ್ರಾದೇಶಿಕ ಭದ್ರತೆ ಮತ್ತು ಹೋರ್ಮುಜ್ ಜಲಸಂಧಿಯ ಪುನರಾರಂಭ ಕುರಿತ ಮಾತುಕತೆ ನಡೆಸುವ ಯೋಜನೆ ಇದೆ ಎನ್ನಲಾಗಿದೆ.
ಇರಾನ್ ಸರ್ಕಾರವೂ ಈ ಹೊಸ ಪ್ರಸ್ತಾವವನ್ನು ಪರಿಶೀಲಿಸುತ್ತಿರುವುದಾಗಿ ಒಪ್ಪಿಕೊಂಡಿದೆ. ಆದರೆ ತಮ್ಮ “14 ಅಂಶಗಳ ಪ್ರಸ್ತಾವನೆ” ಆಧಾರದ ಮೇಲೆಯೇ ಮಾತುಕತೆ ಮುಂದುವರಿಯಬೇಕು ಎಂಬ ನಿಲುವನ್ನು ಸ್ಪಷ್ಟಪಡಿಸಿದೆ.
ಅಮೆರಿಕದ ಕೋಸ್ಟ್ ಗಾರ್ಡ್ ಅಕಾಡೆಮಿಯಲ್ಲಿ ಮಾತನಾಡಿದ ಟ್ರಂಪ್, “ನಾವು ಈ ವಿಷಯವನ್ನು ಸಂಪೂರ್ಣವಾಗಿ ಮುಗಿಸಬೇಕೇ ಅಥವಾ ಅವರು ಒಪ್ಪಂದಕ್ಕೆ ಸಹಿ ಮಾಡಲಿದೆಯೇ ಎಂಬುದೇ ಈಗಿನ ಪ್ರಶ್ನೆ” ಎಂದು ಹೇಳಿದ್ದಾರೆ.
ಬಳಿಕ ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಮೆರಿಕಾ ಮತ್ತು ಇರಾನ್ ಒಪ್ಪಂದ ಅಂತಿಮ ಹಂತದಲ್ಲಿದ್ದು, “ನಮಗೆ ಶೇ.100 ತೃಪ್ತಿಕರ ಉತ್ತರಗಳು ಸಿಗದಿದ್ದರೆ ಸೈನಿಕ ಕ್ರಮ ಮತ್ತೆ ಆರಂಭವಾಗಬಹುದು” ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.
ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ ಹೆಚ್ಚುತ್ತಿರುವ ಸೂಚನೆ ನೀಡುತ್ತಿವೆ. ಒಂದು ಕಡೆ ಇಸ್ರೇಲ್ ಕಠಿಣ ಸೈನಿಕ ಕ್ರಮಕ್ಕೆ ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ಅಮೆರಿಕಾ ಕೊನೆಯ ಕ್ಷಣದವರೆಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದೆ. ಆದರೆ, ಮಾತುಕತೆ ವಿಫಲವಾದರೆ ಮತ್ತೊಮ್ಮೆ ಭಾರೀ ಸಂಘರ್ಷ ಭುಗಿಲೆದ್ದರೂ ಅಚ್ಚರಿಯಿಲ್ಲ ಎಂಬ ಆತಂಕ ಜಾಗತಿಕ ಮಟ್ಟದಲ್ಲಿ ಮೂಡತೊಡಗಿದೆ.
Advertisement