

ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಅಮೆರಿಕ ಬುಧವಾರ ರಾತ್ರಿ ಇರಾನ್ ಮೇಲೆ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು, ಇರಾನ್ ವಿರುದ್ಧ "ಅತ್ಯಂತ ಕಠಿಣ ದಾಳಿ" ನಡೆಸುವುದಾಗಿ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಈ ದಾಳಿಗಳು ನಡೆದಿವೆ.
ಅಮೆರಿಕಾದ ಸೆಂಟ್ರಲ್ ಕಮಾಂಡ್ (CENTCOM) ನೀಡಿದ ಮಾಹಿತಿ ಪ್ರಕಾರ, ಇರಾನ್‌ನ ಸೇನಾ ಕಣ್ಗಾವಲು ವ್ಯವಸ್ಥೆಗಳು, ಸಂವಹನ ಜಾಲಗಳು ಹಾಗೂ ವಾಯು ರಕ್ಷಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.
ಅಮೆರಿಕದ ಮೆರೈನ್ ಕಾರ್ಪ್ಸ್, ವಾಯುಪಡೆ ಮತ್ತು ನೌಕಾಪಡೆಯು ಅಮೆರಿಕದ ಪಡೆಗಳು ಹಾಗೂ ಅಂತರರಾಷ್ಟ್ರೀಯ ವಾಣಿಜ್ಯ ಹಡಗುಗಳಿಗೆ ಅಪಾಯ ಉಂಟುಮಾಡುತ್ತಿದ್ದ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಇರಾನ್ ಮಾಧ್ಯಮಗಳ ವರದಿ ಪ್ರಕಾರ, ದೇಶದ ದಕ್ಷಿಣ ಭಾಗದಲ್ಲಿರುವ ಹಾರ್ಮುಜ್ ಜಲಸಂಧಿ ಸಮೀಪದ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿವೆ. ಕೇಶ್ಮ್, ಕಾರ್ಗಾನ್ ಮತ್ತು ಸಿರಿಕ್ ಪ್ರದೇಶಗಳಲ್ಲಿ ಶತ್ರು ಕ್ಷಿಪಣಿಗಳ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಇದೇ ಪ್ರದೇಶಗಳಲ್ಲಿ ಅಮೆರಿಕಾ ಈಗಾಗಲೇ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು ಹಾಗೂ ಸೇನಾ ನೆಲೆಗಳ ವಿರುದ್ಧ ದಾಳಿ ನಡೆಸಿತ್ತು.
ಅಮೆರಿಕಾದ ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಕಠಿಣ ಪ್ರತಿಕ್ರಿಯೆ ನೀಡಿದ್ದು, Strait of Hormuz ಅನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಘೋಷಿಸಿದೆ.
ಈ ಜಲಸಂಧಿಯ ಮೂಲಕ ಸಂಚರಿಸುವ ಯಾವುದೇ ಹಡಗುಗಳನ್ನು ಗುರಿಯಾಗಿಸಲಾಗುವುದು ಎಂದು ಇರಾನ್ ಸೇನೆ ಎಚ್ಚರಿಕೆ ನೀಡಿದೆ. ಎಲ್ಲ ರೀತಿಯ ಹಡಗು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದರ ನಡುವೆ, ಹಾರ್ಮುಜ್ ಜಲಸಂಧಿಯನ್ನು ದಾಟಲು ಯತ್ನಿಸಿದ ಎರಡು ಹಡಗುಗಳ ಮೇಲೆ ಇರಾನ್ ನೌಕಾಪಡೆಯು ದಾಳಿ ನಡೆಸಿರುವುದಾಗಿ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಸಂವಹನ ಮತ್ತು ರಾಡಾರ್ ಸೌಲಭ್ಯಗಳ ಮೇಲೂ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಈ ವರದಿಗಳ ಬಗ್ಗೆ ಅಮೆರಿಕದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ಕಚ್ಚಾತೈಲ ಪೂರೈಕೆಯ ಸುಮಾರು 20 ಪ್ರತಿಶತ ಸಾಗುತ್ತದೆ. ಹೀಗಾಗಿ ಜಲಸಂಧಿ ಸಂಪೂರ್ಣ ಬಂದ್ ಆಗಿರುವುದಾಗಿ ಇರಾನ್ ಘೋಷಿಸಿರುವುದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ತೈಲ ಬೆಲೆಗಳಲ್ಲಿ ಭಾರೀ ಏರಿಕೆ, ಇಂಧನ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮುಂದುವರಿದಿರುವ ಅಮೆರಿಕ-ಇರಾನ್ ಉದ್ವಿಗ್ನತೆ ಇದೀಗ ಮತ್ತೊಂದು ಅಪಾಯಕಾರಿ ಹಂತ ತಲುಪಿದ್ದು, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಇನ್ನಷ್ಟು ವಿಸ್ತರಿಸುವ ಭೀತಿ ಎದುರಾಗಿದೆ.
ಜಾಗತಿಕ ಸಮುದಾಯ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಮುಂದಿನ ಬೆಳವಣಿಗೆಗಳು ವಿಶ್ವ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಕುವೈತ್ ವಾಯುಪ್ರದೇಶ ಬಂದ್
ಇರಾನ್-ಅಮೆರಿಕಾ ನಡುವಿನ ಸಂಘರ್ಷ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಕುವೈತ್ ಗುರುವಾರ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.
ಈ ಕುರಿತು ಕುವೈತ್ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಎಲ್ಲಾ ವಿಮಾನಗಳನ್ನು ಪರ್ಯಾಯ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ತಿಳಿಸಿದೆ.
“ಕುವೈತ್ ಮೇಲೆ ಇರಾನ್ ನಡೆಸಿರುವ ಆಕ್ರಮಣಕಾರಿ ದಾಳಿಗಳು ಹಾಗೂ ಅವುಗಳಿಂದ ಪ್ರಾದೇಶಿಕ ನಾಗರಿಕ ವಿಮಾನ ಸಂಚಾರಕ್ಕೆ ಉಂಟಾಗಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಕುವೈತ್ ಸರ್ಕಾರ ಹೇಳಿದೆ.
‘ನಮ್ಮ ನೆಲದ ಮೇಲಿನ ದಾಳಿಗಳನ್ನು ತಕ್ಷಣ ನಿಲ್ಲಿಸಿ’: ಇರಾನ್'ಗೆ 22 ರಾಷ್ಟ್ರಗಳ ಎಚ್ಚರಿಕೆ
ಅಮೆರಿಕ ಸೇರಿದಂತೆ ಯುರೋಪ್, ಉತ್ತರ ಅಮೆರಿಕ ಹಾಗೂ ಆಸ್ಟ್ರೇಲಿಯಾದ ಒಟ್ಟು 22 ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ತಮ್ಮ ದೇಶಗಳ ಭೂಭಾಗದಲ್ಲಿ ನಡೆಯುತ್ತಿರುವ ದಾಳಿ, ಬೆದರಿಕೆಗಳನ್ನು ತಕ್ಷಣ ನಿಲ್ಲಿಸಬೇಕೆಂದು ಇರಾನ್'ಗೆ ಆಗ್ರಹಿಸಿವೆ.
“ನಮ್ಮ ನೆಲದ ಮೇಲೆ ವ್ಯಕ್ತಿಗಳನ್ನು ಹತ್ಯೆ ಮಾಡಲು, ಅಪಹರಿಸಲು, ಕಿರುಕುಳ ನೀಡಲು ಅಥವಾ ಬೆದರಿಸಲು ನಡೆಸುವ ಯಾವುದೇ ಪ್ರಯತ್ನಗಳು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿವೆ. ಇಂತಹ ಚಟುವಟಿಕೆಗಳು ಕೂಡಲೇ ನಿಲ್ಲಬೇಕು” ಎಂದು ತಿಳಿಸಿವೆ.
ಬಹ್ರೇನ್ ಮತ್ತು ಕುವೈತ್‌ನ ಅಮೆರಿಕ ನೆಲೆಗಳ ಮೇಲೆ ದಾಳಿ: ರೆವಲ್ಯೂಷನರಿ ಗಾರ್ಡ್ಸ್
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕ ನಡೆಸಿದ ಇತ್ತೀಚಿನ ವೈಮಾನಿಕ ದಾಳಿಗಳಿಗೆ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೇಳಿದೆ.
“ಎರಡು ಹಂತದ ಕಾರ್ಯಾಚರಣೆಯಲ್ಲಿ ಕುವೈತ್‌ನ ಅಲಿ ಮತ್ತು ಅಹ್ಮದ್ ಏರ್‌ಫೋರ್ಸ್ ನೆಲೆಗಳಲ್ಲಿನ ಅಮೆರಿಕ ಸೇನೆಯ 18 ಪ್ರಮುಖ ಗುರಿಗಳನ್ನು ಹೊಡೆದಿದ್ದೇವೆ. ಜೊತೆಗೆ ಬಹ್ರೇನ್‌ನ ಶೇಖ್ ಇಸಾ ವಾಯುನೆಲೆಯನ್ನೂ ಧ್ವಂಸಗೊಳಿಸಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ಇರಾನ್ ಮಾಧ್ಯಮಗಳು ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ನೆಲೆ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ವರದಿ ಮಾಡಿದ್ದವು.
ಇದರ ನಡುವೆ ಅಮೆರಿಕ ಸೇನೆ, ಇರಾನ್ ವಿರುದ್ಧದ ಹೊಸ ಹಂತದ ದಾಳಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ.
“ಅಮೆರಿಕದ ಮೆರೈನ್ ಕಾರ್ಪ್ಸ್, ವಾಯುಪಡೆ ಮತ್ತು ನೌಕಾಪಡೆಗಳು ಇರಾನ್‌ನ ಸೇನಾ ನಿಗಾವ್ಯವಸ್ಥೆಗಳು, ಸಂವಹನ ಜಾಲಗಳು ಮತ್ತು ವಾಯುರಕ್ಷಣಾ ತಾಣಗಳ ಮೇಲೆ ನಿಖರ ದಾಳಿಗಳನ್ನು ನಡೆಸಿವೆ.
ಈ ಗುರಿಗಳು ಅಮೆರಿಕ ಪಡೆಗಳು ಹಾಗೂ ಪ್ರಾದೇಶಿಕ ಸಮುದ್ರ ಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಅಪಾಯ ಉಂಟುಮಾಡುತ್ತಿದ್ದವು” ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.
Advertisement