

ವಾಷಿಂಗ್ಟನ್ ಡಿ. ಸಿ. (ಅಮೆರಿಕ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮರುನಾಮಕರಣದ ಹವ್ಯಾಸವನ್ನು ಮುಂದುವರಿಸಿದ್ದು, ಅಟ್ಲಾಂಟಿಕ್ ಅಥವಾ ಪೆಸಿಫಿಕ್ ಮಹಾಸಾಗರಕ್ಕೆ ತಮ್ಮ ಹೆಸರು ಅಥವಾ ಅಮೆರಿಕದ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗಷ್ಟೇ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹೆಸರನ್ನು ಸರ್ಕಾರಿ ಕಡತಗಳಲ್ಲಿ ಸೂಪರ್ ಇಂಟೆಲಿಜೆನ್ಸ್ (SI) ಎಂದು ಬದಲಾಯಿಸಲು ಸೂಚಿಸಿದ್ದ ಟ್ರಂಪ್, ಇದೀಗ ಬೃಹತ್ ಸಾಗರಗಳ ಹೆಸರನ್ನೇ ಬದಲಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಟ್ರಂಪ್ ಓಷನ್...
ಟೆನ್ನೆಸ್ಸಿಯ ಕ್ಲಾರ್ಕ್ಸ್‌ವಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಈಗಾಗಲೇ ಗಲ್ಫ್ ಆಫ್ ಮೆಕ್ಸಿಕೋ ಮತ್ತು ಲೇಕ್ ಒಂಟಾರಿಯೊ ಹೆಸರುಗಳನ್ನು ಬದಲಾಯಿಸಿರುವುದನ್ನು ನೆನಪಿಸುತ್ತಾ, "ನಮಗೆ ಈಗ ಒಂದು ನದಿ ಮತ್ತು ಒಂದು ಸಾಗರದ ಅಗತ್ಯವಿದೆ. ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ನಮಗೊಂದು ನದಿ ಮತ್ತು ಒಂದು ಸಾಗರ ಇರಬೇಕು ಎಂದುಕೊಂಡಿದ್ದೇನೆ". ಹಾಗಾಗಿ, ನಾನು ಅಟ್ಲಾಂಟಿಕ್ ಅಥವಾ ಪೆಸಿಫಿಕ್ ಮಹಾಸಾಗರದ ಹೆಸರನ್ನು ಬದಲಾಯಿಸಿ ಟ್ರಂಪ್ ಓಷನ್ ಅಥವಾ ಓಷನ್ ಆಫ್ ದಿ ಅಮೆರಿಕಾಸ್ ಎಂದು ಇಡುವ ಆಲೋಚನೆ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಇದೇ ವೇಳೆ ನ್ಯೂಯಾರ್ಕ್‌ನ ಹಡ್ಸನ್ ನದಿ ಮತ್ತು ಮಿಸಿಸ್ಸಿಪ್ಪಿ ನದಿಯ ಹೆಸರನ್ನು ತಾವು ಬದಲಾಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಡ್ಸನ್ ನದಿಯನ್ನು ಶೋಧಿಸಿದ ಹೆನ್ರಿ ಹಡ್ಸನ್ ಅವರ ಗೌರವಾರ್ಥವಾಗಿ ಆ ಹೆಸರನ್ನು ಹಾಗೇ ಉಳಿಸುವುದಾಗಿ ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ಟ್ರಂಪ್ ಈ ಹಿಂದೆಯೂ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಜನವರಿ 2025 ರಲ್ಲಿ ಕಾರ್ಯನಿರ್ವಾಹಕ ಆದೇಶದ ಮೂಲಕ 'ಗಲ್ಫ್ ಆಫ್ ಮೆಕ್ಸಿಕೋ' ಹೆಸರನ್ನು 'ಗಲ್ಫ್ ಆಫ್ ಅಮೆರಿಕ' ಎಂದು ಬದಲಾಯಿಸಿದ್ದರು. ಅದೇ ರೀತಿ ಕಳೆದ ಆಗಸ್ಟ್‌ನಲ್ಲಿ ಕೆನಡಾ ಮತ್ತು ಅಮೆರಿಕ ನಡುವಿರುವ 'ಲೇಕ್ ಒಂಟಾರಿಯೊ' ಅನ್ನು 'ಲೇಕ್ ಅಮೆರಿಕ' ಎಂದು ಮರುನಾಮಕರಣ ಮಾಡಿದ್ದರು. ಅದರಲ್ಲೂ, ಅಮೆರಿಕ ಅಧ್ಯಕ್ಷರು ತಮ್ಮ ಕಾರ್ಯನಿರ್ವಾಹಕ ಅಧಿಕಾರವನ್ನು ಬಳಸಿ ಅಮೆರಿಕದ ಸರ್ಕಾರಿ ದಾಖಲೆಗಳು ಮತ್ತು ನಕ್ಷೆಗಳಲ್ಲಿ ಈ ಹೆಸರನ್ನು ಬದಲಾಯಿಸಬಹುದಾದರೂ, ಜಾಗತಿಕ ಸಂಸ್ಥೆಗಳು ಅಥವಾ ಮೆಕ್ಸಿಕೋ ಮತ್ತು ಕೆನಡಾದಂತಹ ಇತರ ದೇಶಗಳು ಇದನ್ನು ಅಧಿಕೃತವಾಗಿ ಒಪ್ಪಿಕೊಳ್ಳಬೇಕು ಎಂಬ ನಿಯಮವೇನೂ ಇರುವುದಿಲ್ಲ.