ಅಮೆರಿಕ- ಭಾರತ ವ್ಯಾಪಾರ ಒಪ್ಪಂದಕ್ಕೆ 'ಬಹಳ ಹತ್ತಿರ'; ಹಿಂದಿನ ಒಪ್ಪಂದಗಳಿಗಿಂತ ಭಿನ್ನ- ಡೊನಾಲ್ಡ್ ಟ್ರಂಪ್

ಮಂಗಳವಾರ ಓವಲ್ ಆಫೀಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಮತ್ತು ಅಮೆರಿಕಗಳು ವ್ಯಾಪಾರ ಒಪ್ಪಂದವೊಂದನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿವೆ ಎಂದು ತಿಳಿಸಿದರು.
Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್online desk
Updated on: 

ವಾಷಿಂಗ್ ಟನ್: ಭಾರತ ಮತ್ತು ಅಮೆರಿಕಗಳು ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳಲು "ಬಹಳ ಹತ್ತಿರ"ದಲ್ಲಿವೆ. ಈ ಒಪ್ಪಂದ ಹಿಂದಿನ ಒಪ್ಪಂದಗಳಿಗಿಂತ ಸಾಕಷ್ಟು ಭಿನ್ನವಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮಂಗಳವಾರ ಓವಲ್ ಆಫೀಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಮತ್ತು ಅಮೆರಿಕಗಳು ವ್ಯಾಪಾರ ಒಪ್ಪಂದವೊಂದನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿವೆ ಎಂದು ತಿಳಿಸಿದರು.

"ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ನಾವೂ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಹೌದು, ನಾವು ಬಹಳ ಹತ್ತಿರದಲ್ಲಿದ್ದೇವೆ," ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಟ್ರಂಪ್ ಹೇಳಿದರು. ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆ ಬಂದಿದೆ.

"ಇದು ನಾವು ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳಿಗಿಂತ ಸಾಕಷ್ಟು ಭಿನ್ನವಾದ ಒಪ್ಪಂದವಾಗಲಿದೆ," ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಭಾರತಕ್ಕೆ ಭೇಟಿ ನೀಡಿ, ವ್ಯಾಪಾರ, ಇಂಧನ, ತಂತ್ರಜ್ಞಾನ, ರಕ್ಷಣೆ ಮತ್ತು ಜನರ ನಡುವಿನ ಬಾಂಧವ್ಯದಂತಹ ಕ್ಷೇತ್ರಗಳ ಮೇಲೆ ಗಮನಹರಿಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸುತ್ತಿರುವ ಸಂದರ್ಭದಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ, ವಾಷಿಂಗ್ಟನ್ "ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದೆ" ಮತ್ತು "ಅದನ್ನು ಪೂರ್ಣಗೊಳಿಸಲು ಬಹಳ ಹತ್ತಿರದಲ್ಲಿದೆ" ಎಂದು ರೂಬಿಯೊ ಕೂಡ ಹೇಳಿದ್ದರು.

Trump
ಭಾರತ 'ಶಕ್ತಿಯುತ, ಪ್ರಭಾವಶಾಲಿ' ರಾಷ್ಟ್ರ; 21ನೇ ಶತಮಾನ ರೂಪಿಸಲು ಭಾರತ-ಅಮೆರಿಕ ಬಾಂಧವ್ಯ ನೆರವು: US ಸಚಿವ ರೂಬಿಯೊ

ಈ ತಿಂಗಳ ಆರಂಭದಲ್ಲಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಿಲ್ವಾಕೀ ಮತ್ತು ವಾಷಿಂಗ್ಟನ್‌ನಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರನ್ನು ಭೇಟಿಯಾಗಿ, ವ್ಯಾಪಾರ ಒಪ್ಪಂದದ ಸೂಕ್ಷ್ಮ ಅಂಶಗಳ ಬಗ್ಗೆ ಚರ್ಚಿಸಿದ್ದರು.

ಇತ್ತೀಚೆಗೆ ಮಾತನಾಡಿದ ಅವರು, ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಅಂತಿಮಗೊಳಿಸಲಾಗಿದೆ ಮತ್ತು ಸದ್ಯ ಅದಕ್ಕೆ ಕಾನೂನು ಸ್ವರೂಪ ನೀಡುವ (legal drafting) ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. ಸರ್ಕಾರ ಈ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದೆ.

ಭಾರತ ಮತ್ತು ಅಮೆರಿಕಗಳು ಫೆಬ್ರವರಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (BTA) ಮೊದಲ ಹಂತದ ಚೌಕಟ್ಟನ್ನು ಅಂತಿಮಗೊಳಿಸಿರುವುದಾಗಿ ಘೋಷಿಸಿದ್ದವು. ಆದಾಗ್ಯೂ, ಅಮೆರಿಕದಲ್ಲಿ ಸುಂಕದ (tariff) ರಚನೆಯಲ್ಲಿ ಆಗಿರುವ ಬದಲಾವಣೆಗಳಿಂದಾಗಿ, ಈ ಒಪ್ಪಂದದ ಕುರಿತು ಮತ್ತಷ್ಟು ಮಾತುಕತೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com