ಮಸೂದ್ ಅಜರ್ ನಮ್ಮ ದೇಶದಲ್ಲಲ್ಲ, ನಿಮ್ಮಲ್ಲೇ ಇದ್ದಾನೆ, ಅಫ್ಘಾನಿಸ್ತಾನ ನೆಲ ಯಾವುದೇ ದೇಶದ ವಿರುದ್ಧ ಬಳಸಲು ಅವಕಾಶ ನೀಡಲ್ಲ: ಪಾಕಿಸ್ತಾನಕ್ಕೆ ತಾಲಿಬಾನ್ ತಿರುಗೇಟು..!

ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪೈಕಿ ಒಬ್ಬನಾಗಿದ್ದು, ದೇಶದಲ್ಲಿ ನಡೆದ ಹಲವು ಪ್ರಮುಖ ಉಗ್ರ ದಾಳಿಗಳ ಹಿಂದಿನ ಪ್ರಮುಖ ಸಂಚುಕೋರ ಎಂದು ಆರೋಪಿಸಲಾಗಿದೆ.
Terrorist Masood Azhar
ಉಗ್ರ ಮಸೂದ್ ಅಜರ್
Updated on

ಕಾಬೂಲ್: ಕಾಬೂಲ್: ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಸ್ಥಾಪಕ, ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿ ಅಡಗಿದ್ದಾನೆ ಎಂಬ ಪಾಕಿಸ್ತಾನದ ಪದೇಪದೇ ಹೇಳಿಕೆಯನ್ನು ತಾಲಿಬಾನ್ ತಳ್ಳಿಹಾಕಿದೆ.

ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟಿರುವ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿ ಇಲ್ಲ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಭಯೋತ್ಪಾದಕ ಸಂಘಟನೆಗಳು ಹಾಗೂ ಅವುಗಳ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನದ ಪ್ರಯತ್ನಗಳ ಬಗ್ಗೆ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳು ಎದ್ದಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

2019ರ ಮೇನಲ್ಲಿ ಡ್ಯುರಾಂಡ್ ಗಡಿ ದಾಟಿ ಅಫ್ಘಾನಿಸ್ತಾನಕ್ಕೆ ಪರಾರಿಯಾಗಿರುವ ಅಜರ್, ಅಲ್ಲಿಯೇ ತಲೆಮರೆಸಿಕೊಂಡಿದ್ದಾನೆ ಎಂದು ಪಾಕಿಸ್ತಾನ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದೆ.

ಆದರೆ, ಅಫ್ಘಾನಿಸ್ತಾನದ ನೆಲವನ್ನು ಯಾವುದೇ ದೇಶದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ ಎಂದು ಕಾಬೂಲ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪೈಕಿ ಒಬ್ಬನಾಗಿದ್ದು, ದೇಶದಲ್ಲಿ ನಡೆದ ಹಲವು ಪ್ರಮುಖ ಉಗ್ರ ದಾಳಿಗಳ ಹಿಂದಿನ ಪ್ರಮುಖ ಸಂಚುಕೋರ ಎಂದು ಆರೋಪಿಸಲಾಗಿದೆ.

2001ರ ಸಂಸತ್ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಹಾಗೂ 2019ರ ಪುಲ್ವಾಮಾ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತನ ಹೆಸರು ಕೇಳಿಬಂದಿದೆ. 2019ರ ಮೇನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆತನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು.

ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯುವ ಪಾಕಿಸ್ತಾನದ ಪ್ರಯತ್ನಗಳ ಮೇಲೂ ಅಂತಾರಾಷ್ಟ್ರೀಯ ನಿಗಾ ಹೆಚ್ಚಿರುವ ಸಂದರ್ಭದಲ್ಲೇ ಅಜರ್ ಎಲ್ಲಿದ್ದಾನೆ ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

Terrorist Masood Azhar
ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಹಣ ಅಕ್ರಮ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯುವಲ್ಲಿ ಪಾಕಿಸ್ತಾನದಲ್ಲಿ ಕೊರತೆಗಳಿವೆ ಎಂದು ಹಣಕಾಸು ಕಾರ್ಯಪಡೆ (FATF) 2018ರಿಂದ 2022ರವರೆಗೆ ಪಾಕಿಸ್ತಾನವನ್ನು ‘ಗ್ರೇ ಪಟ್ಟಿಯಲ್ಲಿ’ ಇರಿಸಿತ್ತು.

ಜೆಇಎಂ ಮತ್ತು ಲಷ್ಕರ್-ಎ-ತೊಯ್ಬಾದಂತಹ ಸಂಘಟನೆಗಳಿಗೆ ಸಂಬಂಧಿಸಿದ ಭಯೋತ್ಪಾದಕ ಹಣಕಾಸು ನೆರವನ್ನು ಪರಿಣಾಮಕಾರಿಯಾಗಿ ತಡೆಯಲು ವಿಫಲವಾಗಿರುವುದು ಹಾಗೂ ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ಉಗ್ರರ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ದುರ್ಬಲವಾಗಿ ಜಾರಿಗೊಳಿಸಿರುವುದು ಸೇರಿದಂತೆ ಹಲವು ವಿಚಾರಗಳನ್ನು FATF ತನ್ನ ಕಳವಳಗಳಾಗಿ ಉಲ್ಲೇಖಿಸಿತ್ತು.

ಗ್ರೇ ಪಟ್ಟಿಯಿಂದ ಹೊರಬರಲು ಪಾಕಿಸ್ತಾನ ಹಲವು ಕ್ರಮಗಳನ್ನು ಕೈಗೊಂಡಿತ್ತು. ಜೆಇಎಂ, ಲಷ್ಕರ್-ಇ-ತೊಯ್ಬಾ ಹಾಗೂ ಅವುಗಳಿಗೆ ಸಂಬಂಧಿಸಿದ ಸಂಘಟನೆಗಳ ಮೇಲೆ ನಿಷೇಧ ಹೇರುವುದು ಮತ್ತು ಸಂಘಟನೆಗಳ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸುವುದು ಇದರಲ್ಲಿ ಸೇರಿತ್ತು. 2021ರಲ್ಲಿ ಪಾಕಿಸ್ತಾನದ ನ್ಯಾಯಾಲಯವೊಂದು ಅಜರ್‌ಗೆ ಗೈರುಹಾಜರಿಯಲ್ಲೇ ಶಿಕ್ಷೆ ವಿಧಿಸಿತ್ತು.

ಅಗತ್ಯ ಕ್ರಮಯೋಜನೆಗಳನ್ನು ಪೂರ್ಣಗೊಳಿಸಿದ ಬಳಿಕ ಪಾಕಿಸ್ತಾನವನ್ನು 2022ರಲ್ಲಿ FATFನ ಗ್ರೇ ಪಟ್ಟಿಯಿಂದ ತೆಗೆದುಹಾಕಲಾಯಿತು. ಆದರೆ, FATFನ ಮನವಿಯ ಮೇರೆಗೆ ಏಷ್ಯಾ-ಪೆಸಿಫಿಕ್ ಹಣ ಅಕ್ರಮ ವರ್ಗಾವಣೆ ವಿರೋಧಿ ಗುಂಪು (APG) ಪಾಕಿಸ್ತಾನದ ಭಯೋತ್ಪಾದನೆಗೆ ಹಣಕಾಸು ನೆರವು ತಡೆಯುವ ವ್ಯವಸ್ಥೆಯ ಕೆಲವು ಅಂಶಗಳ ಪರಿಶೀಲನೆಯನ್ನು ಮುಂದುವರಿಸಿತು.

ಮಸೂದ್ ಅಜರ್‌ನ ಬಂಧನದ ವಿಚಾರವೂ ಈ ಪರಿಶೀಲನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅಜರ್ ದೇಶದಲ್ಲೇ ಇಲ್ಲದಿರುವುದರಿಂದ ಆತನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿಕೊಂಡು ಬಂದಿದ್ದಾರೆ.

ಅಜರ್ ಅಫ್ಘಾನಿಸ್ತಾನದಲ್ಲಿದ್ದಾನೆ ಎಂಬ ಪಾಕಿಸ್ತಾನದ ಆರೋಪವನ್ನು ತಾಲಿಬಾನ್ ಈ ಹಿಂದೆಯೂ ತಳ್ಳಿಹಾಕಿತ್ತು. 2022ರ ಸೆಪ್ಟೆಂಬರ್‌ನಲ್ಲಿ, ತಾಲಿಬಾನ್ ವಕ್ತಾರರೊಬ್ಬರು ಅಜರ್ ಅಫ್ಘಾನಿಸ್ತಾನದಲ್ಲಿ ಇಲ್ಲ ಎಂದು ಹೇಳಿದ್ದರು. ಅಲ್ಲದೆ, ಆತ ಅಫ್ಘಾನಿಸ್ತಾನದಲ್ಲಿದ್ದಾನೆ ಎಂಬ ಬಗ್ಗೆ ಪಾಕಿಸ್ತಾನವು ಕಾಬೂಲ್‌ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಅವರು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com