

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಅತ್ಯಾಧುನಿಕ ಮಾನವರಹಿತ ನೀರೊಳಗಿನ ಕಣ್ಗಾವಲು ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೀಡಿರುವ ಹೇಳಿಕೆಯನ್ನು ಅಮೆರಿಕ ಸೇನೆ ಬಲವಾಗಿ ತಳ್ಳಿಹಾಕಿದೆ.
ಇರಾನ್‌ನ ಈ ಹೇಳಿಕೆ ‘ಸ್ಪಷ್ಟವಾಗಿ ಹತಾಶೆಯ’ ಪ್ರತಿಕ್ರಿಯೆಯಾಗಿದೆ ಎಂದು ಅಮೆರಿಕ ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.
ಭಾನುವಾರ ಸ್ಥಳೀಯ ಕಾಲಮಾನದಲ್ಲಿ ಅಲ್ ಜಜೀರಾ ಜೊತೆ ಮಾತನಾಡಿದ ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್, ಇರಾನ್‌ನ ಹೇಳಿಕೆಯನ್ನು ನಿರಾಕರಿಸಿದರು.
ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಎಲ್ಲ ಮಾನವರಹಿತ ವ್ಯವಸ್ಥೆಗಳ ಲೆಕ್ಕಾಚಾರ ನಮ್ಮ ಬಳಿ ಸಂಪೂರ್ಣವಾಗಿ ಇದೆ ಎಂದು ಹೇಳಿದರು.
ಅಮೆರಿಕವು ತನ್ನ ಕಾರ್ಯಾಚರಣೆಯಲ್ಲಿರುವ ಎಲ್ಲ ಡ್ರೋನ್‌ಗಳ ಮೇಲೆ ‘ಸಂಪೂರ್ಣ ನಿಯಂತ್ರಣ’ ಹೊಂದಿದೆ ಎಂದು ತಿಳಿಸಿದರು. ಅಲ್ಲದೆ, ಐಆರ್‌ಜಿಸಿ ಮಾಡಿರುವ ವಶಪಡಿಸಿಕೊಂಡಿರುವುದಾಗಿ ಹೇಳಿಕೆಯನ್ನು ಅವರು ‘ಸ್ಪಷ್ಟವಾಗಿ ಹತಾಶೆಯ’ ಹೇಳಿಕೆ ಎಂದು ಬಣ್ಣಿಸಿದರು.
ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಸೇನೆಗೆ ಸೇರಿದ ಮಾನವರಹಿತ ಸ್ವಯಂಚಾಲಿತ ನೀರೊಳಗಿನ ವಾಹನವನ್ನು (ಎಯುವಿ) ವಶಪಡಿಸಿಕೊಂಡಿರುವುದಾಗಿ ಐಆರ್‌ಜಿಸಿ ನೌಕಾಪಡೆ ಹೇಳಿಕೊಂಡ ಬೆನ್ನಲ್ಲೇ ಅಮೆರಿಕದ ಈ ಪ್ರತಿಕ್ರಿಯೆ ಬಂದಿದೆ.
ಆರಂಭದಲ್ಲಿ ಇರಾನ್ ಅಧಿಕಾರಿಗಳು ಇದನ್ನು ‘ರೆಮಸ್ 600’ ಎಂದು ಗುರುತಿಸಿದ್ದರು. ಬಳಿಕ ಇದನ್ನು ಅಮೆರಿಕ ಸೇನೆಗೆ ಸೇರಿದ ‘ಎಂಕೆ-18 ಮಾಡ್ 2 ಕಿಂಗ್‌ಫಿಶ್’ ಎಂದು ಗುರುತಿಸಿರುವುದಾಗಿ ತಿಳಿಸಿದ್ದರು.
ಭಾನುವಾರ ಇರಾನ್‌ನ ಸರ್ಕಾರಿ ಪ್ರಸಾರಕ ಐಆರ್‌ಐಬಿ ಪ್ರಸಾರ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಕಾರ್ಯತಂತ್ರದ ಮಹತ್ವ ಹೊಂದಿರುವ ಜಲಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ‘ಭಯೋತ್ಪಾದಕ ಸೇನೆಯ ಎರಡನೇ ನೀರೊಳಗಿನ [ಜಲಾಂತರ್ಗಾಮಿ] ವಾಹನ’ವನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಇರಾನ್ ಸೇನಾ ಅಧಿಕಾರಿಗಳು ಹೇಳಿದ್ದರು.
ಇದು ಗುಪ್ತಚರ ಮೇಲ್ವಿಚಾರಣೆ ಮತ್ತು ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳನ್ನು ಬಳಸಿಕೊಂಡು ನಡೆಸಿದ ‘ಸಮನ್ವಯಿತ ಮತ್ತು ಸಂಕೀರ್ಣ ಕಾರ್ಯಾಚರಣೆ’ ಎಂದು ಐಆರ್‌ಜಿಸಿ ಹೇಳಿದೆ.
“ಸರ್ವಶಕ್ತ ದೇವರ ಕೃಪೆಯಿಂದ, ಗುಪ್ತಚರ ಮತ್ತು ಎಲೆಕ್ಟ್ರಾನಿಕ್ ಯುದ್ಧದೊಂದಿಗೆ ಸಮನ್ವಯಿತ ಹಾಗೂ ಸಂಕೀರ್ಣ ಕಾರ್ಯಾಚರಣೆ ನಡೆಸಿದ ಐಆರ್‌ಜಿಸಿ ನೌಕಾಪಡೆಯ ಯೋಧರು, ಗೂಢಚರ್ಯೆ ಉದ್ದೇಶಕ್ಕಾಗಿ ಹೋರ್ಮುಜ್ ಜಲಸಂಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಅತ್ಯಾಧುನಿಕ ಮಾನವರಹಿತ ವಾಹನವನ್ನು ಸೆರೆಹಿಡಿಯಲು ಸಾಧ್ಯವಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಶಪಡಿಸಿಕೊಂಡಿರುವುದಾಗಿ ಇರಾನ್ ಹೇಳಿರುವ ವಾಹನವನ್ನು ಆರಂಭದಲ್ಲಿ ಐಆರ್‌ಜಿಸಿ ನೌಕಾಪಡೆ ‘ರೆಮಸ್ 600’ ಎಂದು ಗುರುತಿಸಿತ್ತು. ಇದು ಬುದ್ಧಿವಂತ, ಸ್ವಯಂಚಾಲಿತ ಮಾನವರಹಿತ ನೀರೊಳಗಿನ ವಾಹನವಾಗಿದ್ದು, ಜಲಸಂಧಿಯೊಳಗೆ ಗೂಢಚರ್ಯೆ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದರು.
ಈ ನೀರೊಳಗಿನ ವಾಹನವು ‘ರೆಮಸ್ 600’ ಎಂದು ಕರೆಯಲಾಗುವ ಬುದ್ಧಿವಂತ ಮತ್ತು ಅತ್ಯಾಧುನಿಕ ಮಾದರಿಯಾಗಿದೆ. ಇದನ್ನು ಐಆರ್‌ಜಿಸಿ ನೌಕಾಪಡೆ ವಶಪಡಿಸಿಕೊಂಡಿದ್ದು, ಅದರಲ್ಲಿರುವ ಮಾಹಿತಿಯನ್ನು ಪಡೆಯಲು ಪಡೆಗಳ ತಜ್ಞರ ವಶದಲ್ಲಿದೆ” ಎಂದು ಹೇಳಲಾಗಿತ್ತು.
ವಶಪಡಿಸಿಕೊಂಡಿರುವುದಾಗಿ ಹೇಳಲಾಗಿರುವ ನೀರೊಳಗಿನ ವಾಹನವನ್ನು ವ್ಯವಸ್ಥೆಯ ಪರಿಶೀಲನೆ ಹಾಗೂ ಅದರಲ್ಲಿರುವ ಮಾಹಿತಿಯನ್ನು ಹೊರತೆಗೆಯಲು ವಿಶೇಷ ಸೇನಾ ತಂತ್ರಜ್ಞರಿಗೆ ಹಸ್ತಾಂತರಿಸಲಾಗಿದೆ ಎಂದು ಐಆರ್‌ಜಿಸಿ ಹೇಳಿಕೆಯನ್ನು ಉಲ್ಲೇಖಿಸಿ ಐಆರ್‌ಐಬಿ ವರದಿ ಮಾಡಿದೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗರ ಸಂಚಾರದ ವಿಚಾರದಲ್ಲೂ ಐಆರ್‌ಜಿಸಿ ನೌಕಾಪಡೆ ತನ್ನ ಕಠಿಣ ನಿಲುವನ್ನು ಪುನರುಚ್ಚರಿಸಿದೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಘೋಷಿಸಿರುವ ಇರಾನ್, ಈ ಪ್ರದೇಶದಲ್ಲಿ ಅನುಮತಿಯಿಲ್ಲದ ಸಂಚಾರದ ವಿರುದ್ಧ ‘ಬಲವಾದ ಮತ್ತು ನಿರಂತರ’ ಕ್ರಮ ಮುಂದುವರಿಸುವುದಾಗಿ ಎಚ್ಚರಿಸಿದೆ ಎಂದು ಐಆರ್‌ಐಬಿ ವರದಿ ಮಾಡಿದೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಐಆರ್‌ಜಿಸಿ ನೌಕಾಪಡೆ ಸ್ಪಷ್ಟವಾಗಿ ಘೋಷಿಸುತ್ತದೆ. ಅಪಾಯಕಾರಿ ಚಲನವಲನಗಳು ಮತ್ತು ಅನುಮತಿಯಿಲ್ಲದ ಸಂಚಾರದ ವಿರುದ್ಧ ನಾವು ಬಲವಾದ ಹಾಗೂ ನಿರಂತರ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.