ಪಾರ್ಕರ್

ಆ ದಿನ ಸಾವಿತ್ರಮ್ಮನ ಮುಖದಲ್ಲಿ ಎಲ್ಲಿಲ್ಲದ ಸಂತೋಷ. ಮುಂಜಾನೆ ಪಾರ್ಕ್‌ನಲ್ಲಿ ಸಿಕ್ಕವರಿಗೆಲ್ಲ...
ಪಾರ್ಕರ್
Updated on: 

 ಆ ದಿನ ಸಾವಿತ್ರಮ್ಮನ ಮುಖದಲ್ಲಿ ಎಲ್ಲಿಲ್ಲದ ಸಂತೋಷ. ಮುಂಜಾನೆ ಪಾರ್ಕ್‌ನಲ್ಲಿ ಸಿಕ್ಕವರಿಗೆಲ್ಲ 'ನಾನೂ ಅಮೆರಿಕಾಗೆ ಹೋಗ್ತೀನಿ. ಮಗ ಬಾ ಎಂದು ಬಲವಂತ ಮಾಡ್ತಿದಾನೆ. ಅವನಿಗ್ಯಾಕೆ ಬೇಜಾರು ಮಾಡ್ಬೇಕು, ಅಷ್ಟು ಪ್ರೀತಿಯಿಂದ ಕರೆದಾಗ ಹೋಗದಿರಲಾದೀತೇ?' ಎಂದು ಹೇಳುತ್ತಿದ್ದರು. ಹೋಗುವುದಕ್ಕೆ ಇನ್ನೂ ಎರಡು ತಿಂಗಳಿದ್ದರೂ ಆಗಲೇ ವಿಮಾನ ಹತ್ತುವ ಕಾತುರ ಕಾಣುತ್ತಿತ್ತು ಅವರ ಮುಖದಲ್ಲಿ.
ಸಾವಿತ್ರಮ್ಮ ದಿನನಿತ್ಯ ನನಗೆ ವಾಕಿಂಗ್‌ನಲ್ಲಿ ಸಿಗುವ ಹಿರಿಯ ಜೀವ. ಲಕ್ಷಣವಾದ ಮುಖ, ಎಲೆ ಅಡಿಕೆಯಿಂದ ಕೆಂಪಡರಿದ ತುಟಿಗಳು. ಒಂಟಿಯಾಗಿದ್ದಾರೆ. ಮನೆ ಬಾಡಿಗೆ ಬರುತ್ತೆ. ಒಬ್ಬ ಮಗಳು ಆಗಾಗ ಬರ್ತಾಳೆ. ಮಗ ಅಮೆರಿಕದಲ್ಲಿದ್ದಾನೆ. ಒಬ್ಬ ಮೊಮ್ಮಗನೂ ಇದ್ದಾನೆ. ವೀಸಾದ ತೊಂದರೆಯಾಗಿ ಮಗ ತಂದೆ ಮೃತರಾದಾಗಲೂ ಬರಲಾಗಲಿಲ್ಲ. ಬಂಧು ಬಳಗದವರೆಲ್ಲಾ 'ಈಗಿನ ಮಕ್ಕಳಿಗೆ ತಂದೆಗಿಂತಾ ದುಡ್ಡೇ ಹೆಚ್ಚು. ತಂದೆಯ ದೇಹಕ್ಕೆ ಕೊಳ್ಳಿ ಇಡದ ಮಗ ಇದ್ದೂ ಏನು ಪ್ರಯೋಜನ' ಎನ್ನುವ ಕೊಂಕು ಮಾತನಾಡಿದರು. ಗಂಡ ಕಾಲವಾದಾಗ ಮಗ ಬರಲಿಲ್ಲವೆಂಬ ಬೇಸರವಿದ್ದರೂ ಆತ ಕರೆದೊಡನೆ ಎಲ್ಲವನ್ನೂ ಮರೆತು ಮಗನ ಮನೆಗೆ ಹೋಗಲು ಸಂಭ್ರಮದಿಂದ ಸಿದ್ಧವಾದರು ಸಾವಿತ್ರಮ್ಮ.
ಮಗ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದ. ಈಕೆಯೂ ಧೈರ್ಯದ ಹೆಂಗಸೇ. ಅಂತೂ ಸಾವಿತ್ರಮ್ಮ ಅಮೆರಿಕ ತಲುಪಿದರು. ಇಲ್ಲಿನ ಹಿರಿಯರಿಗೆ ಅಲ್ಲಿನ ಎಲ್ಲ ಪದ್ಧತಿಗಳೂ ಸ್ವಲ್ಪ ಇರುಸು ಮುರುಸು. ಮುಖ್ಯವಾಗಿ ಶೌಚ. ವಾರದ ಕೊನೆಯ ದಿನಗಳಲ್ಲಿ ಮಗ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಹತ್ತು ವರ್ಷದ ಮೊಮ್ಮಗನಿಗೆ ಅಜ್ಜಿಯ ಹತ್ತಿರ ಹೆಚ್ಚು ಸಲುಗೆ ಇಲ್ಲ. ಅತ್ತೆ ಸೊಸೆಗೆ ಸದಾ ಮಾತನಾಡಲು ಏನಿರುತ್ತೆ? ಹೀಗಾಗಿ ತಿಂಗಳು ಕಳೆಯುವಷ್ಟರಲ್ಲಿ ಸಾವಿತ್ರಮ್ಮನಿಗೆ ಬೇಸರ, ಏಕಾಂಗಿತನ ಕಾಡಲಾರಂಭಿಸಿತು. ಅಲ್ಲಿನ ಪಾರ್ಕು, ರಸ್ತೆಗಳನ್ನು ನೋಡಿಕೊಂಡು ಕಾಲ ಕಳೆಯಲು ಸಾಧ್ಯವೇ? ಹಾಗಾಗಿ ಅವಧಿಗಿಂತ ಬೇಗನೇ ಬೆಂಗಳೂರಿಗೆ ಬಂದುಬಿಟ್ಟರು. 'ಅಬ್ಬಾ ಇಲ್ಲಿ ನಿರಾಳವಾಗಿ ಉಸಿರಾಡ್ತಾ ಇದ್ದೇನೆ. ಅಲ್ಲಿ ಉಸಿರುಗಟ್ಟಿದ ಹಾಗಿತ್ತು' ಎಂದರು. ಇಲ್ಲಿಗೆ ಬಂದೊಡನೆ ತಪ್ಪದೆ ಪಾರ್ಕ್, ಗೆಳತಿಯರ ಒಡನಾಟ ಅವರನ್ನು ಮತ್ತೆ ಮೊದಲಿನ ಸ್ಥಿತಿಗೆ ತಂದಿತು.
ಇದು ಬಹಳಷ್ಟು ತಂದೆ ತಾಯಿಯರು ಎದುರಿಸುತ್ತಿರುವ ಸಮಸ್ಯೆ. ಮಗ ವಿದೇಶಕ್ಕೆ ಹೋದ ಎಂದಾಗ ಹೆಚ್ಚು ಸಂಪಾದಿಸುತ್ತಾನೆ ಎಂದು ಸಂತೋಷವಾದರೂ ವೃದ್ಧಾಪ್ಯದ ದಿನಗಳಲ್ಲಿ ಅವರು ಅಲ್ಲಿಗೆ ಹೋಗಲಾಗುವುದಿಲ್ಲ, ಮಕ್ಕಳು ಅಲ್ಲಿಂದ ಬರಲಾರರು. ಮಕ್ಕಳು ಬನ್ನಿ ಎಂದು ಕರೆದರೂ, ಪ್ರೀತಿಯಿಂದ ನೋಡಿಕೊಂಡರೂ ಅಲ್ಲಿ ಇರಲು ಬಲು ಕಷ್ಟ. ಮನೆಯಲ್ಲಿರುವ ಮಕ್ಕಳಾಗಲೀ, ವಿದೇಶದಲ್ಲಿರುವವರಾಗಲೀ ಒಂದು ವಯಸ್ಸಿನ ನಂತರ ತಂದೆ ತಾಯಿ ಮತ್ತು ಮಕ್ಕಳ ನಡುವಿನ ಅಂತರ ಹೆಚ್ಚಾಗುತ್ತದೆ. ಏಕಾಂಗಿತನ ಕಾಡುತ್ತದೆ. ಇದು ಜೀವನದ ಸಂಜೆಯಲ್ಲಿ ಪ್ರತಿಯೊಬ್ಬರನ್ನೂ ಕಾಡುವ ನೋವು.
ಆ ದಿನಗಳಿಗಾಗಿ ಸರಿಯಾದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಮಾನಸಿಕವಾಗಿ ನಮ್ಮನ್ನು ನಾವು ಸಿದ್ಧ ಪಡಿಸಿಕೊಳ್ಳಬೇಕು. ಮಕ್ಕಳ ಮೇಲೆ ಎಷ್ಟೇ ಆಸೆ ಇದ್ದರೂ, ಮಕ್ಕಳಿಗೆ ಪೋಷಕರ ಮೇಲೆ ಮಮಕಾರವಿದ್ದರೂ ಜೀವನದ ಸಂಜೆಗೆ ಹಣವನ್ನು ಉಳಿಸಿಡಬೇಕಾಗುತ್ತದೆ. ಈಗ ಹಿರಿಯ ನಾಗರಿಕರಿಗಾಗಿಯೇ ಸಾಕಷ್ಟು ಯೋಜನೆಗಳಿವೆ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು.
ಆದರೆ ಎಷ್ಟೇ ಅನುಕೂಲಗಳಿದ್ದರೂ ಏಕಾಂಗಿತನಕ್ಕೆ ಮದ್ದಿಲ್ಲ. ಈ ನಿಟ್ಟಿನಲ್ಲಿ ಪಾರ್ಕುಗಳು ಬಹು ಸಹಕಾರಿ. ಪಾರ್ಕ್‌ನ ತುಂಬಾ ಹಿರಿಯ ನಾಗರಿಕರೇ ತುಂಬಿರುತ್ತಾರೆ. ಅವರವರೇ ಗುಂಪುಗಳನ್ನು ಮಾಡಿಕೊಂಡು ಪ್ರವಾಸಗಳಿಗೆ ಹೋಗುತ್ತಾರೆ. ನಗೆ ಕೂಟಗಳನ್ನು ಆಯೋಜಿಸುತ್ತಾರೆ. ಹೊರಗೆ ತಿರುಗಾಡುತ್ತಾರೆ. ದಿನಕ್ಕೆರಡು ಬಾರಿ ಪಾರ್ಕ್‌ಗೆ ಬಂದು ದುಃಖ-ದುಮ್ಮಾನಗಳನ್ನು ತೋಡಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ನಗುನಗುತ್ತಾ ಕಾಲ ಕಳೆಯುತ್ತಾರೆ. ಅವರಿಗೆ ದಿನದ ಸುಂದರ ಸಮಯವದು.
ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದಾಗ ಹಿರಿಯ ನಾಗರಿಕರಿಗೆ ಅದೊಂದು ವರವಾಗಿತ್ತು. ಈಗ ಅನಿವಾರ್ಯವಾಗಿಯೋ ಅಥವಾ ಯುವಜನರು ಮುಕ್ತತೆ ಬಯಸಿಯೋ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮಕ್ಕಳು ಜತೆಗಿದ್ದಾಗ ಅವರೊಡನೆ ಹೊಂದಾಣಿಕೆಯ ಬದುಕು ಲೇಸು. ಜೀವನದ ಹಂತಗಳಲ್ಲಿ ಇದೂ ಒಂದು. ಮಾನಸಿಕವಾಗಿ ನಾವು ಸಿದ್ಧರಾದಾಗ ಎಲ್ಲವೂ ಸುಲಭ ಸಾಧ್ಯ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ, ಎಲ್ಲಕ್ಕಿಂತ ಮನೋಬಲ ಮುಖ್ಯ. ಆದ್ದರಿಂದ ಇರುವ ತನಕ ಈಸಬೇಕು ಇದ್ದು ಜೈಸಬೇಕು.

-ಮಂಜುಳಾ ರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com