

ಪ್ರತಿ ಮಹಿಳೆಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಕೆಲವರು ತಮ್ಮಲ್ಲಿ ಅಡಕವಾದ ಸುಪ್ತ ಪ್ರತಿಭೆಯನ್ನು ಸಮಾಜದ ಮುಂದೆ ಅಭಿವ್ಯಕ್ತಿಸಲು ಸಂಕೋಚ ಪಡುತ್ತಾರೆ. ಮತ್ತೆ ಕೆಲವರು ತಮ್ಮ ಸೃಜನಶೀಲ ಕಲೆಯನ್ನೇ ಆದಾಯದ ಮೂಲವಾಗಿಸಿಕೊಳ್ಳಲು ಬಯಸುತ್ತಾರೆ. ಶಿರಸಿ ತಾಲೂಕು ಪುಟ್ಟನಮನೆ ಸನಿಹದ ಕೋಟಿಕೊಪ್ಪದ ಗೃಹಿಣಿ ಸುಜಾತಾ ಜಿ. ಹೆಗಡೆ ಇಂಥವರ ಸಾಲಿನಲ್ಲಿ ಸೇರುತ್ತಾರೆ.
ತದ್ದಲಸೆಯ ದಿ. ಆದಿನಾರಾಯಣ ಹಾಗೂ ಸುಶೀಲಾ ದಂಪತಿಗಳ ಮಗಳು ಸುಜಾತಾ ಹೆಗಡೆ ಐದನೇ ತರಗತಿಯಿಂದಲೇ ಕಸೂತಿ ಕಲೆಗೆ ಅಂಟಿಕೊಂಡವರು. ಶಾಲಾ ದಿನಗಳಲ್ಲಿ ಬಿಡುವಿನ ಸಮಯದಲ್ಲಿ ಉಲ್ಲನ್ ದಾರದಿಂದ ಏನನ್ನಾದರೂ ಸಿದ್ಧಪಡಿಸುವ ಕಾರ್ಯದಲ್ಲಿ ಮಗ್ನರಾಗುತ್ತಿದ್ದರು. ಪಿ.ಯು.ಸಿ. ಮುಗಿಯುತ್ತಿದ್ದಂತೆ ಕಂಕಣ ಭಾಗ್ಯ. ಕೈ ಹಿಡಿದ ಕೋಟಿಕೊಪ್ಪದ ಗಣಪತಿ ಹೆಗಡೆ ಮತ್ತು ಮನೆಯ ಸದಸ್ಯರಿಂದ ಸಿಕ್ಕ ಪ್ರೋತ್ಸಾಹ ಕಸೂತಿಯ ಕಲೆಯಲ್ಲಿ ಮುಂದುವರಿಯಲು ಉತ್ತೇಜನ ನೀಡಿತು.
ವಿಭಿನ್ನ ರೀತಿಯ ಬಾಗಿಲು ತೋರಣ, ಸಣ್ಣ ಮಕ್ಕಳ ಬಟ್ಟೆ, ಟೇಬಲ್ ಕ್ಲಾಥ್, ಸೀರೆಗೆ ಡಿಸೈನ್, ಆರತಿ ತಾಟಿಗೆ ವಿಶಿಷ್ಠ ಅಲಂಕಾರ, ಮುತ್ತಿನ ಜಡೆ, ವರಗಾಯಿ (ಮದುಮಗ ಕೈಯ್ಯಲ್ಲಿ ಹಿಡಿದುಕೊಳ್ಳುವ ತೆಂಗಿನ ಕಾಯಿ)ಗೆ ಅಲಂಕಾರ, ಆರತಿ ಕಟ್ಟು ಸಿದ್ಧಪಡಿಸುವುದು, ಬಗೆಬಗೆಯ ಬ್ಯಾಗ್ ತಯಾರಿಕೆ.... ಹೀಗೆ ಕಸೂತಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ 20 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಕೈಚಳಕದಲ್ಲಿ ರೂಪು ತಳೆದ ಉತ್ಪನ್ನಗಳನ್ನು ಶಿರಸಿಯ ಮಾರಿಕಾಂಬಾ ದೇವಸ್ಥಾನ, ಯೋಗವುಂದಿರ, ಸ್ವರ್ಣವಲ್ಲಿ ಮಠ ಇತ್ಯಾದಿ ಕಡೆಗಳಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲಿಯೇ ತಾವು ಸಿದ್ಧಪಡಿಸಿದ ವಸ್ತುಗಳ ಮಾರಾಟ.
ಮನೆ, ಕೃಷಿ ಕೆಲಸಗಳನ್ನು ಪೂರೈಸಿಕೊಂಡು ಕಸೂತಿ ಕಾರ್ಯದಲ್ಲಿ ಮುಳುಗುವ, ಅದರಿಂದ ಅಲ್ಪಸ್ವಲ್ಪ ಆದಾಯವನ್ನೂ ಗಳಿಸುತ್ತಿರುವ ಸುಜಾತಾ ಅವರನ್ನು ಅಭಿನಂದಿಸಲೇಬೇಕು. (ಸಂಪರ್ಕ: 08384-226659).
- ಚಿತ್ರ-ಬರಹ: ಗಣಪತಿ ಹಾಸ್ಪುರ