

ವೃದ್ಧಾಪ್ಯವೆಂದರೆ ಸಮಸ್ಯೆಗಳನ್ನು ನೆನೆದು ಕಂಗಾಲಾಗುವುದೇಕೆ? ನಿಜವಾಗಿ ವೃದ್ಧಾಪ್ಯವೆಂದರೆ ಸ್ವಾತಂತ್ರ್ಯ, ನೆಮ್ಮದಿ, ಜವಾಬ್ದಾರಿಗಳಿಂದ ಬಿಡುಗಡೆ ಅಲ್ಲವೇ? ವೃದ್ಧಾಪ್ಯ ಎಷ್ಟೊಂದು ಆಪ್ಯಾಯಮಾನ ಎನಿಸಲು ನಾವು ಮಾಡಬೇಕಾಗಿರುವುದಿಷ್ಟೇ, ನಮ್ಮ ವರ್ತನೆಯಲ್ಲಿ ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳು ಹಾಗೂ ಸಕಾರಾತ್ಮಕ ಯೋಚನೆಗಳು.
- ವೃದ್ಧಾಪ್ಯ ನಮಗೆ ಅನೇಕ ಸವಲತ್ತುಗಳನ್ನು ಒದಗಿಸಿಕೊಡುತ್ತದೆ. ಸೀನಿಯರ್ ಸಿಟಿಜನ್ಸ್ ಎಂಬ ಪಟ್ಟ ದೊರೆತೊಡನೆ ಹೋದಲ್ಲಿ ಬಂದಲ್ಲಿ ರಿಯಾಯಿತಿಗಳು, ಗೌರವ, ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಹುಡುಕಿಕೊಂಡು ಬರುತ್ತದೆ. ಈ ಸಂತೋಷ ಯಾರಿಗುಂಟು ಯಾರಿಗಿಲ್ಲ ಹೇಳಿ?
- ಸಮಯವೇ ಇಲ್ಲ ಎಂದು ಕಳೆದ 60 ವರ್ಷಗಳ ಬದುಕು ದಾಟಿದೊಡನೆ ನಮಗಿಷ್ಟ ಬಂದದ್ದನ್ನೆಲ್ಲ ಒಟ್ಟಿಗೇ ಮಾಡುವಷ್ಟು ಸಮಯ ಎದುರು ಕಾಲು ಚಾಚಿ ಮಲಗುತ್ತದೆ. ಹಾಗಾಗೇ ಹಿಂದೆ ಕಲಿಯಲಾಗದ ಸಂಗೀತ, ವಿವಿಧ ಭಾಷೆಗಳು, ಬಹಳ ವರ್ಷಗಳ ಹಿಂದೆ ಬಿಟ್ಟ ಕಲಾಪ್ರಕಾರವನ್ನು ಮತ್ತೆ ಒಲಿಸಿಕೊಳ್ಳಲು ಪ್ರಯತ್ನ ಮಾಡಬಹುದು. ಅನೇಕರು ಹೆಚ್ಚಿನ ಓದಿನಲ್ಲಿ ತೊಡಗಿಸಿಕೊಂಡು ಪಿಎಚ್ಡಿ ಕೂಡಾ ಮಾಡಿದ್ದಾರೆ ಎಂಬುದು ಅವರ ಜೀವನಪ್ರೀತಿಯನ್ನು ತೋರಿಸುವುದರೊಂದಿಗೆ ಇತರರಿಗೂ ಸ್ಫೂರ್ತಿಯಾಗಿದೆ.
- ಬಯಸಿ ಬಂದವರಿಗೆ ನಮ್ಮ ಅನುಭವಾಮೃತವನ್ನುಣಿಸುತ್ತಲೇ ಸಲಹೆ ಸೂಚನೆ ನೀಡಬಹುದು. ಹಾಗೆಂದು ಸಿಕ್ಕಸಿಕ್ಕವರಿಗೆಲ್ಲ ಬುದ್ಧಿಮಾತು ಹೇಳ ಹೊರಡುವುದು ಅವಮಾನ, ಅಸಡ್ಡೆಗೆ ಗುರಿಪಡಿಸಬಹುದೆಂಬ ಎಚ್ಚರಿಕೆ ಮನದಲ್ಲಿ ಜಾಗೃತವಾಗಿರಲಿ.
- ವಯಸ್ಸಿನಲ್ಲಿ ಉದ್ವೇಗಕ್ಕೊಳಗಾಗಿ ತಪ್ಪು ಹೆಜ್ಜೆಗಳನ್ನಿಟ್ಟಿರುತ್ತೇವೆ. ವಯಸ್ಸಾಗುತ್ತಿದ್ದಂತೆ ವಿವೇಚನೆ ಹೆಚ್ಚುತ್ತದೆ. ಹೆಚ್ಚಿನ ತಾಳ್ಮೆ ಒಳ್ಳೆ ನಿರ್ಧಾರ ತೆಗೆದುಕೊಳ್ಳಲು ಸಹಕರಿಸುತ್ತದೆ.
- ವಯಸ್ಸಾದಂತೆ ಔಟ್ ಡೇಟೆಡ್ ಆಗುತ್ತಿರುವ ಭಯ ಕಾಡುವುದು ಸಹಜ. ಕಂಪ್ಯೂಟರ್, ಮೊಬೈಲ್ ಬಗ್ಗೆ ತಿಳಿದಿಲ್ಲವೆಂದು ಕೀಳರಿಮೆಗೊಳಗಾಗುವುದರ ಬದಲು ಕಿರಿಯರ ಬಳಿ ಅವುಗಳ ಬಗ್ಗೆ ತಿಳಿಯಲು ಆಸಕ್ತಿ ತೋರಿದರೆ ಅಪ್ಟುಡೇಟೂ ಆಗಬಹುದು. ಜೊತೆಗೆ ಅವರೊಂದಿಗಿನ ಸಂಬಂಧವೂ ವೃದ್ಧಿಯಾಗುತ್ತದೆ.
- ಕಿರಿಯರು ಮಾಡುತ್ತಿರುವುದು ತಾವು ಹಿಂದೆ ಮಾಡಿದ್ದ ತಪ್ಪನ್ನೇ ಎಂಬುದನ್ನು ಅರಿತು ಕ್ಷಮಿಸಿಬಿಟ್ಟರೆ ಮನೆಯೊಳಗಿನ ಅನೇಕ ಸಮಸ್ಯೆಗಳಿಗೆ, ಮನಸ್ತಾಪಗಳಿಗೆ ಎಡೆಯೇ ಇರುವುದಿಲ್ಲ.
- ಹವ್ಯಾಸವಿದ್ದವರಿಗೆ ಸಮಯ ಕಳೆಯುವುದು ಸಮಸ್ಯೆಯಲ್ಲ. ವಯಸ್ಸಾದಂತೆ ಓದುವುದು, ಸಂಗೀತ ಆಲಿಸುವುದು, ಸತ್ಸಂಗ ಇತ್ಯಾದಿಗಳು ಹೆಚ್ಚಾಗಬೇಕು. ಈಗಂತೂ ತಂತ್ರಜ್ಞಾನ ಬೆಳೆದಂತೆ ಸಮಯ ಕಳೆಯಲು ಟಿವಿ, ಮೊಬೈಲ್ಗಳು ಅನೇಕ ಅವಕಾಶಗಳನ್ನು ಒದಗಿಸಿವೆ.
- ಮತ್ತೆ ಮಕ್ಕಳಂತೆ ಮೊಮ್ಮಕ್ಕಳೊಂದಿಗೆ ಯಾರು ಏನೆಂದುಕೊಳ್ಳುವರೋ ಎಂಬ ಭಯವಿಲ್ಲದೆ ಆಟವಾಡಬಹುದು.
- ನಿವೃತ್ತಿಯಾದ ಮೇಲೆ ಮನೆಯಲ್ಲಿ ಮರ್ಯಾದೆ ಕಡಿಮೆಯಾಗುತ್ತಿದೆ ಎಂಬ ಭ್ರಮೆ ಅನೇಕರಿಗೆ. ಕೆಲಸಕ್ಕೆ ಹೋಗುವವರಿಗೆ ಮೊದಲ ಆದ್ಯತೆ ಸಹಜ. ಮನೆಯಲ್ಲೇ ಇರುವವರಿಗೆ ಸ್ನಾನ, ತಿಂಡಿ ತಡವಾದರೆ ಅದನ್ನು ತಾತ್ಸಾರವೆಂದುಕೊಳ್ಳುವುದು ಸರಿಯಲ್ಲ. ವಾಸ್ತವದ ಅರಿವಿರಬೇಕು.
ಹಿರಿಯರ ಮೆದುಳಲ್ಲಿ ಅನೇಕ ಉಪಯುಕ್ತ ಮಾಹಿತಿಗಳಿರುತ್ತವೆ. ಅದರ ಸದುಪಯೋಗವಾಗಲು ಬೇಡದ ಮಾಹಿತಿಗಳನ್ನು, ಚಿಂತೆ, ಕೊರಗುಗಳನ್ನು ಹೊರಹಾಕಬೇಕು. ಹೊಸ ಯೋಚನೆ, ಮಾಹಿತಿಗೆ ಜಾಗ ಕಲ್ಪಿಸಬೇಕು. ಮೆದುಳು ಕಣಜವಾಗಬೇಕೇ ಹೊರತು ಕಸದಬುಟ್ಟಿಯಾಗಬಾರದು. ಅನುಭವ ಕಿರಿಯರ ಹಾದಿಯಲ್ಲಿ ದೀಪವಾಗಬೇಕು.
- ಕೃಷ್ಣ ಸುಬ್ಬರಾವ್