

ಇಂದು ಅವಿಭಕ್ತ ಕುಟುಂಬಗಳೇ ವಿರಳ. ಅಜ್ಜ- ಅಜ್ಜಿ ಅಂದ್ರಂತೂ ಅಷ್ಟಕ್ಕಷ್ಟೇ. ಹೀಗೆ ಅಲಕ್ಷ್ಯಕ್ಕೊಳಗಾದ ಹಿರಿಯ ಜೀವಗಳನ್ನೆಲ್ಲ ಒಂದೆಡೆ ಕಲೆಹಾಕಿ, ಅವರು ಬಹುವಾಗಿ ಪ್ರೀತಿಸುವ ಮೊಮ್ಮಕ್ಕಳೊಂದಿಗೆ ಬೆರೆಯಲು ಮುಕ್ತ ಅವಕಾಶ ಒದಗಿದರೆ ಅದಕ್ಕಿಂತ ಸೊಗಸು ಬೇರೊಂದಿಲ್ಲ. ಹಳೇ ಬೇರು, ಹೊಸ ಚಿಗುರು... ಬೆರೆತಾಗಲೇ ಮರ ಸೊಗಸು.
ಶಿಕ್ಷಣ, ಶೈಕ್ಷಣಿಕ ಪರಿಸರ, ಕಲೆ- ಸಾಹಿತ್ಯ, ಸಂಗೀತ, ಪಾಠ- ಪಠ್ಯ... ಹೀಗೆ ಹಲವು ರಂಗಗಳಲ್ಲಿ ಸದಾ ಭಿನ್ನವಾಗಿಯೇ ನಿಲ್ಲುವ ಸರ್ವಜ್ಞ ಕಾಲೇಜು, ಜಸ್ಟಿಸ್ ಶಿವರಾಜ ಪಾಟೀಲ್ ವಿದ್ಯಾಲಯಗಳು ಸೇರಿ ಗುಲ್ಬರ್ಗದ 'ಸರ್ವಜ್ಞ ಚಿಣ್ಣರ ಲೋಕ'ದ ಅಂಗಳದಲ್ಲಿ 'ಹಳೇ ಬೇರು, ಹೊಸ ಚಿಗುರು' ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ಅಜ್ಜ, ಅಜ್ಜಿ, ಮೊಮ್ಮಕ್ಕಳ ದಂಡೇ ಸೇರಿತ್ತು.
ಅಲ್ಲಿ ಸೇರಿದ್ದ ಅಜ್ಜ- ಅಜ್ಜಿಯರು ತಮ್ಮ ಮುಪ್ಪನ್ನು ಮೆಟ್ಟಿ ನಿಲ್ಲಲು ಯತ್ನಿಸಿದರು. ಮೊಮ್ಮಕ್ಕಳು ಹಿರಿಯರೊಂದಿಗೆ ಬೆರೆತು ಹೋಮ್ ವರ್ಕ್ನ ತಲೆಶೂಲೆ, ಅಮ್ಮ- ಅಪ್ಪನ ಗದರುವಿಕೆಗಳನ್ನೆಲ್ಲ ಮರೆತು ಅಜ್ಜ- ಅಜ್ಜಿಯೊಂದಿಗೆ ಆಟವಾಡಿದರು. ಅಜ್ಜ- ಅಜ್ಜಿ ಬೇರಿಗೂ, ಮೊಮ್ಮಕ್ಕಳೆನ್ನುವ ಚಿಗುರಿಗೂ ಸಂಬಂಧ ಸೇತುವೆ ಕಲ್ಪಿಸಿದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ್ ಸೇರಿದಂತೆ ನೂರಾರು ಮಂದಿ ಸಂಭ್ರಮಿಸಿದರು.
ಮೊಮ್ಮಕ್ಕಳೊಂದಿಗೆ ಬೆರೆತ ಅಜ್ಜ- ಅಜ್ಜಿಯರು ಕಣ್ಣಾಮುಚ್ಚಾಲೆ, ಮ್ಯೂಸಿಕಲ್ ಚೇರ್... ಹೀಗೆ ಆಟೋಟಗಳನ್ನಾಡಿದರಲ್ಲದೆ ಹಾಡು ಹೇಳುವ, ಕಥೆ ಹೇಳುತ್ತ ಮೊಮ್ಮಕ್ಕಳನ್ನು ಅಪ್ಪಿ ಮುದ್ದಾಡಿದರು. ಸ್ವಾತಂತ್ರ್ಯ ಹೋರಾಟಗಾರ ನಿಂಗಪ್ಪ ಮೂಲಗೆ ದಂಪತಿ, ಜಿ.ಕೆ. ಮರಿಗೌಡ ದಂಪತಿ, ಗುಡೇರಾವ ಪಾಟೀಲ್ ದಂಪತಿ, ದೇವೇಂದ್ರಪ್ಪ ಬಡಿಗೇರ ದಂಪತಿ ಅವರನ್ನು ಸನ್ಮಾನಿಸಲಾಯಿತು.
'ಹಿರಿಯರಿಲ್ಲದ ಮನೆ, ಗುರುವಿಲ್ಲದ ಮಠ ಎರಡೂ ವ್ಯರ್ಥ' ಎಂಬ ಜಾಣ್ಣುಡಿಯೇ ಇದೆ. ಇಂದಿನ ಚಿಕ್ಕ- ಚೊಕ್ಕ ಕುಟುಂಬ ಪರಿಕಲ್ಪನೆಯಲ್ಲಿ ಹಿರಿಯ ಜೀವಗಳು ಕಾಲಕಸ, ಇಂಥ ಧೋರಣೆಯೇ ಪೀಳಿಗೆಯಿಂದ ಪೀಳಿಗೆಗೆ ಸಾಗುವ ಅಪಾಯ ಎದುರಾಗಿರುವ ಸಂದರ್ಭದಲ್ಲೇ ಸರ್ವಜ್ಞ ಚಿಣ್ಣರ ಅಂಗಳದಲ್ಲಿ ನಡೆದ ಈ ಸಮಾವೇಶ ಹಿರಿಯರ ಕುರಿತಂತೆ ಸಾಗಿರುವ ಚಿಂತನೆಯ ದಿಕ್ಕು- ದೆಸೆಯನ್ನೇ ಬದಲಿಸುವಷ್ಟು ಪರಿಣಾಮಕಾರಿಯಾಗಿ ಮೂಡಿಬಂತು. ಮೊಮ್ಮಕ್ಕಳು, ಅಜ್ಜ- ಅಜ್ಜಿ ನಡುವಿನ ಪ್ರೀತಿ ಹಾಗೂ ವಿಶ್ವಾಸವನ್ನು ಮಾರುಕಟ್ಟೆಯಲ್ಲೂ ಖರೀದಿಸಲು ಸಾಧ್ಯವಿಲ್ಲ. ಆದರೆ, ಈ ಕಾರ್ಯಕ್ರಮ ಆ ಪ್ರೀತಿ ವಿಶ್ವಾಸ ಅಗಾಧವಾಗಿ ವಿಜೃಂಭಿಸುತ್ತಿತ್ತು.
ಮಾನವೀಯತೆ ಬೇಕು...
ವಿವಿಗಳಿಂದ ಪದವಿಗಳು, ಗೋಲ್ಡ್ ಮೆಡಲ್, ರ್ಯಾಂಕ್ಗಳನ್ನು ಪಡೆದವರು ಮಾನವೀಯತೆ ಮೈಗೂಡಿಸಿಕೊಳ್ಳದಿದ್ದರೆ ಪ್ರಯೋಜನವಿಲ್ಲ. ಆದ್ದರಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವಂಥ ಕೆಲಸವನ್ನು ಇಂದು ಶಾಲಾ- ಕಾಲೇಜು ಮಾಡಬೇಕಿದೆ. ಹಿರಿಯರಿಲ್ಲದ ಕುಟುಂಬಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಹಿರಿಯರಿರುವ ಕುಟುಂಬದಲ್ಲಿ ಸಮಸ್ಯೆಗಳು ಕಡಿಮೆ. ಹಿರಿಯರ ಮಾರ್ಗದರ್ಶನ ಇಂದಿನ ಜನಾಂಗಕ್ಕೆ ಅಗತ್ಯ. ಹಾಗಾಗಿ, ಈ ಸಮಾವೇಶ ಹಮ್ಮಿಕೊಂಡೆವು.
- ಗೀತಾ ಚೆನ್ನಾರೆಡ್ಡಿ ಪಾಟೀಲ್, ಅಧ್ಯಕ್ಷರು, ಸರ್ವಜ್ಞ ಚಿಣ್ಣರ ಲೋಕ ಸಂಸ್ಥೆ
- ಚಿತ್ರ- ಲೇಖನ: ಶೇಷಮೂರ್ತಿ ಅವಧಾನಿ