ರಾಮಕೃಷ್ಣ ಮಿಷನ್

ರಾಮಕೃಷ್ಣ ಮಿಷನ್
Updated on: 

ಹಾದಿಗಲ್ಲು ಕ್ಷೇತ್ರದಲ್ಲಿ ಭೂತರಾಜರ ದರ್ಶನ ಎಂದರೆ ಭಕ್ತರ ಕಣ್ಮುಂದೆ ಬರುವುದು ಪಾತ್ರಿ ರಾಮಕೃಷ್ಣರಾಯರು. ಪ್ರತಿ ತಿಂಗಳು ಸಂಕ್ರಮಣದಂದು ನಡೆಯುತ್ತಿದ್ದ ಸೋದೆ ಶ್ರೀ ನಾರಾಯಣ ಭೂತರಾಜರ ದರ್ಶನ ಪಾತ್ರಿಯಾಗಿ ಭಕ್ತರಿಗೆ ಅನ್ನ, ಅಭಯದಾನ ನೀಡುವ ಮೂಲಕ ಸಾವಿರಾರು ಮನೆಗಳಲ್ಲಿ ಭರವಸೆಯ ದೀಪದ ಬೆಳಕು ಮೂಡಿಸಿದ್ದಾರೆ.
ನಡುವಿನ ಮನೆಯೆಂದೇ ಖ್ಯಾತವಾದ ಹಾದಿಗಲ್ಲು ಶ್ರೀನಿವಾಸರಾಯರ ಮನೆತನದಲ್ಲಿ ಜನಿಸಿದ ಧರ್ಮದರ್ಶಿ ಹಾದಿಗಲ್ಲು ರಾಮಕೃಷ್ಣರಾಯರು ಪಡೆದಿದ್ದು ಮಾಧ್ಯಮಿಕ ಶಾಲಾ ಶಿಕ್ಷಣ. ಅವರ ಅಲೌಕಿಕ ಜ್ಞಾನಸಂಪತ್ತು ಅಪಾರ. ಅನೇಕ ಸಮಾಜಮುಖಿ ಕಾರ್ಯಗಳಲ್ಲೂ ಅವರು ತೊಡಗಿಕೊಂಡಿದ್ದರು.
ಕ್ಷೇತ್ರದಲ್ಲಿ ವಿಶಿಶ್ಟ ವಾಸ್ತುವಿನ ಅಭಯ ಲಕ್ಷ್ಮೀನರಸಿಂಹ ದೇವಾಲಯ ನಿರ್ಮಾಣ, ಭಕ್ತಾದಿಗಳಿಗಾಗಿ ಉಚಿತ   ಕಲ್ಯಾಣ ಮಂದಿರ ಮತ್ತು ಸಭಾಗೃಹ ನಿರ್ಮಾಣ ರಾಯರಿಗೆ ಕ್ಷೇತ್ರಕ್ಕೆ ಬರುವ ಭಕ್ತರ ಬಗ್ಗೆ ಇದ್ದ ಕಾಳಜಿಯ ಪ್ರತೀಕ.
ಶ್ರೀ ವಾದಿರಾಜರರಿಗೆ ಕೃಷಿ ಕ್ಷೇತ್ರದಲ್ಲಿ ಅಮಿತ ಆಸಕ್ತಿ. ಅಂತೆಯೇ ಸಾವಯವ ಕೃಷಿಗೆ ಉತ್ತೇಜನ ನೀಡಲು ರಾಯರು ವಾದಿರಾಜ ಸಂಸ್ಕೃತಿ ಸಂವರ್ಧನ ಸಭಾ ಟ್ರಸ್ಟ್ ರಚಿಸಿ ಸಂಸ್ಥಾಪಕ ನಿರ್ವಾಹಕ ವಿಶ್ವಸ್ಥರಾಗಿ, ದೇಗುಲದ ಧರ್ಮದರ್ಶಿಯಾಗಿ ಅನೇಕ ಜನೋಪಕಾರಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಲಾಪ್ರೇಮಿಯೂ ಆಗಿದ್ದ ಅವರು, ಸಾಗರ ತಾಲೂಕಿನ ಬೆಳೆಯೂರು ಮೇಳ ಮತ್ತು ಹೊಸ್ತೋಟ ಮಂಜುನಾಥ ಭಾಗವತರ ಮಾರ್ಗದರ್ಶನದಲ್ಲಿ ಹಲವು ಯಕ್ಷಗಾನ ಸಪ್ತಾಹಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಯಕ್ಷಗಾನ ತರಬೇತಿ ಕೇಂದ್ರದ ಮೂಲಕ ಉಭಯ ತಿಟ್ಟುಗಳ ಕಲಾಪ್ರದರ್ಶನಕ್ಕೆ ವೇದಿಕೆ ಒದಗಿಸುತ್ತಿದ್ದರು. ಅವರ ಉತ್ತೇಜನದಿಂದಲೇ ಸ್ಥಾಪಿತವಾದ ಹಾದಿಗಲ್ಲು ಅಭಯಲಕ್ಷ್ಮೀನರಸಿಂಹ ಕೃಪಾಪೋಷಿತ ಯಕ್ಷಗಾನ ಮಂಡಳಿ ಇಪ್ಪತ್ತಕ್ಕೂ ಹೆಚ್ಚು ಎಳೆಯರಿಗೆ ತರಬೇತಿ ನೀಡಿ ರಂಗಪ್ರವೇಶ ಮಾಡಿಸುವಲ್ಲಿ ಯಶಸ್ವಿಯಾಗಿದೆ.
ಹಳ್ಳಿಯ ಕೂಲಿ ಕಾರ್ಮಿಕರು, ಬಡ ರೈತರಿಗೆ ಆರ್ಥಿಕ ನೆರವು ಒದಗಿಸಲು ಅಭಯಮ್ ಸೌಹಾರ್ದ ಪತ್ತಿನ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ರಾಮಕೃಷ್ಣರಾಯರು ಸಹಕಾರ ಕ್ಷೇತ್ರದಲ್ಲೂ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ.
ಸಾಹಿತ್ಯ ಸಂಸ್ಕೃತಿ ಸಂರಕ್ಷಣೆ, ಸಂವರ್ಧನೆಗಾಗಿ ಪ್ರತಿವರ್ಷ ಆಲಯದ ವರ್ಧಂತಿ ಸಂದರ್ಭದಲ್ಲಿ ಸಾಹಿತ್ಯ ಸಂಸ್ಕೃತಿ ಉತ್ಸವ, ಸಂಗೀತ ನೃತ್ಯ, ಭಜನೆ, ಉಪನ್ಯಾಸಗಳನ್ನು ಹಮ್ಮಿಕೊಳ್ಳುತ್ತ ಸಾಂಸ್ಕೃತಿಕ ಅಭಿರುಚಿ ಮೂಡಿಸುವಲ್ಲಿಯೂ ಸಫಲರಾಗಿದ್ದರು. ಇಂಥಹ ರಾಯರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಇಹಲೋಕ ತ್ಯಜಿಸಿದರು. ಹಾದಿಗಲ್ಲು ನಿಜಕ್ಕೂ ಅನಾಥವಾಗಿದೆ.
- ಜಿ.ಆರ್. ಸತ್ಯನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com