

ಕಣ್ಣು ಕುರುಡಾದಾರೂ ಮನಸ್ಸು ಕುರುಡಲ್ಲ ಎಂಬುದನ್ನು ಸತ್ಯ ಮಾಡಿದ್ದಾಳೆ ಈಕೆ. ಗಂಡನ ಕೈ ಹಿಡಿದು ನಡೆಸಿ ಊರುಗೋಲಾಗಿ ಬದುಕುತ್ತಿದ್ದಾಳೆ. ಈ ಆದರ್ಶ ದಂಪತಿಯದು ಗುತ್ತಿಗಾರಿನ ಅಚಳ್ಳಿ ಎಂಬ ಪುಟ್ಟ ಗುಡಿಸಲಲ್ಲಿ ವಾಸ್ತವ್ಯ.
ಗುರುವನಿಗೆ 85 ವರ್ಷ, ಐತೆಗೆ 70 ವರ್ಷ. ದಾಂಪತ್ಯದ 50 ವರ್ಷಗಳನ್ನು ಸಹಬಾಳ್ವೆಯಿಂದ ಕಳೆದಿದ್ದಾರೆ. ಗುರುವನಿಗೆ ಬಾಲ್ಯದಿಂದಲೇ ಕಣ್ಣು ಕಾಣಿಸುತ್ತಿಲ್ಲ. ಆದರೂ, ಆತನ ಕೈ ಹಿಡಿದು ಮುನ್ನಡೆಸಿ ಆತನಿಗಾಗಿ ಬದುಕು ಮೀಸಲಿಟ್ಟ ದಿಟ್ಟ ಮಹಿಳೆ ಐತೆ. ಮನೆಯಿರಲಿ, ಹೊರಗೆ ಎಲ್ಲಿಗೇ ಹೊರಡಲಿ. ಒಬ್ಬರನ್ನೊಬ್ಬರು ಬಿಟ್ಟು ಹೋದ ಉದಾಹರಣೆ ಇಲ್ಲ. ಗುರುವನ ಕೈ ಹಿಡಿದುಕೊಂಡೇ ಆಕೆ ನಡೆಸುತ್ತಾಳೆ.
ಇವರದು ದಲಿತ ಕುಟುಂಬ. ಕಡು ಬಡತನ. ಕಟ್ಟಿಗೆ ಮಾರಿ, ಅಡಕೆ ಸುಲಿದು ಹೊಟ್ಟೆ ಹೊರೆದುಕೊಳ್ಳುತ್ತಾರೆ. ಕೆಲಸಕ್ಕೂ ಜತೆಯಾಗಿಯೇ ತೆರಳುತ್ತಾರೆ. ಕಣ್ಣು ಕಾಣದಿದ್ದರೂ ಗ್ರಹಿಸುವ ಶಕ್ತಿಯಿಂದ, ಹೆಂಡತಿಯ ಸಹಾಯದಿಂದ ಲೀಲಾಜಾಲವಾಗಿ ಅಡಕೆ ಸುಲಿಯುತ್ತಾನೆ ಗುರುವ.
ಮಾದರಿ ಹೆಣ್ಣು
ಗಂಡನಿಗೆ ಸಾಥ್ ನೀಡಿ ಅಡಕೆ ಸುಲಿಯುವ ಕೆಲಸದಲ್ಲಿ ತಲ್ಲೀನಳಾಗುತ್ತಾಳೆ. ಪ್ರತಿದಿನ ಜತೆಯಲ್ಲೇ ಕಾಡಿಗೆ ತೆರಳಿ ಕಟ್ಟಿಗೆ ಸಂಗ್ರಹಿಸಿ 2 ಕಟ್ಟು ಮಾಡಿ ಇಬ್ಬರೂ ಭಾರವಾದ ಕಟ್ಟಿಗೆ ಹೊರೆ ತಲೆ ಮೇಲೆ ಹೊತ್ತುಕೊಳ್ಳುತ್ತಾರೆ. ಐತೆ ತಲೆಯಲ್ಲಿರುವ ಹೊರೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಗಂಡನ ಕೈ ಹಿಡಿದು 4 ಕಿ.ಮೀ. ಕ್ರಮಿಸಿ ಗುತ್ತಿಗಾರುವಿನ ಹೋಟೆಲ್ಗೆ ಮಾರುತ್ತಾರೆ. ಅದರಿಂದ ಬಂದ ದುಡ್ಡೇ ಹೊಟ್ಟೆ ತುಂಬಿಸಬೇಕು. ಇವರ ಈ ಸ್ಥಿತಿ ಕಂಡಾಗ ಎಂಥವರ ಮನವೂ ಕಲಕದಿರದು.
ತಲೆಯಲ್ಲಿ ಕಟ್ಟಿಗೆ ಹೊತ್ತು ಕೈ ಹಿಡಿದು ಬರುವ ಈ ದಂಪತಿಯನ್ನು ನಿತ್ಯವೂ ಸಂಜೆ ಹೊತ್ತು ಗುತ್ತಿಗಾರು ಪೇಟೆಯಲ್ಲಿ ಕಾಣಬಹುದು. ಜೀವಮಾನದ ಉದ್ದಕ್ಕೂ ಗಂಡನಿಗಾಗಿ ಬದುಕನ್ನು ತ್ಯಾಗ ಮಾಡುವ ಹೆಣ್ಣು ಕಾಣಸಿಗುವುದು ಕಷ್ಟ. ಅಂತಹ ಸ್ಥಿತಿಯಲ್ಲಿ ಈ ಹೆಣ್ಣು ಸಮಾಜಕ್ಕೊಂದು ಮಾದರಿ. ಆಧುನಿಕ ಗಾಂಧಾರಿ ಎಂದು ಕರೆದರೂ ತಪ್ಪಾಗದು.
ಸೂರಿಗಾಗಿ ಕಣ್ಣೀರು
ದುರಾದೃಷ್ಟ ನೋಡಿ. ಇವರಿಗೆ ಮಕ್ಕಳೇ ಎರವಾಗಿದ್ದಾರೆ. ಒಬ್ಬ ಮಗಳನ್ನು ಮದುವೆ ಮಾಡಿ ಕೊಡಲಾಗಿತ್ತು. ಗಂಡನ ಮನೆಯಲ್ಲಿ ಇರಬೇಕಾದ ಮಗಳು ಆ ಮನೆ ಬಿಟ್ಟು ಅತ್ತೆ ಮಾವನೊಂದಿಗೆ ತವರು ಮನೆ ಸೇರಿದ್ದಾಳೆ. ಇದೇ ಮನೆಯಲ್ಲಿ ಮಗನ ಸಂಸಾರವೂ ನಡೆಯುತ್ತಿದೆ. ಅದಕ್ಕೆಂದೇ ಈ ದಂಪತಿ ತಾವೇ ಮನೆ ಬಿಟ್ಟು ಹೊರ ಬಂದಿದ್ದಾರೆ. ನೊಂದ ಜೀವಗಳು ಆಸರೆ ಕಳೆದುಕೊಂಡು ತಮ್ಮ ಬದುಕಿನ ಕೊನೆಯ ದಿನಗಳನ್ನು ನೋವಿನಲ್ಲಿ ಕಳೆಯುತ್ತಿವೆ. ತಮ್ಮ ವಾಸ್ತವ್ಯಕ್ಕೊಂದು ಸೂರು ನೀಡುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು, ಸಮಾಜಸೇವಕರು ನೆರವು ನೀಡಲು ಮುಂದಾದಲ್ಲಿ ಈ ವೃದ್ಧ ದಂಪತಿಗೆ ನೆರವಾಗಬಹುದು. (ಅಕೌಂಟ್ ನಂ. 018501000008959, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸುಬ್ರಹ್ಮಣ್ಯ ವಲಯ, ಕಾರ್ಯನಿರತ ಪತ್ರಕರ್ತರ ಸಂಘ, ಕುಕ್ಕೆ ಸುಬ್ರಹ್ಮಣ್ಯ,ಐಎಫ್ಎಸ್ಸಿ ಕೋಡ್-ಐಓಬಿಎ0000185.)
ದಿಕ್ಕಿಲ್ಲ ಎಮಗೆ...
'ನಮಗೆ ಇಬ್ಬರು ಮಕ್ಕಳು, 1 ಗಂಡು, 1ಹೆಣ್ಣು. ಮಗಳನ್ನು ಮದುವೆಯಾಗಿದೆ. ಅತ್ತೆ ಮನೆಯಲ್ಲಿ ಕಿರುಕುಳ ಇದೆ ಎಂದು ಅರಿತ ನಾವು ಕರುಳ ಬಳ್ಳಿ ಹಿಂಸೆ ಅನುಭವಿಸಬಾರದು ಎಂದುಕೊಂಡು ಮನೆಗೆ ಬರುವಂತೆ ಹೇಳಿದ್ದೆವು. ಅವಳ ಜತೆ ಅತ್ತೆ ಮಾವ ಕೂಡ ನಮ್ಮ ಮನೆಗೇ ಬಂದುಬಿಟ್ಟರು. ಮನೆಯಲ್ಲಿ ರಂಪಾಟ ಸುರುವಾಯಿತು. ಅವರೊಂದಿಗೆ ನನ್ನ ಮಗನೂ ಸೇರಿಕೊಂಡ. ಹೀಗಾಗಿ ನಾವು ಮನೆ ಬಿಟ್ಟು ಹೊರ ಬರಬೇಕಾಯಿತು. ಈಗ ನಮಗೆ ಗತಿಯಿಲ್ಲ. ಕೊನೆಗಾಲದಲ್ಲಿ ನಮ್ಮನ್ನು ನೋಡುವವರಾರು' ಎಂದು ಮುಂದಿನ ದಿನಗಳನ್ನು ನೆನೆಸುತ್ತಾ ಬಿಕ್ಕಿಬಿಕ್ಕಿ ಅಳುತ್ತಾಳೆ ಐತೆ.
-ಬಾಲಕೃಷ್ಣ ಭೀಮಗುಳಿ