

ಕುಲಿಗೋಡರು ಬೇರೆ ಊರಿಗೆ ಹೋದರೆ ಬರಿಗೈಲಿ ಬರುವುದೇ ಇಲ್ಲ. ಮಕ್ಕಳಿಗೆಲ್ಲ ಸ್ವೀಟು, ಚಾಕಲೇಟ್ ತಂದಿರ್ತಾರೆ ಬಿಡಿ. ಅದರ ಜತೆ ಒಂದಷ್ಟು ಗಿಡಗಳನ್ನೂ ಹೊತ್ತು ಬಂದಿರ್ತಾರೆ.
68ರ ಇಳಿವಯಸ್ಸಿನಲ್ಲಿಯೂ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಕುಲಿಗೋಡ ಅವರ ಜೀವನಶೈಲಿ ಎಲ್ಲರಿಗೂ ಮಾದರಿ. ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮ ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಈ ಗ್ರಾಮದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕೆ.ಜಿ. ತರಗತಿಗಳಿಂದ ಪಿ.ಜಿ. ತರಗತಿಗಳವರೆಗೆ ಹಲವಾರು ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಡಾ. ಚಂದ್ರು ಬಿ. ಕುಲಿಗೋಡ ಸಂಸ್ಥೆಯ ಸಾರಥ್ಯ ವಹಿಸಿದ್ದಾರೆ.
ಅನೇಕ ವರ್ಷಗಳಿಂದ ದಣಿವಿಲ್ಲದೆ ನಿರಂತರವಾಗಿ ಶಿಕ್ಷಣ, ಕೃಷಿಯಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿರುವ ಇವರು ಸಂಸ್ಥೆಯ ಎಂಟು ಎಕರೆ ಜಮೀನಿನಲ್ಲಿ ಹಲವಾರು ಗಿಡ ಮರ, ಹೂವುಗಳ ತೋಟ ಬೆಳೆಸಿ ಸ್ವತಃ ತಾವೇ ಪೋಷಿಸುತ್ತಿದ್ದಾರೆ.
ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೂ ಸಂಸ್ಥೆಯ ಆವರಣದಲ್ಲಿ ಪಾದರಸದಂತೆ ಓಡಾಡಿ ಎಲ್ಲ ಗಿಡಮರಗಳ ಆರೈಕೆ ಮಾಡುತ್ತಾರೆ. ಸಂಸ್ಥೆಯ ಉದ್ಯಾನದಲ್ಲಿ ಹಲವು ವಿಧದ ಹಣ್ಣಿನ ಗಿಡಗಳನ್ನು ಬೆಳೆಸಿ ಆರೋಗ್ಯಕರ ಪರಿಸರ ನಿರ್ಮಿಸಿದ್ದಾರೆ. ಜೊತೆಗೆ ಪರಿಸರ ಮಾಲಿನ್ಯ ತಡೆಯಲು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ.
ಯಾವುದೇ ನಗರಗಳಿಗೆ ಹೋದರೂ ಒಂದೆರಡು ಗಿಡಗಳನ್ನಾದರೂ ತರುವುದು ಅವರ ಹವ್ಯಾಸ. ಸಂಸ್ಥೆಯ ಆವರಣದಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆಸಿದ್ದಾರೆ. ಇವರು ಬೆಳೆಸಿದ ತರಕಾರಿಗಳನ್ನೇ ಶಾಲೆಯ ಮಕ್ಕಳಿಗೆ ಕೊಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಬಳಸಲಾಗುತ್ತದೆ.
ಪರಿಸರಪ್ರೇಮಿಯಾದ ಇವರು ಪರಿಸರ ನಾಶ ಮಾಡುವ ಪ್ಲಾಸ್ಟಿಕ್ ಬಾಟಲಿಗಳನ್ನು ಒಟ್ಟುಗೂಡಿಸಿ, ಅದನ್ನು ಹನಿನೀರಾವರಿಗೆ ಉಪಯೋಗಿಸಿಕೊಂಡಿದ್ದಾರೆ. ಇದು ಅವರಲ್ಲಿನ ಸೃಜನಶೀಲತೆಯನ್ನು ತೋರಿಸುತ್ತದೆ. ಇದರಿಂದ ಸಂಸ್ಥೆಯ ಆವರಣವು ವರ್ಷವಿಡೀ ಹಚ್ಚಹಸುರಿನಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ (ಸಂಪರ್ಕ: 9880509322).
- ಚಿದಾನಂದ ಅ. ಪಾಟೀಲ