ಹಿರಿಯ ನಾಗರಿಕರ ಸುರಕ್ಷತೆ ಹಾಗೂ ಭದ್ರತೆ ನೋಡಿಕೊಳ್ಳುವುದು ಸಮಾಜದ ಎಲ್ಲರ ಕಳಕಳಿ ಹಾಗೂ ಜವಾಬ್ದಾರಿ. ಆದರೆ, ನಗರ ಪ್ರದೇಶಗಳಲ್ಲಿ ಇಂದು ಹಿರಿಯರಿಗೆ ಭದ್ರತೆ ಹಾಗೂ ಸುರಕ್ಷತೆ ಇಲ್ಲದಂತಾಗಿದೆ. ಶಾರೀರಿಕವಾಗಿ ದುರ್ಬಲರಾಗಿರುವ ಹಾಗೂ ಒಂಟಿಯಾಗಿರುವ ಹಿರಿಯರು ಅಪರಾಧಿಗಳ ಕೈಗೆ ಸುಲಭ ತುತ್ತಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಹೆಚ್ಚುವರಿ ಬೀಟ್ ಪೊಲೀಸರನ್ನು ನಿಯೋಜಿಸಿದ್ದರೂ, ಸ್ಥಳೀಯ ಸಂಘ-ಸಂಸ್ಥೆಗಳು, ನಾಗರಿಕರು ಎಷ್ಟೇ ಎಚ್ಚರದಿಂದಿದ್ದರೂ ಅಪರಾಧಿಗಳು ಕೈಚಳಕ ತೋರಿಸುತ್ತಲೇ ಇದ್ದಾರೆ. ಹಾಗಾಗಿ ಹಿರಿಯರು ಸುರಕ್ಷತೆಗೆ ಕೆಲವು ಭದ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಹುದು.
- ಮನೆಯ ಕಿಟಕಿ, ಬಾಗಿಲುಗಳಿಗೆ ಕಬ್ಬಿಣದ ಗ್ರಿಲ್ ಅಳವಡಿಸಿಕೊಳ್ಳಿ. ಬಾಗಿಲಿಗೆ ಸ್ವಯಂಚಾಲಿತ ಅಲಾರ್ಮ್ ಅಳವಡಿಸಿಕೊಳ್ಳಿ.
- ಬೆಲೆಬಾಳುವ ವಸ್ತುಗಳನ್ನು ಮನೆಯ ಸುತ್ತಮುತ್ತ ಇಡಬೇಡಿ.
- ಮನೆಯ ಮುಖ್ಯ ಬಾಗಿಲಿಗೆ 'ಮ್ಯಾಜಿಕ್ ಐ' ಅಳವಡಿಸಿ.
- ನಿಮ್ಮ ಬಳಿ ಇರುವ ಹಣ ಹಾಗೂ ಆಭರಣಗಳನ್ನು ಯಾರ ಮುಂದೂ ಪ್ರದರ್ಶಿಸಬೇಡಿ.
- ಮನೆಯಲ್ಲೊಂದು ನಾಯಿಯನ್ನು ಸಾಕಿಕೊಳ್ಳಿ.
- ಅಪರಿಚಿತರನ್ನು ನಂಬಬೇಡಿ ಹಾಗೂ ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ.
- ಮನೆಯ ಹೊರಗೆ ಹೋಗುವಾಗ ಪರಿಚಯದವರ ಜತೆ ಮಾತ್ರ ಹೋಗಿ.
- ನೆರೆಹೊರೆಯವರೊಂದಿಗೆ ಸೌಹಾರ್ದದಿಂದಿರಿ. ನಿಮ್ಮ ಮನೆಯಿಂದ ನೆರೆಮನೆಗೆ ಸಂಪರ್ಕ ಕಲ್ಪಿಸುವಂತೆ ಒಂದು ತುರ್ತು ಅಲಾರ್ಮ್ ಅಳವಡಿಸಿಕೊಳ್ಳಿ.
- ಅನುಮಾನಾಸ್ಪದವಾಗಿರುವ ಯಾವ ಘಟನೆಗಳನ್ನೂ ನಿರ್ಲಕ್ಷಿಸದೆ ಪೊಲೀಸರಿಗೆ ತಿಳಿಸಿ.
- ತುರ್ತು ಪ್ರಮುಖ ದೂರವಾಣಿ ಸಂಖ್ಯೆಗಳನ್ನು ಬಳಿಯಲ್ಲೇ ಇಟ್ಟುಕೊಂಡಿರಿ.
- ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ನೆರೆಹೊರೆಯವರಿಗೆ, ಪೊಲೀಸರಿಗೆ ತಿಳಿಸಿ.
- ಮನೆ ಕೆಲಸದವರು, ಅಪರಿಚಿತರ ಬಳಿ ಕುಟುಂಬದ ಗೌಪ್ಯತೆಯನ್ನು, ಆಸ್ತಿಪಾಸ್ತಿ ವಿಷಯವನ್ನು ಬಾಯಿಬಿಡಬೇಡಿ.
- ಮನೆ ಕೆಲಸಗಾರರ ಸಂಪೂರ್ಣ ವಿವರವನ್ನು ಸ್ಥಳೀಯ ಪೋಲಿಸರಿಗೆ ನೀಡಿ.
- ಬೀಟ್ ಪೊಲೀಸರು ವಾರಕ್ಕೊಮ್ಮೆ ಗಸ್ತು ಬಾರದಿದ್ದರೆ ಮೇಲಧಿಕಾರಿಗಳಿಗೆ ತಿಳಿಸುವುದನ್ನು ಮರೆಯದಿರಿ.