

ನನಗೆ ಮುಖ್ಯಮಂತ್ರಿಗಳನ್ನ ಸ್ವಲ್ಪ ಭೇಟಿ ಮಾಡ್ಸು. ಅವರ್ಹತ್ರನೇ ಖುದ್ದಾಗಿ ನಮ್ಮನೆ ಜಮೀನಿನ ವಿಷ್ಯ ವಿವರಿಸಿ ಸಮಸ್ಯೆ ಬಗೆಹರಿಸಿಬಿಡ್ತೀನಿ ಅಂತ 78 ವರ್ಷದ ಅಜ್ಜ ಎಲೆ ಅಡಿಕೆ ಕುಟ್ಟುತ್ತಾ ಹಠ ಮಾಡುತ್ತಿದ್ದರು!
ಯಾರೋ ಧ್ಯಾನ ಮಾಡುವುದನ್ನು ಕೇಳಿಸಿಕೊಂಡ ಅಜ್ಜಿ, ಪಾಪ ಸಣ್ಣ ವಯಸ್ಸಿಗೇ ಯಾವುದೋ ಭ್ರಾಂತು. ಬಾಯಿಂದ ಏನೋ ಸದ್ದು ಹೊರಡಿಸಿ ಜೋರಾಗಿ ಶ್ವಾಸ ಎಳೆದುಕೊಳ್ತಾನೆ ಅಂತ ಕಳವಳ ವ್ಯಕ್ತಪಡಿಸುತ್ತಿದ್ದರು.
ಇವರಿಗೆಲ್ಲ ವಯಸ್ಸಾದದ್ದು ಯಾವಾಗ..? ಈ ಪರಿಯ ಉತ್ಸಾಹಕ್ಕೆ ಮುಪ್ಪು ಎಂದು ಹೇಗೆ ಕರೆಯುವುದು?
'ಹಳ್ಳಿಗಳು ಇಂದು ವೃದ್ಧಾಶ್ರಮವಾಗುತ್ತಿವೆ' ಎಂಬ ಮಾತನ್ನು ನಗರಕ್ಕೆ ಬಂದಮೇಲೆ ಸಾಕಷ್ಟು ಬಾರಿ ಕೇಳಿದ್ದೇನೆ.
ಆದರೆ, ಹಳ್ಳಿಗಳು ಬಹುಶಃ ಎಂದೂ ವೃದ್ಧಾಶ್ರಮವಾಗುವುದೇ ಇಲ್ಲ. ಅಲ್ಲಿ ಎಷ್ಟೇ ವಯಸ್ಸಾದರೂ ಅವರು ವೃದ್ಧರಲ್ಲ. ಅಲ್ಲಿ ಯಾರಿಗೂ ನಿವೃತ್ತಿ ಎಂಬುದಿಲ್ಲ. ಅವರಿಗೆ ಅದರ ಅರ್ಥವೂ ಗೊತ್ತಿಲ್ಲ. ಗ್ರಾಮೀಣ ಭಾಗದಲ್ಲಿ ವಯಸ್ಸಾದವರ ಬತ್ತದ ಉತ್ಸಾಹ, ಅವರ ಇಳಿವಯಸ್ಸಿನಲ್ಲೂ ಹೊಸತನ್ನು ಕಲಿಯುವ ಉಮೇದು, ತಮಗೆ ತಿಳಿದಿದ್ದನ್ನು ಇತರರಿಗೆ ಹೇಳುವ ಪರಿ, ಬದುಕುವ ರೀತಿ ನೋಡಿದರೆ ವೃದ್ಧಾಪ್ಯವೂ ಅವರ ಬಳಿ ಸುಳಿಯಲು ಹೆದರುತ್ತದೆ. ಅವರೆಲ್ಲ ವಯಸ್ಸಿನಲ್ಲಿ ಮಾತ್ರ ವೃದ್ಧರು. ಜೀವನಶೈಲಿಯಲ್ಲಿ ಅಲ್ಲ.
ಪ್ರತಿದಿನ ಸಂಜೆ ಕಟ್ಟೆಯ ಮೇಲೆ ತಮ್ಮದೇ ವಯಸ್ಸಿನ ಹೆಂಗಸರನ್ನು ಕಟ್ಟಿಕೊಂಡು ಅಜ್ಜಿ ಶ್ರಾವಣ ಮಾಸದ ಹಾಡು ಗುನುಗುತ್ತಾಳೆ. ಮಧ್ಯೆ ತಮ್ಮ ಸೊಸೆಯರನ್ನು ಬೈದುಕೊಂಡರೂ ಮೊಮ್ಮಕ್ಕಳ ಗುಣಗಾನ ಮಾಡುತ್ತಾಳೆ.
ಅವರ ಮನೆಯಲ್ಲಿ ಏನೋ ತುಪ್ಪದ ಪರಿಮಳ ಬರ್ತಿತ್ತು. ಏನು ವಿಶೇಷ? ಇವರ ಮನೆಯಲ್ಲಿ ಏನೋ ಗದ್ದಲ ಕೇಳ್ತಿತ್ತು..? ಅವರ ಮನೆ ಬಳ್ಳಿಗೆ ತುಂಬಾ ಮಲ್ಲಿಗೆ ಹೂ ಬಿಡ್ತು. ಹೀಗೆ ಅವರಿವರ ಮನೆಯ ಕಥೆಯಲ್ಲಿಯೂ ಎಲ್ಲರಿಗೂ ಒಳ್ಳೆಯದೇ ಆಗಲಿ ಎಂಬ ಹಾರೈಕೆ.
ಇನ್ನು ಪೇಪರ್ ಓದುವ ಅಜ್ಜಂದಿರನ್ನು ನೆನಪಿಸಿಕೊಂಡರೇ ಭಯ. ಕಣ್ಣು ಮಂಜಾದರೂ ಉತ್ಸಾಹಕ್ಕೇನೂ ಕೊರತೆಯಿಲ್ಲ. ಅದರಲ್ಲೂ 85 ವರ್ಷದ ಅಜ್ಜನಿಗೆ ಪ್ರತಿದಿನದ ಭವಿಷ್ಯ ಮಾತ್ರ ಓದಿ ಹೇಳಲೇಬೇಕು. ಪೇಪರ್ ಬರುವ ಹೊತ್ತಲ್ಲಿ ಮೊಮ್ಮಕ್ಕಳು ಹತ್ತಿರ ಇರಲೇಬೇಕು ಎನ್ನುವುದು ಅಜ್ಜನ ಹುಕುಂ. ಒಂದಕ್ಷರವನ್ನೂ ಬಿಡದೇ ಓದಿಸಿಕೊಂಡು ಎಲ್ಲರಿಗೂ ಅದನ್ನು ಹೇಳುವ ತವಕ. 'ಇದು ಪ್ರದಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಂತೆ. ಪ್ರಧಾನಮಂತ್ರಿ ಬರೋದು ಯಾವಾಗ? ಈ ಕೆಲಸ ನೋಡೋದು ಯಾವಾಗ? ಅವರ ಹೆಸರಲ್ಲಿ ಇವರು ದುಡ್ಡು ಹೊಡೀತಾರೆ!' ಎಂದು ಓದಿಸಿಕೊಂಡು ಕೇಳಿದ ದಿನಪತ್ರಿಕೆಯಿಂದ ಮಾಹಿತಿ ಸಂಗ್ರಹಿಸಿ ಅದನ್ನು ಅರ್ಥೈಸಿಕೊಂಡಿದ್ದು ಹೀಗೆ. ಪ್ರಧಾನಮಂತ್ರಿಯೇ ತಮ್ಮೂರಿಗೆ ರಸ್ತೆ ಮಾಡಿಸ್ತಾರೆ ಎಂದು ಅವರು ಸಂಭ್ರಮಿಸುತ್ತಿದ್ದರು. ಇನ್ನು ಟಿವಿ ನೋಡುವ ವಿಧಾನವೂ ಅಷ್ಟೇ ವಿಶೇಷ. ಯಾರಾದರೂ ಅವರ ಜೊತೆ ಟಿವಿ ನೋಡಲು ಕುಳಿತರೆ ಇವರೇ ಕಥೆ ಹೇಳಿಬಿಡುತ್ತಾರೆ. (ಜಾಹೀರಾತನ್ನೂ ಸೇರಿಸಿ).
ಇನ್ನು ಹಬ್ಬಗಳು ಬಂದರಂತೂ ಅಜ್ಜನ ಸಂಭ್ರಮ ಹೇಳತೀರದು. ಗಣೇಶ ಚತುರ್ಥಿ ಎರಡು ತಿಂಗಳಿರುವಾಗಲೇ ಹಬ್ಬದ ಗಡಿಬಿಡಿ, ಧಾವಂತ. ಗಣಪತಿ ತಯಾರಿಸಲು ಮಣ್ಣು ಎಲ್ಲಿ ಸಿಗುತ್ತದೆ? ಹಬ್ಬದ ದಿನಕ್ಕೆ ಸರಿಯಾಗಿ ಬೆಳೆಯುವ ಬಾಳೆಮರ ಯಾವುದು? ಅಲಂಕಾರಕ್ಕಾಗಿ ಏನೆಲ್ಲ ತರಬೇಕು? ಎಂಬ ಕುರಿತೇ ಯೋಚನೆ. ಅಜ್ಜಿಗೆ ಹೂ ಬತ್ತಿ, ಚಕ್ಕುಲಿ, ಅತಿರಸ ಮುಂತಾದ ತಿಂಡಿ ತಿನಿಸು ತಯಾರಿಕೆಯಲ್ಲಿ ಆಸಕ್ತಿ. ಆಚರಣೆಯಲ್ಲಿ ತುಸು ಲೋಪವಾದರೂ ಏನೋ ಪ್ರಮಾದವಾಯಿತು ಎಂಬ ಕಳವಳ. ಗ್ರಾಮೀಣ ಭಾಗದಲ್ಲಿ ಹಾಡುಗಳದ್ದೇ ಕಾರುಬಾರು ತುಂಬಾ ಜೋರು. ಈಗಿನ ಮೊಮ್ಮಕ್ಕಳನ್ನು ಬೈದುಕೊಳ್ಳುತ್ತಾ ತಮ್ಮ ಕಾಲದ ಹಾಡುಗಳನ್ನು ನೆನಪಿಸಿಕೊಂಡು ಏದುಸಿರು ಬಿಡುತ್ತಲೇ ಹೇಳುವ ಪರಿ ಅದೆಷ್ಟು ಚೆಂದ. ಪ್ರತಿ ಕೆಲಸದಲ್ಲಿಯೂ ಶಿಸ್ತು, ಹೀಗೇ ಆಗಬೇಕು ಎಂದು ನಿರ್ಣಯಿಸುವ ಅಜ್ಜಿಯ ಪರಿ ಯಾವ ಕಮಾಂಡರ್‌ಗೂ ಕಡಿಮೆ ಇಲ್ಲ.
ಮನೆ ನೆಮ್ಮದಿಯ ತಾಣವಾಗಲು ನಿಜಕ್ಕೂ ಹಿರಿಯರಿರಬೇಕು. ಅವರ ಗೊಣಗಾಟ, ಕಸಿವಿಸಿ, ಕೆಲವೊಮ್ಮೆ ಕಿರಿಯರಿಗೆ ಕಿರಿಕಿರಿ ಅನಿಸಿದರೂ ಅದನ್ನು ಸಹಿಸಿಕೊಳ್ಳುವುದರಲ್ಲೇ ಏನೋ ಖುಷಿ. ಹಿರಿಯರಿಲ್ಲದ ಮನೆ ದೇವರಿಲ್ಲದ ಗುಡಿಯ ಹಾಗೆ.
- ಅರ್ಪಿತಾ ಭಟ್