ಗಾಂಧಿ ಕ್ಲಾಸ್

ಗಾಂಧಿ ಕ್ಲಾಸ್
Updated on: 

ಬಾಗಿಲನು ತೆರೆದು ಬಾಪುವನು ನೆನೆ

ಸಾಮಾನ್ಯವಾಗಿ ಗಾಂಧೀಜಿಯನ್ನು ಸ್ಮರಿಸುವುದು ವರ್ಷಕ್ಕೆರಡು ಸಲ. ಗಾಂಧಿ ಜಯಂತಿ ಮತ್ತು ಅವರ ಪುಣ್ಯತಿಥಿಯಂದು. ಆಗಾಗ ಎಲ್ಲೋ ಕೆಲವು ವೇದಿಕೆಗಳಲ್ಲಿ ಗಾಂಧಿ ತಾತನ ಹೆಸರು ಕೇಳಿಸಬಹುದು. ಆದರೆ ತೆನ್ನರಸು ಅವರ ಮನೆಯಲ್ಲಿ ನಿತ್ಯವೂ ಗಾಂಧಿ ಸ್ಮರಣೆ! ಅವರ ಮನೆಗೆ ಹೋಗುವವರೂ ರಾಷ್ಟ್ರಪಿತನನ್ನು ಅರೆಘಳಿಗೆಯಾದರೂ ನೆನಪು ಮಾಡಿಕೊಳ್ಳಲೇಬೇಕು. ಏಕೆಂದರೆ ಮುಂಬಾಗಿಲಿನಲ್ಲೇ ಗಾಂಧೀಜಿ ವಿರಾಜಮಾನರಾಗಿದ್ದಾರೆ!
ಮನೆಯ ಮುಂಬಾಗಿಲು ಚೆನ್ನಾಗಿರಬೇಕೆಂದು ಬಯಸುವುದು ಸಹಜವೇ. ಅದಕ್ಕಾಗಿ ಚೆಂದದ ಪಕ್ಷಿ, ಹೂಗಳ ಕೆತ್ತನೆ ಮಾಡಿಸುತ್ತಾರೆ. ದೇವರ ಮೇಲೆ ಹೆಚ್ಚಿನ ನಂಬಿಕೆ ಉಳ್ಳವರು ದೇವರ ಚಿತ್ರಗಳನ್ನು ಕೆತ್ತಿಸುತ್ತಾರೆ. ಆದರೆ  ತೆನ್ನರಸು ತಮ್ಮ ಮನೆ ಮುಂಬಾಗಿಲಿಗೆ ರಾಷ್ಟ್ರಪಿತನ ಚಿತ್ರವನ್ನು ಕೆತ್ತನೆ ಮಾಡಿಸಿಕೊಂಡಿದ್ದಾರೆ. ಗಾಂಧೀಜಿ ಆದರ್ಶಗಳನ್ನು ಸಾರಲು, ಆತನ ಧ್ಯೇಯಗಳನ್ನು ಜನರ ಮನಸ್ಸಿಗೆ ನಾಟುವಂತೆ ಮಾಡಲು ಅವರು ಕಂಡುಕೊಂಡ ಉಪಾಯವಿದು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನ್ಯಾಮತಿ ಶಾಖೆಯ ಉದ್ಯೋಗಿ ತೆನ್ನರಸು ಶಿವಮೊಗ್ಗದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ದೇಶಭಕ್ತಿಯ ಪುಸ್ತಕಗಳನ್ನು ಓದುವುದು ಅವರ ಹವ್ಯಾಸ. ಗಾಂಧೀಜಿ ಮತ್ತು ಅವರ ಅಹಿಂಸಾ ತತ್ವ ಅಚ್ಚುಮೆಚ್ಚು. ಅದಕ್ಕಾಗಿಯೇ ಮುಂಬಾಗಿಲಿನಲ್ಲಿ ಗಾಂಧೀಜಿ ಚಿತ್ರವನ್ನೇ ಕೆತ್ತಿಸಿದ್ದಾರೆ.
'ಗಾಂಧೀಜಿ ಅವರನ್ನು ಸಿನಿಮಾ ಹಾಗೂ ನೋಟುಗಳ ಅಥವಾ ಭಾವಚಿತ್ರಗಳ ಮುಖಾಂತರ ಮಾತ್ರ ನೋಡುತ್ತಿದ್ದೇವೆ. ಅವರ ಬದುಕಿನ ಹಾದಿ ತಿಳಿಯುವುದೂ ಅಷ್ಟೇ ಮುಖ್ಯ. ವಿದೇಶಿ ಉಡುಪು ತಿರಸ್ಕರಿಸಿ ಸ್ವದೇಶಿ ಖಾದಿ ಬಟ್ಟೆಗಳನ್ನು ಉಡುವಂತೆ ಕರೆ ನೀಡುವ ಮೂಲಕ ವಿದೇಶಿ ಬಂಡವಾಳದ ವಿರುದ್ಧ ಮೊದಲು ಧ್ವನಿ ಎತ್ತಿದ್ದ ವ್ಯಕ್ತಿ ಗಾಂಧೀಜಿ. ಅವರು ಸದಾ ಪ್ರಸ್ತುತರು. ಅದಕ್ಕಾಗಿಯೇ ಮನೆ ಮುಂಬಾಗಿಲಿಗೆ ಅವರ ಚಿತ್ರವನ್ನೇ ಕೆತ್ತಿಸಿದ್ದೇನೆ' ಎನ್ನುವುದು ತೆನ್ನರಸು ನುಡಿ.
ಶಿವಮೊಗ್ಗದ ಸಿ.ಎಂ. ರಮೇಶ್ ಹಾಗೂ ಭಾರತಿ ಕಾಲೋನಿಯ ಸೆಲ್ವಂ ಅವರು ಗಾಂಧೀಜಿ ಅವರ ಕೆತ್ತನೆ ಮಾಡಿಕೊಟ್ಟಿದ್ದಾರೆ.

- ಮೋಹನ್‌ಕುಮಾರ್ ಎನ್.
     ಚಿತ್ರ: ಶಿವಮೊಗ್ಗ ನಂದನ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com