

ಗುಣಾಕಾರದಲ್ಲಿ ಮಲ್ಲ ಈ ಮಲ್ಲೇಶ
ದೊಡ್ಡ ಸಂಖ್ಯೆಗಳನ್ನು ಗುಣಿಸಲು, ಭಾಗಿಸಲು, ಕೂಡಿಸಲು, ಕಳೆಯಲು ಕ್ಯಾಲ್‌ಕ್ಯುಲೇಟರ್‌ನಿಂದ ಮಾತ್ರ ಸಾಧ್ಯ. ಆದರೆ, ಇಂತಹ ಎಲ್ಲ ಕಾರ್ಯವನ್ನು ಕ್ಷಣಾರ್ಧದಲ್ಲಿಯೇ ವಿದ್ಯಾರ್ಥಿಯೋರ್ವ ಕೇವಲ ತನ್ನ ನೆನಪಿನ ಶಕ್ತಿಯಿಂದಲೇ ಮಾಡಿ ಆಶ್ಚರ್ಯಗೊಳಿಸುತ್ತಾನೆ.
ರೋಣ ತಾಲೂಕಿನ ಬಸರಕೋಡ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಲ್ಲೇಶ ಗುಣಾರಿಗೆ ಗುಣಾಕಾರದ ಎಷ್ಟೇ ದೊಡ್ಡ ಲೆಕ್ಕ ಕೊಟ್ಟರೂ ತಕ್ಷಣ ಉತ್ತರ ಹೇಳುತ್ತಾನೆ. ಗುಣಾಕಾರದಲ್ಲಿ ಅಂತಹ ಪ್ರಾವೀಣ್ಯ ಈತನಿಗಿದೆ.
ಅವನ ಗಣಿತ ಪ್ರತಿಭೆಯ ಬಗ್ಗೆ ತಿಳಿದುಕೊಳ್ಳಲು 458್ಢ8 (ಉದಾಹರಣೆಗೆ) ಎಷ್ಟು ಎಂದು ಕೇಳಿ ನೋಡಿ, ಇದಕ್ಕೆ ಸರಿಯಾದ ಉತ್ತರ ತಕ್ಷಣದಲ್ಲಿಯೇ ಕಂಡುಕೊಳ್ಳಬೇಕಾದಲ್ಲಿ ನಿಮ್ಮ ಬಳಿ ಕ್ಯಾಲ್‌ಕ್ಯುಲೇಟರ್ ಇರಬೇಕು. ಇಲ್ಲವೇ ಪೆನ್ನು, ಪೇಪರ್ ಹಿಡಿದುಕೊಂಡು ಲೆಕ್ಕ ಮಾಡಬೇಕು. ಆದರೆ, ಮಲ್ಲೇಶ ಮಾತ್ರ ತಕ್ಷಣವೇ 3664 ಎಂದು ಅರಳು ಹುರಿದಂತೆ ಹೇಳುತ್ತಾನೆ. ಇವನಿಗೆ 4500ರವರೆಗೆ ಮಗ್ಗಿಗಳು ಬರುತ್ತವೆ ಎಂಬುದು ಅಚ್ಚರಿಯೇ ಸರಿ.
ಈತನದು ಕೃಷಿ ಕುಟುಂಬ. ತಂದೆ ಹನುಮಪ್ಪ ಗುಣಾರಿ ಕೃಷಿಕ, ಇನ್ನು ತಾಯಿ ಅನ್ನವ್ವ ಕೃಷಿಯಲ್ಲಿ ಪತಿಗೆ ನೆರವಾಗಿ ಕಾರ್ಯಮಾಡುತ್ತಾರೆ. ಇವರು ಶಿಕ್ಷಣ ಹೊಂದಿರದಿರುವುದರಿಂದ ಮಗನ ಸಾಧನೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ವಿದ್ಯಾರ್ಥಿಗೆ ಯಾವುದೇ ವಿಶೇಷ ತರಬೇತಿ ಇಲ್ಲದೇ ಈ ಸಾಧನೆ ಮಾಡಿದ್ದಾನೆ.
ಸಹೋದರನೂ ಮಗ್ಗಿ ವೀರ
ಮಲ್ಲೇಶ ಗುಣಾರಿ ಮಾತ್ರವಲ್ಲ, ಈತನ ತಮ್ಮ ಕುಮಾರ 3ನೇ ತರಗತಿಯಲ್ಲಿ ಅದೇ ಶಾಲೆಯಲ್ಲಿಯೇ ಓದುತ್ತಿದ್ದಾನೆ. ಅವನು ಮಗ್ಗಿ ವೀರನಾಗಿದ್ದು, 600 ರವರೆಗಿನ ಮಗ್ಗಿಗಳನ್ನು ಬಾಯಿಪಾಠ (ಕಂಠಪಾಠ) ಮಾಡಿದ್ದಾನೆ. ಎಲ್ಲಿ ಕೇಳಿದರೂ ನಿರರ್ಗಳವಾಗಿ ಮಗ್ಗಿಗಳನ್ನು ಹೇಳುತ್ತಾನೆ. ಹಾಗಾಗಿ ಈ ಮಗ್ಗಿ ಸಹೋದರರ ಸಾಧನೆ ನಿಜವಾಗಿಯೂ ಸಂಗತಿಯಾಗಿದೆ.
ಶಾಲೆಯಲ್ಲಿನ ಎಸ್.ಆರ್. ಪೂಜಾರ ಎನ್ನುವ ಶಿಕ್ಷಕರು ಮಕ್ಕಳಿಗೆ ಕಣ್ಣಿಲ್ಲದವನ ಒಂದು ಅಗಾಧ ಸಾಧನೆಯ ಬಗ್ಗೆ ಹೇಳಿ, ನೀವು ಏನಾದರೂ ಸಾಧನೆ ಮಾಡಬೇಕು ಎಂದರು. ಅವರು ಪ್ರೇರಣೆ ನೀಡಿ, ಮಾರ್ಗದರ್ಶನ ನೀಡಿದ್ದರಿಂದ ನನಗೆ ಮಗ್ಗಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ.
- ಮಲ್ಲೇಶ ಗುಣಾರಿ
- ಶಿವಕುಮಾರ ಕುಷ್ಟಗಿ