60 ಮರುಳಲ್ಲ

60 ಮರುಳಲ್ಲ
Updated on: 

'ಹಿಸ್ಟರಿ ರಿಪೀಟ್ಸ್‌' ಎನ್ನುವಂತೆ ಬಾಲ್ಯ ಮತ್ತೆ ವೃದ್ಧಾಪ್ಯದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಅನುಭವದ ಸುಕ್ಕುಗಳು ಬಾಲ್ಯಕ್ಕಿಂತ ವಿಭಿನ್ನವಾಗಿರುತ್ತವೆ.

ಬಾಲ್ಯ-ಮುದ್ದು, ಯೌವ್ವನ-ಮೋಜು, ಮುಪ್ಪು-ಗೋಳು ಎನ್ನುತ್ತಾರೆ. ಆದರೇನು ಮಾಡುವುದು? ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತಾವಧಿಯಲ್ಲಿ ಈ ಮೂರು ಹಂತಗಳನ್ನು ದಾಟಲೇಬೇಕು. ಮೈಯಲ್ಲಿ ಕಸುವಿದ್ದಾಗ ವೃದ್ಧರನ್ನು ಕಡೆಗಣಿಸುತ್ತೇವೆ. ಆದರೆ, ನಾವೂ ಆ ಘಟ್ಟವನ್ನು ಅನುಭವಿಸಲೇಬೇಕು.
'ಹಿಸ್ಟರಿ ರಿಪೀಟ್ಸ್‌' ಎನ್ನುವಂತೆ ಬಾಲ್ಯ ಮತ್ತೆ ವೃದ್ಧಾಪ್ಯದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಅನುಭವದ ಸುಕ್ಕುಗಳು ಬಾಲ್ಯಕ್ಕಿಂತ ವಿಭಿನ್ನವಾಗಿರುತ್ತವೆ. ಕಣ್ಣು ಕಾಣಿಸದಾಗುತ್ತದೆ, ಹಲ್ಲು ಬಿದ್ದು ಹೋಗುತ್ತವೆ, ಕಿವಿ ಮಂದವಾಗುತ್ತದೆ, ಮೂಳೆಗಳು ಸವೆಯುತ್ತವೆ, ಮಾಂಸಖಂಡಗಳ ನೋವು ಪ್ರಾರಂಭವಾಗುತ್ತದೆ.... ಹೀಗೆ ಅನೇಕ ದೈಹಿಕ ಸಮಸ್ಯೆಗಳು ವೃದ್ಧರನ್ನು ಹೈರಾಣಾಗಿಸುತ್ತದೆ. ಇಂಥ ಸಮಸ್ಯೆಗಳು ಸುಮಾರು 60 ವರ್ಷಗಳ ಮೇಲ್ಪಟ್ಟು ಕೆಲವರಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ತುಸು ಮುಂಚೆಯೇ ಗೋಚರಿಸಬಹುದು.

60ಕ್ಕೆ ಅರಳು ಮರಳು
ದೈಹಿಕ ತೊಂದರೆಗಳ ಜತೆ ವೃದ್ಧರನ್ನು ಮಾನಸಿಕ ಸಮಸ್ಯೆಗಳೂ ಕಾಡುವುದು ತಪ್ಪೋಲ್ಲ. ಹಾಗಂತ ಮಾನಸಿಕ ತೊಂದರೆಗಳು ಬಂದೇ ಬರುತ್ತವೆ ಎಂದರ್ಥವಲ್ಲ. ಕೆಲವರಿಗೆ ವಯಸ್ಸಾದಂತೆ ತಾಳ್ಮೆ, ಸಹನೆ ಹೆಚ್ಚಿ, ಕೋಪ, ತಾಪಗಳು ಕಡಿಮೆಯಾಗುತ್ತವೆ. ಅದು ಉಲ್ಟಾ ಹೊಡೆಯಲೂ ಬಹುದು.

ವೃದ್ಧರನ್ನು ಸಾಮಾನ್ಯವಾಗಿ ಕಾಡುವುದು ಡಿಮೆನ್ಷಿಯಾ ಹಾಗೂ ಖಿನ್ನತೆ. ಸುಮಾರು 65 ವರ್ಷ ಮೇಲ್ಪಟ್ಟ ಸುಮಾರು ಶೇ.16 ವಯೋವೃದ್ಧರಲ್ಲಿ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಶೇ.4 ಜನರಲ್ಲಿ ಅತಿಯಾದ ಖಿನ್ನತೆಯೂ ಕಾಣಿಸಿಕೊಳ್ಳುತ್ತದೆ.
ಡಿಮೆನ್ಷಿಯಾದಲ್ಲಿ ಜ್ಞಾಪಕಶಕ್ತಿ, ಬುದ್ಧಿಶಕ್ತಿ ಕಡಿಮೆಯಾಗುತ್ತದೆ. ಮೆದುಳಿಗೆ ರಕ್ತ ಸಂಚಾರ ಸರಿಯಾಗದೇ ಎಲ್ಲವನ್ನೂ ಮರೆಯುವ ಸ್ಥಿತಿ ತಲುಪುತ್ತಾನೆ ಮನುಷ್ಯ. ಮೆದುಳಿನ ಗೆಡ್ಡೆ, ಅಧಿಕ ರಕ್ತದೊತ್ತಡ, ಮಧುಮೇಹ, ಸಿಫಿಲಿಸ್, ಏಡ್ಸ್, ಕ್ಷಯರೋಗ ಇದ್ದವರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದ ದೈಹಿಕ ಕಾಯಿಲೆಯೂ ವೃದ್ಧಾಪ್ಯದಲ್ಲಿ ಡಿಮೆನ್ಷಿಯಾದಂಥ ಸಮಸ್ಯೆ ತಂದೊಡ್ಡಬಹುದು.

ಖಿನ್ನತೆ ಕಾಮನ್
ವಯಸ್ಸಾದಂತೆ ಯಾರಿಗೆ ಬೇಕಾದರೂ ಖಿನ್ನತೆ ಕಾಡಬಹುದು. ಈ ಕಾಯಿಲೆಗೆ ತಜ್ಞ ವೈದ್ಯರಿಂದ ಔಷಧಿ ತೆಗೆದುಕೊಳ್ಳುವುದರಿಂದ ಹಾಗೂ ಮಾನಸಿಕ ಸ್ಥೈರ್ಯ ತುಂಬುವುದರಿಂದ ಇದನ್ನು ಹತೋಟಿಯಲ್ಲಿಡಬಹುದು. ವಿಚ್ಛೇದಿತರು, ವಿಧವೆಯರು, ನಿರುದ್ಯೋಗಿಗಳು, ನಿವೃತ್ತರು ಹಾಗೂ ದೀರ್ಘಕಾಲದ ದೈಹಿಕ ತೊಂದರೆ ಇರುವವರನ್ನು (ಮಧುಮೇಹ, ಕ್ಯಾನ್ಸರ್, ಪಾರ್ಶ್ವವಾಯು) ಖಿನ್ನತೆ ಹೆಚ್ಚಾಗಿ ಕಾಡುತ್ತದೆ. ಹಾಗೆ ವಂಶವಾಹಿನಿಗಳಿಂದಲೂ ಸ್ವಲ್ಪ ಮಟ್ಟಿಗೆ ಇದು ಬರಬಹುದು. ಒಂಟಿಯಾಗಿರುವುದು, ಪ್ರೀತಿ ಪಾತ್ರರ ಅಗಲಿಕೆ, ವಯಸ್ಸಾದಂತೆ ನರವಾಹಕಗಳಲ್ಲಾಗುವ ಬದಲಾವಣೆಯಿಂದ, ಒಂದೇ ಜಾಗದಲ್ಲಿರುವುದರಿಂದ, ದೀರ್ಘಕಾಲದ ಔಷಧಿಗಳನ್ನು ಬಳಸುವುದರಿಂದ ಖಿನ್ನತೆ ಕಾಣಿಸಿಕೊಳ್ಳುತ್ತದೆ.

ತೃಪ್ತರಾಗಿರಿ
ಇವುಗಳಲ್ಲದೇ delirium, anxiety, Schizophonia ದಂಥ ರೋಗಗಳೂ ಕಾಡುತ್ತವ. No body is sane in this world ಎಂಬಂತೆ ಪ್ರಪಂಚದಲ್ಲಿರುವ ಎಲ್ಲರಿಗೂ ಒಂದಲ್ಲ ಒಂದು ಮಾನಸಿಕ ದೌರ್ಬಲ್ಯಗಳಿರುತ್ತವೆ.
ಮುಪ್ಪಿನಲ್ಲಿ ಕಾಡುವ ಮಾನಸಿಕ ಕಾಯಿಲೆಗೆ ವ್ಯಕ್ತಿ ಬೆಳೆದ ವಾತಾವರಣ, ಆತನ ಜೀವನಶೈಲಿ, ದುರಭ್ಯಾಸಗಳು, ಕಷ್ಟನಷ್ಟಗಳು, ನೋವು, ನಿರಾಸೆ, ಅತೃಪ್ತಿ, ದುಃಖ ಎಲ್ಲವೂ ಕಾರಣ. ವಯಸ್ಸಾದಂತೆ ಖಿನ್ನತೆಗೆ ಅಥವಾ ಡಿಮೆನ್ಷಿಯಾ ಕಾಡುವ ವೃದ್ಧರಲ್ಲಿ ಶೇ.23 ಜನರು ಕುಡಿತದ ಚಟ ಹೊಂದಿರುತ್ತಾರೆ. ಕುಡಿತದ ಅಭ್ಯಾಸ ಇರುವ 15 ಮಹಿಳೆಯರಲ್ಲಿ ಒಬ್ಬರಿಗೆ ಈ ರೋಗ ಕಾಡುತ್ತದೆ.

ಮಾನಸಿಕ ಸಮಸ್ಯೆಗಳು ಬಂದಾಗ ಮನೋವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧಿ ಬಳಸುವುದರಿಂದ ಹಾಗೂ ಆಪ್ತ ಸಲಹೆ ಪಡೆಯುವುದರಿಂದ ವೃದ್ಧಾಪ್ಯದ ಮಾನಸಿಕ ಸಮಸ್ಯೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.
ಎಲ್ಲರೊಳಗೊಂದಾಗಿ, ಎಲ್ಲರನ್ನೂ ಇವ ನಮ್ಮವ, ನಮ್ಮವ ಎಂದು ನಗುತಾ, ನಗಿಸುತಾ, ನಗುವವರನ್ನು ಕಂಡುನಗುತಾ, ವಿಶಾಲ ಹೃದಯಿಗಳಾಗಿದ್ದರೆ ಮನುಷ್ಯನಿಗೆ ಯಾವ ವಯಸ್ಸಲ್ಲೂ ಮಾನಸಿಕ ರೋಗಗಳು ಕಾಡುವುದೇ ಇಲ್ಲ ಎಂಬುದು ನೆನಪಿನಲ್ಲಿರಲಿ.

-ಸದಾನಂದರಾವ್. ಕೆ.ಸಿ, ಮನಃಶಾಸ್ತ್ರಜ್ಞ
(9880441703)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com