

ಚಪ್ಪಲಿ ಹೊಲಿಯುತ್ತಲೇ 20 ತುಳು ನಾಟಕಗಳನ್ನು ರಚಿಸಿರುವ ಖ್ಯಾತಿ ವಾಸುದೇವ ಲಾಯಿಲ ಅವರದ್ದು. ಈ ಎಲ್ಲ ನಾಟಕಗಳೂ ಜನಪ್ರಿಯವೇ.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿಯಲ್ಲಿ ಬೂಟು, ಚಪ್ಪಲಿ ರಿಪೇರಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ವಾಸುದೇವರು, ಲಾಯಿಲ ಗ್ರಾಮದ ಪುತ್ರಬೈಲಿನವರು. ಪ್ರಾಥಮಿಕ ಶಾಲೆಯಲ್ಲಿದ್ದಾಗ ನಾಟಕಗಳಲ್ಲಿ ಪಾತ್ರವಹಿಸುವುದು, ಯಕ್ಷಗಾನ ನೋಡುವ ಖಯಾಲಿಯಿಂದಾಗಿ ನಾಟಕಗಳನ್ನು ಬರೆಯುವ ಗೀಳು ಅಂಟಿಕೊಂಡಿತು. ಇವರು ಹುಟ್ಟಿ ಬೆಳೆದದ್ದು ಬೇಲೂರು- ಹಳೇಬೀಡಿನಲ್ಲಿ. ತಂದೆ ಶೀನಪ್ಪರ ವೃತ್ತಿ ಚಮ್ಮಾರಿಕೆ. ಮನೆಯ ತಾಪತ್ರಯದಿಂದಾಗಿ ವಾಸುದೇವರಿಗೆ ಉಡುಪಿಯ ತಾಳೆಪಾಡಿ ಶಾಲೆಯಲ್ಲಿ 7ನೇ ತರಗತಿಯೇ ಕೊನೆಯಾಯಿತು. ತಂದೆ ಹಳೇಬೀಡಿನಲ್ಲಿದ್ದಾಗ ಅವರ ವ್ಯಾಪಾರ ನಷ್ಟಕ್ಕೀಡಾಯಿತು. ಇದರಿಂದ ವಾಸುದೇವರು ಟೈಲರಿಂಗ್ ಹಿಡಿದರು. ಅದೂ ಕೈಹಿಡಿಯದಿದ್ದಾಗ ಹೋಟೆಲ್‌ನಲ್ಲಿ ಮಾಣಿಯಾದರು. ಅಲ್ಲೂ ಅದೃಷ್ಟ ಕೈಕೊಟ್ಟಿತು. ಸಂತೆ, ಜಾತ್ರೆ, ಯಕ್ಷಗಾನ, ನಾಟಕಗಳು ನಡೆಯುವ ಸ್ಥಳಗಳಲ್ಲಿ ಸಂಚಾರಿ ವ್ಯಾಪಾರ ಶುರುಮಾಡಿಕೊಂಡರು. ಇದೇ ವೇಳೆ ಬೆಳ್ತಂಗಡಿಯಲ್ಲಿನ ಮಾವನ ಮಗಳು ಶಕೀಲಾರನ್ನು ಮದುವೆಯಾಗಿ ಬೆಳ್ತಂಗಡಿಯಲ್ಲೇ ನೆಲೆಸಿದರು. ಸ್ವಲ್ಪ ಕಾಲ ಸಂತೆ ವ್ಯಾಪಾರ ಮಾಡಿದರಾದರೂ ಕೊನೆಗೆ ತಂದೆ ನಡೆಸುತ್ತಿದ್ದ ಚಮ್ಮಾರ ವೃತ್ತಿಯೇ ಇವರು ಬದುಕು ಕಟ್ಟಿಕೊಳ್ಳಲು ನೆರವಾಯಿತು. ವಿವಿಧ ವೃತ್ತಿಗಳನ್ನು ಮಾಡಿಕೊಂಡರೂ ಇವರು ನಾಟಕಾಭಿನಯ ಬಿಡಲಿಲ್ಲ. ಸ್ವತಃ ಇವರೇ 20 ತುಳು ನಾಟಕಗಳನ್ನು ರಚಿಸಿದ್ದಾರೆ.
ಹಳ್ಳಿದ ಪೊಣ್ಣಾಗ್ ಪೇಟೆದ ಕಂಡನಿ (ಹಳ್ಳಿಯ ಹುಡುಗಿಗೆ ಪೇಟೆ ಹುಡುಗ) ಇದು ವಾಸುದೇವರು ರಚಿಸಿದ ಚೊಚ್ಚಲ ತುಳು ನಾಟಕ. ಒಂದೂವರೆ ಗಂಟೆಯದ್ದು. ಹಲವು ಊರು ಸುತ್ತಿದ ಅನುಭವ, ಆ ಸಂದರ್ಭದಲ್ಲಿ ಕಂಡ ಜನರ ನೋವು ನಲಿವುಗಳು, ಜೀವನಾನುಭವದ ವಿಚಾರಗಳನ್ನು ನಾಟಕಗಳಲ್ಲಿ ಮೂಡಿಸಿದ್ದಾರೆ. 'ತ್ರಿಶೂಲ ತಿರ್ಗಂಡ್', 'ನ್ಯಾಯದ ನೆತ್ತೆರ್', 'ಕಳಂಕ ಕಂತಿನ ಕಣ್ಣೀರ್' ಈ ನಾಟಕಗಳು ಕಟೀಲು ಸನಿಹದ ಮೂರುಕಾವೇರಿಯಲ್ಲಿರುವಾಗ ಬರೆದರು. ಬೆಳ್ತಂಗಡಿಗೆ ಬಂದ ಮೇಲೂ ನಾಟಕ ಬರೆಯುವುದನ್ನು ನಿಲ್ಲಿಸಲಿಲ್ಲ. 'ಸತ್ಯೋಗು ಎದುರಾ' ಎಂಬ ನಾಟಕ ಶ್ರೀ ಗಣೇಶ ಕಲಾವೃಂದದ ಮೂಲಕ ಸತತ 5 ವರ್ಷಗಳ ಕಾಲ ಪ್ರದರ್ಶನ ಕಂಡಿದೆ. 'ಸಮಾಜ ತೆಲಿಪುಂಡು', 'ಪೊರ್ಲುನ ತೂದ್ ಮಲರ್', 'ಮಧುರನ ಭಾಗ್ಯ', 'ಅಮೃತ ಮಲ್ಲಿಗೆ', ಮದ್ಯಪಾನದ ಅಪಾಯದ ಬಗ್ಗೆ ಬರೆದ 'ಗಂಗಾಧರನ ಗಂಗಸರ'- ಇವೆಲ್ಲವೂ ಜನರನ್ನು ಆಕರ್ಷಿಸಿವೆ. ಎಲ್ಲ ನಾಟಕಗಳಲ್ಲೂ ಜೀವನ ಸಂದೇಶವನ್ನು ಕಾಣಬಹುದು.
ಬೇಸರದ ಸಂಗತಿಯೆಂದರೆ, ಇವರ ಒಂದೇ ಒಂದು ನಾಟಕಗಳನ್ನು ಮುದ್ರಿಸಿ ದಾಖಲಿಸಲು ಸಾಧ್ಯವಾಗಿಲ್ಲ. ಯಾವುದ್ಯಾವುದಕ್ಕೋ ಖರ್ಚು ಮಾಡುವ ಅಕಾಡೆಮಿಗಳವರ ದೃಷ್ಟಿಗೆ ವಾಸುದೇವರು ಬಿದ್ದಿಲ್ಲ ಎಂಬುದು ನಿಜಕ್ಕೂ ವಿಷಾದ. ಒಂದೆರಡು ಸನ್ಮಾನ, ನಾಟಕ ಆಡಿಸುವವರಿಂದ ಸಂದ ಗೌರವ ಬಿಟ್ಟರೆ ಬೇರೆ ಯಾರೂ ಇವರನ್ನು ಗುರುತಿಸಿಲ್ಲ.
- ದೀಪಕ್ ಅಳದಂಗಡಿ