

ಅದು ಅಮೆರಿಕದ ಸಿಯಾಟಲ್ನ ಬ್ರಿಸ್ಟಲ್ ಎಂಬ ಉದ್ಯಾನವನ. ಅಲ್ಲಿ ಆ ಪಾರ್ಕೂ ಅಕ್ಷರಶಃ ಹಸಿರ ಹೊದಿಕೆಯ ಬೃಂದಾವನ. ಹೇಳಿ ಕೇಳಿ ಐವತ್ತು ಸಂಕೀರ್ಣಗಳಲ್ಲಿ ಹರಡಿರುವ ನಲವತ್ತು ಸಾವಿರಕ್ಕೂ ಅಧಿಕ ಟೆಕ್ಕಿಗಳು ದುಡಿಯುವ ಮೈಕ್ರೊಸಾಫ್ಟ್ ಕಂಪನಿಯಿರುವ ಊರು ಸಿಯಾಟಲ್. ಭಾರತದಿಂದ ನೌಕರಿ, ತರಬೇತಿಗೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚೆಂದೇ ಹೇಳಬೇಕು. ಅದರಲ್ಲೂ ದಕ್ಷಿಣ ಭಾರತೀಯರೆನ್ನಿ.
ಆ ಉದ್ಯಾನವನದಲ್ಲಿ ಅಂದು ಅಪರಾಹ್ನ ಕಲ್ಲುಬೆಂಚಿನ ಮೇಲೆ ಸೇರಿದ್ದರು ಪೋಷಕರು. ಮಕ್ಕಳೊಂದಿಗೆ ಒಂದಷ್ಟು ದಿನವಿರಲು ಬಂದವರು. ತಮ್ಮ ಮಕ್ಕಳು ಬೆಳಗ್ಗೆ ಒಂಬತ್ತಕ್ಕೆಲ್ಲ ಆಫೀಸಿಗೆ ಹೊರಟ ಮೇಲೆ ಪೋಷಕರಿಗೆ ಗೋಧೂಳಿ ಮುಹೂರ್ತದವರೆಗೆ ಬಿಡುವೋ ಬಿಡುವು. ಹಾಗಾಗಿ ಮಂಗಳವಾರದಿಂದ ಶುಕ್ರವಾರದವರೆಗೆ ನಳನಳಿಸುವ ಉದ್ಯಾನವನಗಳಿಗೆ ಲಗ್ಗೆ.
ಮೈಕ್ರೊಸಾಫ್ಟ್ ಎದುರಿನಲ್ಲೇ ಕಮ್ಯುನಿಟಿ ಸೆಂಟರ್ ಇದೆ. ಆ ಭವನಕ್ಕೆ ವೃದ್ಧರಿಗೆ ಮುಕ್ತ ಪ್ರವೇಶ. ದೇಶ, ಭಾಷೆಯ ಭೇದವಿಲ್ಲ. ಗ್ರಂಥಾಲಯವಿದೆ. ಇಂಟರ್ನೆಟ್ ಇದೆ. ಬಿಲಿಯರ್ಡ್ಸ್ ಆಡಬಹುದು. ಗೋಲಕಕ್ಕೆ ಕೇವಲ ಇಪ್ಪತ್ತೈದು ಸೆಂಟ್ ಹಾಕಿ ಕಾಫಿ ಸುರಿದುಕೊಳ್ಳಬಹುದು. ಪ್ರತಿ ಶುಕ್ರವಾರ ಕೇಕ್ ಸಮಾರಾಧನೆ ಬೇರೆ. ಯಾವುದೇ ಶುಲ್ಕವಿಲ್ಲದೆ ಪುಸ್ತಕ ಮನೆಗೆ ಒಯ್ದು ಓದಿ ಹಿಂದಿರುಗಿಸಬಹುದು. ಯೋಗ ತರಗತಿಗಳೂ ನಡೆಯುತ್ತವೆ. ಒಟ್ಟಿನಲ್ಲಿ ಇದು ವೃದ್ಧರ ಸ್ವರ್ಗ.
ಆದರೆ, ಆ ದಿನ ನಾವಿದ್ದದ್ದು ಹೊರಗೆ, ಬ್ರಿಸ್ಟಲ್ ಉದ್ಯಾನವನದಲ್ಲಿ. ಪುಣೆಯ ಕುಲಕರ್ಣಿ ದಂಪತಿ ತಮ್ಮ ಕಷ್ಟಸುಖ ಹೇಳಿಕೊಳ್ಳುತ್ತಿದ್ದರು. ಅವರು ಮಾರನವಮಿಯಂದು ಗೋಪೂಜೆ ಸಲ್ಲಿಸುವುದು ರೂಢಿ. ಆದರೆ ಇಲ್ಲಿ ಆಕಳು ಎಲ್ಲಿ ಸಿಗಬೇಕು? ಹಾಲಿನ ಕ್ಯಾನ್ಗೆ ಪೂಜೆ ಮಾಡಿ ಅಂದರು ಮಗ, ಸೊಸೆ! ಒಲ್ಲೆ ಅಂದೆವು. ಕಡೆಗೆ ಸಾಕುಕುದುರೆಯೊಂದಕ್ಕೆ ದೂರದಿಂದ ಕೈಮುಗಿದಿದ್ದಾಯಿತು ಎಂದವರು ಹೇಳಿದಾಗ, ಅಶ್ವಪೂಜೆಯ ಯೋಗವೆಂದರೆ ಸಾಮಾನವೆ? ರಾಜಮಹಾರಾಜರಿಗೆ ಮಾತ್ರ ಅಂತ ಎಲ್ಲರೂ ಪ್ರಶಂಸಿಸಿದೆವು.
ಶಾಮಣ್ಣ ಮೈಸೂರಿನವರು. ಸದಾ ಅವರ ಕೈನಲ್ಲಿ ಕ್ಯಾಲ್ಕುಲೇಟರ್ ಇರುತ್ತೆ. ಸೋಪು, ಕಡಲೆಬೀಜ, ಕೊಬ್ಬರಿ, ಕೋಸು, ಬ್ರೆಡ್... ಮಾಲ್ನಲ್ಲಿ ಯಾವುದೇ ಐಟಂ ಕಂಡರೂ ಕಣ್ಣರಳಿಸಿಯೇನೋ ನೋಡುತ್ತಾರೆ. ಆದರೆ ಕೊಳ್ಳುವುದಿಲ್ಲ. ಡಾಲರ್ನಲ್ಲಿರುವ ಬೆಲೆಯನ್ನು ರುಪಾಯಿಗೆ ಲೆಕ್ಕ ಹಾಕುವುದೇ ಆಯಿತು. ಇಂತಿಷ್ಟು ರುಪಾಯಿ (ಖರೀದಿಸದೆ) ಉಳಿಸಿದೆ ಎನ್ನುವ ಬೀಗು. ಕುಲಕರ್ಣಿ ಅನಾಮತ್ತಾಗಿ ಅವರ ಕೈನಿಂದ ಕ್ಯಾಲ್ಕುಲೇಟರ್ ಅಪಹರಿಸಿ, 'ನೀವು ಭಾರತಕ್ಕೆ ವಿಮಾನವೇರುವಾಗವೇ ವಾಪಸು ಕೊಡುವುದು' ಎಂದರು. ಶಾಮಣ್ಣ ಪೆಚ್ಚಾದರು.
ಜಾನ್ ಗೆರಾಲ್ಡ್ ಎಂಬತ್ತರ ಇಳಿವಯಸ್ಸಿನಲ್ಲೂ ಉದ್ಯಾನವದ ಸುತ್ತ ಹತ್ತು ಬಾರಿ ಓಡುತ್ತಾರೆ. ಅವರಿಗೆಂದು ಬುತ್ತಿ ತಂದಿದ್ದೆ. ಮುಚ್ಚಳ ತೆಗೆದು ಆ ತಿನಿಸನ್ನು ಉಪ್ಪಿನಕಾಯಿಯೊಂದಿಗೆ ನೆಂಚಿಕೊಂಡು ಬಾಯಿಗಿಟ್ಟುಕೊಂಡರು. ಅದು ರಾಗಿಮುದ್ದೆ ಎಂದು ಹೇಳಿದೆ. ಅದನ್ನು ತಯಾರಿಸುವ ವಿಧಾನ ವಿವರಿಸಿದಾಗ ತಮ್ಮ ಡೈರಿಯಲ್ಲಿ ಬರೆದುಕೊಂಡರು. ಕಟ್ಟಿಗೆ ಉರಿಸುತ್ತೇನೆ. ಇಲ್ಲೇ ಒಂದು ಪ್ರಾತ್ಯಕ್ಷಿಕೆಯಾಗಲಿ ಎಂದರು. ಶೀತ ದೇಶದಲ್ಲಿ ಬಯಲಲ್ಲಿ ಕಟ್ಟಿಗೆ ಉರಿಸಿ ಅದರ ಮುಂದೆ ಕುಕ್ಕುರಗಾಲಿನಲ್ಲಿ ಕೂರುವುದಲ್ಲವೆ ಸ್ವರ್ಗ?!
ಮೊನ್ನೆ ತಾನೆ ಬಂದಿಳಿದ ತ್ರಿಚೂರಿನ ಗೋವರ್ಧನ್, ಅಲ್ಲಿ ನೋಡಿ ಆ ಸಣ್ಣ ಪಾರ್ಕ್ನಲ್ಲಿ ಡಜನ್ ನಾಯಿಗಳು ನಾಲ್ಕು ಜನರ ಮೇಲೆ ಹೇಗೆ ಎಗರಾಡ್ತಿವೆ ಅಂತ ಗಾಬರಿಗೊಂಡರು. ಶಾಮಣ್ಣಾಜಿ, 'ಅರೆ ಅದು ಶ್ವಾನೋದ್ಯಾನ. ಅಂದರೆ ನಾಯಿಗಳ ಪಾರ್ಕ್. ತಮ್ಮ ತಮ್ಮ ನಾಯಿಗಳನ್ನು ಕರೆತಂದು ಆಟವಾಡಿಸುತ್ತಿದ್ದಾರೆ. ನಮಗಿಂತ ಅವರೆಲ್ಲ ಸುರಕ್ಷಿತವಾಗಿದಾರೆ ಬಿಡಿ' ಎಂದರು.
ಸೂರ್ಯ ನೆತ್ತಿ ದಾಟಿ ತಾಸುಗಳೆ ಸಂದಿದ್ದವು. ಆದರೇನು ಗಡ ಗಡ ಚಳಿಯನ್ನು ಶಮನಗೊಳಿಸಲಾಗದೆ ಸೋತಿದ್ದ. ನಾವು ಒಬ್ಬೊಬ್ಬರೂ ನಮ್ಮ ಗುರುತು ನಮಗೇ ಸಿಗದಂತೆ ವಾನರ ಟೋಪಿ, ನೀಳ ಸ್ವೆಟರ್, ಮೇಲೆ ಕೋಟು ಧರಿಸಿ ಮಫ್ಲರ್ ಬಿಗಿದಿದ್ದೆವು. ಕಾಲುಗಳು ಎರಡೆರಡು ಚೀಲ ತೊಟ್ಟು ಬೂಟು ಸೇರಿದ್ದವು. ಕೈಗೆ ಗ್ಲೌಸು.
ಕಂದಸ್ವಾಮಿ ಹೇಳಿದರು, 'ನಾಳೆ ಮಧ್ಯಾಹ್ನ ಮೂರಕ್ಕೆ ಕಿರ್ಕ್ಲ್ಯಾಂಡ್ ರಾಮಮಂದಿರದಲ್ಲಿ ಕದ್ರಿ ಗೋಪಾಲನಾಥ್ರಿಂದ ಸ್ಯಾಕ್ಸೋಫೋನ್ ಕಚೇರಿ ಇದೆ. ಮರೆಯಬೇಡಿ, ಹೇಗೂ ಭಾನುವಾರ ರಜ. ನಿಮ್ಮ ಮಕ್ಕಳನ್ನು ಹೊರಡಿಸಿಕೊಂಡು ಬನ್ನಿ' ಎಂದು ತಾವೇ ಕಾರ್ಯಕ್ರಮ ಏರ್ಪಡಿಸಿದಷ್ಟು ಠೀವಿಯಿಂದ ಪ್ರಕಟಿಸಿದ್ದರು. ಒಂದಿಬ್ಬರು ಆಗಲೇ ಮಗ/ ಮಗಳ ಕಾರು ಬಂದಿದ್ದರಿಂದ ಹತ್ತಿಕೊಂಡರು.
ಬ್ರಿಸ್ಟಲ್ ಪಾರ್ಕ್ಗೆ ಹೊಸದಾಗಿ ಬರುವವರು ಪರಿಚಿತರಾಗುತ್ತಾರೆ. ತಮ್ಮೂರಿಗೆ ವಾಪಸಾಗುವವರು ಮತ್ತೆ ಕಾಣೋಣ ಅಂತ ನೋವಿನ ವಿದಾಯ ಹೇಳುತ್ತಾರೆ. ಅಂತೂ ನಾವು ಪೋಷಿಸುವ 'ಉಭಯಕುಶಲೋಪರಿ ಕಟ್ಟೆ' ಅಲ್ಲಿ ಸದಾ ಇರುತ್ತದೆ.
= ಬಿಂಡಿಗನವಿಲೆ ಭಗವಾನ್