

ಲೋಹಶಿಲ್ಪದ ಕಲಾ ಗಾರುಡಿಗ ಶಶಿಧರ ಭಟ್. ಕಾರ್ಕಳ ತಾಲೂಕಿನ ಕೆರ್ವಾಶೆಯಲ್ಲಿ ಅವರು ಹತ್ತು ವರ್ಷ ಹಿಂದೆ ಸಣ್ಣದಾಗಿ ಆರಂಭಿಸಿದ ಗೃಹೋದ್ಯಮ ಇಂದು ಬೃಹತ್ತಾಗಿ ಬೆಳೆದಿದೆ.
ಈ ಯುವಕನ ವಯಸ್ಸು ಇಪ್ಪತ್ತೆಂಟು. ಹತ್ತು ವರ್ಷಗಳಿಂದ ಬೆಳ್ಳಿಯ ಕುಸುರಿ ಕಲೆಯಲ್ಲಿ ಕರ್ನಾಟಕದಾದ್ಯಂತ ಹೆಸರು ಗಳಿಸಿರುವ ನಿಷ್ಣಾತ ಕಲಾವಿದ. ನಾನೂರಕ್ಕೂ ಅಧಿಕ ದೇವಾಲಯಗಳಲ್ಲಿ ಬೆಳ್ಳಿಯ ದ್ವಾರಗಳು, ಪಲ್ಲಕ್ಕಿಗಳು, ಮಂಟಪಗಳು, ಕಾಷ್ಠ ಶಿಲ್ಪಗಳು... ಹೀಗೆ ಬಹುವಿಧದ ರಚನೆಗಳನ್ನು ಅತ್ಯಂತ ಕಲಾತ್ಮಕವಾಗಿ ರಚಿಸಿ ಕೊಟ್ಟ ಕಲಾ ಕೌಶಲ್ಯ ಅವರದು. ಅವಿಭಜಿತ ದ.ಕ. ಜಿಲ್ಲೆಯಲ್ಲಂತೂ ಬಹುತೇಕ ದೇವಾಲಯಗಳಲ್ಲಿ ಇವರ ಕಲೆಯ ಸೊಬಗು ಮೆರೆಯುತ್ತಿದೆ. ಅಷ್ಟೇ ಏಕೆ, ಮುಂಬೈ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ದೇವಾಲಯಗಳಲ್ಲೂ ಇವರ ಕೈಕುಸುರಿ ಕಣ್ಣಿಗೆ ರಾಚುತ್ತವೆ.
ಲೋಹಶಿಲ್ಪದ ಈ ಕಲಾ ಗಾರುಡಿಗ ಶಶಿಧರ ಭಟ್. ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಕೂಡಬೆಟ್ಟುವಿನಲ್ಲಿ ಅವರು ಹತ್ತು ವರ್ಷಗಳ ಹಿಂದೆ ಸಣ್ಣದಾಗಿ ಆರಂಭಿಸಿದ ಗೃಹೋದ್ಯಮ ಇಂದು ಬೃಹತ್ತಾಗಿ ಬೆಳೆದಿದ್ದರೆ ಅದಕ್ಕೆ ಅವರ ಕಲಾ ಪ್ರೌಢಿಮೆಯೇ ಕಾರಣ. ಶಶಿಧರ ಕಲಿತದ್ದು ಹತ್ತನೆಯ ತರಗತಿ ಮಾತ್ರ. ತಾನು ಲೋಹಶಿಲ್ಪಿಯಾದದ್ದು ತೀರ ಅನಿರೀಕ್ಷಿತವೆನ್ನುತ್ತಾರೆ ಅವರು. ತಂದೆ ಹಲವು ವರ್ಷಗಳಿಂದ ದೇವಾಲಯವೊಂದರ ಉಸ್ತುವಾರಿ ವಹಿಸಿಕೊಂಡಿದ್ದರು. ದೇವಾಲಯದ ಸಂಪರ್ಕವೇ ಅವರಲ್ಲಿ ಲೋಹಶಿಲ್ಪಿಯಾಗಲು ಪ್ರೇರೇಪಿಸಿತಂತೆ.
ಮಾಳದ ಲೋಹಶಿಲ್ಪಿ ಸುಧಾಕರ ಡೋಂಗ್ರೆ ಕನ್ನಡ ಶಿಲ್ಪಕಲಾ ಅಕಾಡೆಮಿಯಿಂದ ಪುರಸ್ಕೃತರು. ಶಶಿಧರನಿಗೆ ಮೂರೂವರೆ ವರ್ಷಗಳ ಕಾಲ ಈ ಕಲೆಯ ಅಂತರಂಗವನ್ನು ತೆರೆದಿಟ್ಟವರು ಅವರೇ. ಉಡುಪಿಯ ಪದ್ಮನಾಭ ಭಟ್, ವಿಜಯರಾಘವ ರಾವ್ ಅವರು ಬೇಕಾದ ನೆರವನ್ನು ಒದಗಿಸಿ ವೃತ್ತಿಯಲ್ಲಿ ಮುಂದುವರೆಯಲು ಬೆನ್ನು ತಟ್ಟಿದವರು. ಹೆಬ್ರಿಯ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಎರಡು ಬೆಳ್ಳಿಯ ಮಂಟಪಗಳ ರಚನೆ ಅವರ ಮೊದಲ ಸೃಷ್ಟಿ. ಬಳಿಕ ನಲ್ಲೂರಿನ ಬಸದಿಯ ಬೆಳ್ಳಿ ಪಲ್ಲಕ್ಕಿ ರಚನೆಯಲ್ಲಿ ಒಳ್ಳೆಯ ಹೆಸರು ಬಂತು. ನಂತರ ಶಶಿಧರ್ ತಿರುಗಿ ನೋಡಿದ್ದಿಲ್ಲ. ಈಗ ಹತ್ತು ಮಂದಿ ಆಸಕ್ತರಿಗೆ ಕಲೆಯ ಗುಟ್ಟನ್ನು ಕಲಿಸಿ ಉದ್ಯೋಗ ಕೊಟ್ಟಿದ್ದಾರೆ. ಒಂದು ದಿನವೂ ಬಿಡುವಿಲ್ಲದೆ ಕೆಲಸ. ಮಂತ್ರಾಲಯದ ಗುರು ರಾಘವೇಂದ್ರರ ಸನ್ನಿಧಿಗೆ ತಯಾರಿಸಿ ಕೊಟ್ಟ ಬೆಳ್ಳಿಯ ಗಜೋತ್ಸವದ ಗಜರಾಜನ ಮೈಯಲ್ಲಿ ಬರೋಬ್ಬರಿ 2.80 ಕ್ವಿಂಟಾಲು ಬೆಳ್ಳಿಯಿದೆ! ಶ್ರೀಗಳ ಕೋರಿಕೆಯ ಮೇರೆಗೆ ಚಿನ್ನದ ಅಂಬಾರಿಯನ್ನೂ ಮಾಡಿ ಕೊಟ್ಟಿದ್ದಾರೆ. ಬೆಂಗಳೂರಿನ ಜಯನಗರದ ರಾಘವೇಂದ್ರ ಮಠದ ತೀರ್ಥಮಂಟಪದ ಕಲಾಕೌಶಲ ಅವರದೇ. ಧರ್ಮಸ್ಥಳ, ಎನ್.ಆರ್.ಪುರ, ಮೂಡಬಿದರೆ ಮೊದಲಾದೆಡೆ ಬಸದಿಗಳೂ ಸೇರಿದಂತೆ ದೇವಾಲಯ, ದೈವಾಲಯಗಳಲ್ಲಿ ಕಂಚು, ಹಿತ್ತಾಳೆ, ತಾಮ್ರ, ಬೆಳ್ಳಿ, ಪಂಚಲೋಹಗಳಿಂದ ಅವರು ಸಿದ್ಧಗೊಳಿಸಿದ ಸಹಸ್ರಾರು ರಚನೆಗಳಿವೆ. ದ್ವಾರಬಂಧ, ಪಲ್ಲಕ್ಕಿ, ಉಯ್ಯಾಲೆ, ಕವಚ, ಪ್ರಭಾವಳಿ, ಕಿರೀಟ, ಲಾಲಕಿ, ಪೀಠಗಳಲ್ಲದೆ ಆರತಿ ಮುಂತಾದ ಪೂಜಾ ಪರಿಕರಗಳು, ದೈವಗಳ ಕಡ್ಸಲೆ, ಅಣಿ ಎಲ್ಲವೂ ಶಶಿಧರ ಅವರ ಕೈಯಲ್ಲಿ ಚಿತ್ತಾಕರ್ಷಕವಾಗಿ ಸೃಷ್ಟಿಯಾಗಿವೆ.
ಕಾಗದದಿಂದ ಲೋಹಕ್ಕೆ
ತಾವು ಮಾಡಬೇಕಾದ ಚಿತ್ತಾರವನ್ನು ಮೊದಲು ಕಾಗದದಲ್ಲಿ ಬರೆಯುವ ಭಟ್ಟರು, ಬೆಳ್ಳಿ ಅಥವಾ ಬೇರೆ ಲೋಹದ ತಗಡನ್ನು ಬೇಕಾದ ಅಳತೆಗೆ ಕತ್ತರಿಸುತ್ತಾರೆ. ಬಿಸಿ ಮಾಡಿದ ಅರಗಿನ ಹಾಸಿನ ಮೇಲೆ ಈ ತಗಡನ್ನಿಡುತ್ತಾರೆ. ಅದರ ಮೇಲೆ ಕಾಗದದ ಚಿತ್ರವನ್ನಿರಿಸಿ ಬಗೆಬಗೆಯ ಚಾಣಗಳನ್ನು ಚಿತ್ರದ ಮೇಲಿಟ್ಟು ಕೊಡತಿಯಿಂದ ಹೊಡೆಯುತ್ತಾರೆ. ಆಗ ತಗಡಿನಲ್ಲಿ ಅಚ್ಚೊತ್ತುವ ಪ್ರತಿರೂಪವನ್ನು ಮರದ ಚೌಕಟ್ಟಿಗೆ ಅಂಟಿಸಿದರೆ ಸುಂದರ ಕಲಾಸೃಷ್ಟಿಗೆ ಜೀವ ಬರುತ್ತದೆ.
ಇಷ್ಟೇ ಅಲ್ಲ, ಯಾವುದೇ ದೇವಾಲಯಗಳಿಗೆ ಬೇಕಾದ ಸಮಗ್ರ ಮರದ ಸಾಮಗ್ರಿಗಳು, ಧ್ವಜಸ್ಥಂಭಗಳು, ತಾಮ್ರದ ಚಾವಣಿ ಎಲ್ಲವನ್ನೂ ಮಾಡಿಕೊಡುತ್ತಾರೆ. ದೇವಾಲಯದ ಗೋಡೆಯಿಂದಾರಂಭಿಸಿ ಎಲ್ಲ ಕೆಲಸಗಳನ್ನೂ ಸಮಗ್ರವಾಗಿ ನಿರ್ವಹಿಸುತ್ತಾರೆ. ಸದ್ಯಕ್ಕೆ ಕೊಯ್ಯೂರಿನ ದೇವಾಲಯದ ರಥದ ಕೆತ್ತನೆ ಆರಂಭಿಸಿದ್ದಾರೆ. ಸನ್ಮಾನ, ಪ್ರಶಸ್ತಿಗಳು ಎಳೆಯ ವಯಸ್ಸಿನಲ್ಲೇ ಅವರನ್ನರಸಿ ಬಂದಿವೆ. ಕಲಾಶಾಲೆಯ ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಹಾಯಧನವನ್ನೂ ನೀಡಿದೆ. ಒಂದು ರಥ ನಿರ್ಮಿಸಲು ಹತ್ತು ಮಂದಿ ಕೆಲಸಗಾರರು ನೂರು ದಿನ ಹಗಲಿರುಳೂ ಶ್ರಮಿಸಬೇಕಾಗುತ್ತದೆ ಎನ್ನುವ ಅವರು, ಈ ಕಲೆಯನ್ನು ಹವ್ಯಾಸವಾಗಿ ಮಾಡುತ್ತಿದ್ದೇನಲ್ಲದೆ ಹಣ ಗಳಿಕೆಯ ದೃಷ್ಟಿಯಿಂದ ಅಲ್ಲ ಎನ್ನುತ್ತಾರೆ. ವಿವರಗಳಿಗೆ ಅವರದೇ ಆದ ಛಿಡ್ಞಛಟಛ್ಞಜಟಿಜ್ಠಛ.್ಛ್ಟಟ ವೆಬ್‌ಸೈಟಿದೆ. (ದೂ.9449200695)
= ಪ.ರಾಮಕೃಷ್ಣ ಶಾಸ್ತ್ರಿ