

ನೀವು ಹಲವಾರು ತರದ ಅಭಿಮಾನಿಗಳನ್ನು ನೋಡಿರಬಹುದು, ಧೋನಿ ತಲೆ ಬೋಳಿಸಿಕೊಂಡಾಗ ತಾವೂ ತಲೇನ ಜಾರುಬಂಡೆ ಮಾಡಿಕೊಂಡವರು, ವಿಷ್ಣುವರ್ಧನ್ ಹಾಕ್ತಿದ್ರು ಅಂತ ತಾವೂ ಎಡಗೈಗೆ ಕಡಗ ಹಾಕೋರು, ತಮ್ಮ ಕೈ ಮೇಲೆ ನೆಚ್ಚಿನ ನಟನ ಹೆಸರು ಬರೆಸಿಕೊಂಡೋರು ಇತ್ಯಾದಿ. ಆದರೆ ಇಲ್ಲೊಬ್ಬ ಅಭಿಮಾನಿಯಿದ್ದಾರೆ, ತಮ್ಮ ನೆಚ್ಚಿನ ನಟ ಶಂಕರ್ನಾಗ್ ಮೇಲಿನ ಅತಿ ಅಭಿಮಾನವೇ ಇವರ ಬದುಕಿನ ಪ್ರತಿ ಕ್ಷಣವನ್ನೂ ರೂಪಿಸುತ್ತದೆ.
ಈತ ಆಟೋ ರಾಮಣ್ಣ. 'ಆಟೋ ರಾಜ' ಚಿತ್ರ ನೋಡಿಯೇ ಆಟೋ ಡ್ರೈವರ್ ಆಗಿ ಸೇವೆ ಮಾಡಬೇಕೆಂದು ಕನಸು ಕಂಡವರು, ಅಂದಿನಿಂದ ಶಂಕ್ರಣ್ಣನ ಎಲ್ಲ ಚಿತ್ರಗಳನ್ನು ಮತ್ತೆ ಮತ್ತೆ ನೋಡಿ ಆತನ ಮ್ಯಾನರಿಸಂ, ಡೈಲಾಗ್ಗಳು, ಸ್ಟೆ ೈಲ್ಗಳೆಲ್ಲವನ್ನೂ ತನ್ನದಾಗಿಸಿಕೊಂಡು 'ಜೂನಿಯರ್ ಶಂಕರ್ನಾಗ್' ಎಂದೇ ಹೆಸರು ಮಾಡಿದವರು ಈ ರಾಮಣ್ಣ.
ರಾಮಣ್ಣನ ಕೈ ಮೇಲಿರುವ 'ಶಂಕರ್ನಾಗ್' ಹಚ್ಚೆ, ಕುತ್ತಿಗೆಯಲ್ಲಿ ನೇತಾಡುವ ಎಂದೂ ತೆಗೆಯದ ಆಟೋರಾಜನೊಂದಿಗಿನ ತಮ್ಮ ಬಾಲ್ಯದ ಫೋಟೋ, ಮಾತು, ಕೃತಿಗಳೆಲ್ಲವನ್ನೂ ಕೇಳಿದರೆ ಇವರ ಮೈ-ಮನವೆಲ್ಲವನ್ನೂ ಶಂಕರ್ನಾಗ್ ಅಭಿಮಾನ ಆವರಿಸಿಕೊಂಡಿರುವುದು ಜಗಜ್ಜಾಹೀರಾಗುತ್ತದೆ. ಈ ಅಭಿಮಾನಕ್ಕೆ ಕಾರಣ ಕೇಳಿದರೆ ಮೊದಲು ತನಗೆ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಕೊಟ್ಟವರೇ ಅವರು ಎಂದು ನೆನೆಯುತ್ತಾರೆ. ರಾಮಣ್ಣ ಸಾಂಗ್ಲಿಯಾನವನ್ನೂ ಸೇರಿಸಿ ಶಂಕರ್ನಾಗ್ರೊಂದಿಗೆ ಮೂರು ಚಿತ್ರಗಳಲ್ಲಿ ಅಭಿನಯಿಸಿರುವುದಲ್ಲದೆ, 50ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನಟನಾಪ್ರೀತಿಯ ಹರಿವಿಗೆ ದಿಕ್ಕು ಕಾಣಿಸಿದ್ದಾರೆ. ಸಧ್ಯ ತೆರೆ ಕಾಣಬೇಕಿರುವ ಜೈ ಭಜರಂಗಬಲಿ, ಮರೆಯಾಗು ನೀ ಎಂಬ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಜೂನಿಯರ್ ನಾಗ್ ಆಗಿ ಹಲವಾರು ವೇದಿಕೆಗಳಲ್ಲಿ ನಾಗ್ ಚಿತ್ರಗಳ ಡೈಲಾಗ್ಗಳೆಲ್ಲವನ್ನೂ ನೀರು ಕುಡಿದಷ್ಟೇ ಸಲೀಸಾಗಿ ಹೊರಚೆಲ್ಲಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಇದೀಗ 'ಶಂಕ್ರಣ್ಣನ ಮನಸು, ಆಟೋ ರಾಮಣ್ಣನ ಕನಸು' ಎಂಬ ಚಿತ್ರಕತೆಯೊಂದಿಗೆ ನಿರ್ದೇಶನ ಮತ್ತು ಹೀರೋಪಾತ್ರದ ಹೊಣೆ ಹೊರಲೂ ತಯಾರಿ ನಡೆಸುತ್ತಿದ್ದಾರೆ!
ಶಂಕರ್ನಾಗ್ ಹಾಗೂ ತಮ್ಮ ಜೀವನದ ಕತೆಯನ್ನೇ ಎಳೆಯಾಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿರುವ ರಾಮಣ್ಣನಿಗೆ ಚಿತ್ರ ಗೆದ್ದರೆ 'ಶಂಕರ್ನಾಗ್' ಎಂಬ ಹೆಸರಿನಲ್ಲಿ ಕೈಲಾಗದವರಿಗೆ ಊಟವಸತಿಗೆ ಆಶ್ರಮವೊಂದನ್ನು ತೆರೆಯುವ ಚೆಂದದ ಕನಸಿದೆ. ಜೊತೆಗೆ ಶಂಕರ್ನಾಗ್ ಮೃತಪಟ್ಟ ಸ್ಥಳದಲ್ಲಿ ಅವರ ಒಂದು ಪ್ರತಿಮೆಯನ್ನೂ ಮಾಡುತ್ತಾರಂತೆ.
ಶಂಕ್ರಣ್ಣನ ಬರ್ತ್ಡೇಗೆ ರಾಮಣ್ಣನ ಕೊಡುಗೆ
ಪ್ರತಿ ವರ್ಷ ಶಂಕರ್ ಹುಟ್ಟುಹಬ್ಬದಂದು(ನ.9) ರಾಮಣ್ಣ ಒಂದಲ್ಲಾ ಒಂದು ವಿಶಿಷ್ಟ ಕಾರ್ಯದಲ್ಲಿ ತೊಡಗುತ್ತಾರೆ. ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಶಂಕರ್ನಾಗ್ ಕಂಚಿನ ಪ್ರತಿಮೆ ಮಾಡಿಸಿ ನಿಲ್ಲಿಸಿದ್ದಾರೆ. ಅನ್ನದಾನ, ರಕ್ತದಾನವೇ ಅಲ್ಲದೆ ಕಳೆದ ವರ್ಷ ಕರ್ನಾಟಕ ಸುತ್ತಿ ಶಂಕರ್ನಾಗ್ ಅಭಿಮಾನಿಗಳ ಸಂದರ್ಶನ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಪಘಾತದಲ್ಲಿ 50 ಜನರ ಜೀವ ರಕ್ಷಿಸಿ, ತಾನು ಸಾಯುವಾಗ ತನ್ನ ಪ್ರಾಣವನ್ನು ಶಂಕರ್ನಾಗ್ಗೆ ಅರ್ಪಿಸಿದ ಕೊಟ್ಟೂರಿನ ಡ್ರೈವರ್ ಮುರಳಿ, ಶಂಕರ್ ಫೋಟೋವನ್ನೇ ದೇವರಕೋಣೆಯಲ್ಲಿಟ್ಟು ಪೂಜಿಸುವ ಹುಡುಗನೊಬ್ಬನ ಕತೆ, ಶಂಕರ್ ನೀಡಿದ 5000 ಬಂಡವಾಳವಿಟ್ಟುಕೊಂಡು ಇಂದು ಲಕ್ಷಾಧೀಶರಾದವರ ಕತೆ... ಇಂಥ ಹತ್ತು ಹಲವಾರು ಕುತೂಹಲಗಳು ಈ ವಿಶಿಷ್ಟ ಪುಸ್ತಕದಲ್ಲಿದೆ. ಶಂಕರ್ನಾಗ್ ಜೀವನದ ಬಗ್ಗೆ ಮಾಡಿದ ಇನ್ನೊಂದು ಡಿವಿಡಿಯೂ ಇದೆ. ಈ ಪುಸ್ತಕ ಇಲ್ಲವೇ ಡಿವಿಡಿ ಕೊಂಡವರಿಗೆ ಇವರ ಆಟೋದಲ್ಲಿ ಉಚಿತ ಡ್ರಾಪ್! ಈ ವರ್ಷದ ನ.9ಕ್ಕೆ ಶಂಕರ್ನಾಗ್ ಬಗ್ಗೆ ಇವರೇ ಬರೆದ ಗೀತೆಗಳಿಗೆ ಟ್ಯೂನ್ ಹಾಕಿಸಿ ಕ್ಯಾಸೆಟ್ ತರುವ ಯೋಜನೆ ಇಟ್ಟುಕೊಂಡಿದ್ದಾರೆ.
ಅಷ್ಟೇ ಅಲ್ಲ, ರಾತ್ರಿ 9ರಿಂದ 2 ಗಂಟೆವರೆಗೆ ಒಂದೂವರೆ ಛಾರ್ಜಿನಲ್ಲಿ ಓಡಿಸಿದ ಆಟೋದಿಂದ ಬಂದ ಅರ್ಧ ಹಣವನ್ನು ಬಡವರಿಗೆ ಮೀಸಲಿಡುತ್ತಾರೆ. ಗರ್ಭಿಣಿಯರಿಗೆ ಫ್ರೀ ಡ್ರಾಪ್ ನೀಡುತ್ತಾರೆ. ಇವರ ಆಟೋದಲ್ಲೊಮ್ಮೆ ಪ್ರಯಾಣಿಕರೊಬ್ಬರು 2 ಲಕ್ಷವನ್ನು ಮರೆತು ಬಿಟ್ಟು ಹೋಗಿದ್ದರು. ದೇವರೇ ನನಗೆ ದಾರಿ ತೋರಿದ ಎಂದು ಯೋಚಿಸಿದ ರಾಮಣ್ಣಗೆ ಮರುಕ್ಷಣವೇ ಶಂಕರ್ನಾಗ್ ನೆನಪಿಗೆ ಬಂದು ಆ ಹಣವನ್ನು ಪೊಲೀಸ್ ಸ್ಟೇಶನ್ಗೆ ತೆಗೆದುಕೊಂಡು ಹೋಗಿ ನೀಡಿದರಂತೆ! ಎಷ್ಟೋ ಬಾರಿ ಆಟೋ ಹತ್ತಿ ಬಂದವರು ದುಡ್ಡಿಲ್ಲ ಎಂದಾಗ ಇವರೇ ಬಸ್ಛಾರ್ಜನ್ನೂ ಕೊಟ್ಟು ಊರಿಗೆ ಕಳಿಸಿದ್ದಾರೆ.
'ಇವತ್ತಿರ್ತೀವಿ, ನಾಳೆ ಹೋಗ್ತೀವಿ. ಒಳ್ಳೆ ಹೆಸ್ರು ಮಾಡ್ಬೇಕು. ಅದುನ್ನ ತಿಳ್ಕೊಂಡ್ರೆ ಯಾರೂ ತಪ್ ಮಾಡಲ್ಲ. ನಾವೇನ್ ಮಾಡ್ತೀವೋ ಅದೇ ಉಳ್ಕಳದು' ಎನ್ನುವ ಆಟೋ ರಾಮಣ್ಣ ಓದಿದ್ದು ಕೇವಲ 6ನೇ ತರಗತಿ.
ಇವರ ಸಮಾಜಸೇವೆ ಪರಿಗಣಿಸಿ ರಾಜ್ಯಸರ್ಕಾರ ಕರ್ನಾಟಕ ಭೂಷಣ, ಸಾರಥಿ ನಂ 1 ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಒಳ್ಳೆ ಹೃದಯದ ರಾಮಣ್ಣನ ಕನಸೆಲ್ಲವೂ ನನಸಾಗಲಿ.
= ರೇಶ್ಮಾರಾವ್ ಸೊನ್ಲೆ