ಮುಸ್ಸಂಜೆ ಸಮೀಕ್ಷೆ ಪ್ರಸಂಗ!

ಮುಸ್ಸಂಜೆ ಸಮೀಕ್ಷೆ ಪ್ರಸಂಗ!
Updated on: 

ವೃದ್ಧ ದಂಪತಿಗಳು ಅನ್ಯೋನ್ಯವಾಗಿ ಮಾತನಾಡುತ್ತಾ ಗುಲಾಬಿ ತೋಟದ ಕಲ್ಲುಬೆಂಚಿನ ಮೇಲೆ ಕೂತಿದ್ದರು. 'ಸಮರಸ ದಾಂಪತ್ಯ'ದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದ ಯುವಕನೊಬ್ಬ ತುಸು ದೂರದಲ್ಲಿ ನಿಂತು ಅವರ ಮಾತಿನಲ್ಲಿನ ಆತ್ಮೀಯತೆಯನ್ನು ಖಚಿತಪಡಿಸಿಕೊಂಡ. ಅವರೆದುರಿಗೆ ಹೋದ.
'ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ ನಾನೊಂದು ಪ್ರಶ್ನೆ ಕೇಳಲೇ ತಾತ?'ಎಂದ ಅತಿ ವಿನಯದಿಂದ. 'ಓಹೋ... ಅಗತ್ಯವಾಗಿ ಕೇಳಪ್ಪ...' ಎಂದರು ಬೊಚ್ಚುಬಾಯಿ ಅರಳಿಸುತ್ತ.
'ನಾನು ದಂಪತಿಗಳ ನಡುವಿನ ಆತ್ಮೀಯತೆ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದೇನೆ. ಇಷ್ಟು ವರ್ಷಗಳಾದರೂ ನೀವು ಇಷ್ಟೊಂದು ಅನ್ಯೋನ್ಯವಾಗಿದ್ದೀರಲ್ಲ? ಈ ವಯಸ್ಸಿನಲ್ಲೂ ಪಾರ್ಕಿನಲ್ಲಿ ಕುಳಿತು ಹೊತ್ತಿನ ಪರಿವೆಯಿಲ್ಲದೆ ಪಿಸುದನಿಯಲ್ಲಿ ಮಾತನಾಡುವಷ್ಟು ಪ್ರೀತಿ- ಪ್ರೇಮ ಅಂದರೆ ಆಶ್ಚರ್ಯವಾಗ್ತಿದೆ ತಾತ. ಈಗಿನ ಕಾಲದವರೆಲ್ಲ ಮದುವೆ ಆಗಿ ಒಂದು ವರ್ಷದಲ್ಲೇ ವಿರಸ- ವಿಚ್ಛೇದನ ಅಂತ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಇರ್ತಾರೆ. ಅದಕ್ಕೆ... ನಿಮ್ಮ ಯಶಸ್ವಿ ದಾಂಪತ್ಯದ ರಹಸ್ಯವೇನು ಅಂತ ಸ್ವಲ್ಪ ಹೇಳ್ತೀರಾ...?' ಕೇಳಿದನಾತ.
ಅಜ್ಜಿ ನಸುನಗುತ್ತಾ ಪತಿಯ ಕಡೆ ನೋಡಿದರೆ, ಆತ ಬಾಯ್ತುಂಬ ನಗುತ್ತಾ, 'ಇದರಲ್ಲೇನು ಇದೆಯಪ್ಪ ರಹಸ್ಯ? ಅಂದಿನಿಂದ ಇಂದಿನವರೆಗೂ ನಾವಿಬ್ಬರೂ ಪರಸ್ಪರ ಪ್ರೀತಿಸ್ತೀವಿ, ಗೌರವಿಸ್ತೀವಿ.
ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೀವಿ. ನಾನು ಅವಳಿಗೆ ಜೀವ ಆದ್ರೆ ಅವಳು ನನ್ನ ನೆರಳು... ಅಲ್ಲವೇನೆ ಸಾವಿತ್ರಿ...?' ಎಂದು ಪತ್ನಿಯತ್ತ ತಿರುಗಿದ್ದರು.
ಆಗ ಆಕೆ ತೀರಾ ಸಂಕೋಚದಿಂದ, 'ಅದೆಲ್ಲ ಯಾಕ್ರಿ ಹೇಳ್ತೀರಾ?' ಎಂದು ಹೇಳಿದರು ಮುದುಡಿಕೊಳ್ಳುತ್ತಾ.
ಆ ಯುವಕ ತೃಪ್ತಿಯಿಂದ ಅವರಿಬ್ಬರ ಕಡೆ ತಿರುಗಿ, 'ಭೇಷ್ ತಾತ... ನಿಮ್ಮ ಹಾಗೆ ಇದ್ದರೆ ಕುಟುಂಬದಲ್ಲಿ ಕಲಹ ಅನ್ನೋದೇ ಇರೋದಿಲ್ಲ. ಹ್ಞೂಂ...' ಎಂದು ನಿಟ್ಟುಸಿರು ಬಿಡುತ್ತಾ, 'ಬರಲಾ ತಾತ... ಒಂದೇ ಒಂದು ಫೋಟೋ' ಎಂದು ಫೋಟೋ ಕ್ಲಿಕ್ಕಿಸಿ, ಕೃತಜ್ಞತೆ ತಿಳಿಸಿ ಹೊರಟ.
ಅವನು ಅಲ್ಲಿಂದ ನಾಲ್ಕು ಮಾರು ಹೋಗಿರಬಹುದಷ್ಟೆ. ಆಗ ಅಜ್ಜಿ ಪಿಸುಗುಟ್ಟಿದ್ದರು. 'ಹಣೆಯಲ್ಲಿ, ಕೈ ಕಾಲುಗಳಲ್ಲಿ ನೀವು ಹೊಡೆದ ಗಾಯದ ಕಲೆಗಳನ್ನ ಅವನಿಗೆ ತೋರಿಸೋಣ ಅಂತಿದ್ದೆ. ಆದ್ರೆ ನೀವು ನರಸಿಂಹಾವತಾರ ತಾಳಿ, ಈಗಲೇ ತವರಿಗೆ ಹೋಗು ಅಂದ್ರೆ ನಾನೇನು ಮಾಡಲಿ? ಈಗ ಅಪ್ಪನೂ ಇಲ್ಲ, ಅಮ್ಮನೂ ಇಲ್ಲ. ಅದಕ್ಕೇ ಸುಮ್ಮನೆ ಇದ್ದೆ'.
ಆ ವೃದ್ಧ 'ಕಿಲಾಡಿ ನೀನು...' ಎಂದು ಆಕೆಯ ಕೈತಟ್ಟಿ ಜೋರಾಗಿ ನಗುತ್ತಿದ್ದರೆ ಆ ವೃದ್ಧೆಯೂ ನಗುವಿನಲ್ಲಿ ಭಾಗಿಯಾದರು.
ಆ ಯುವಕ ಹಿಂತಿರುಗಿ ನೋಡುತ್ತಾ, 'ಆಹಾ ಎಂಥ ಪ್ರೀತಿ... ಎಂಥ ನಗು...! ಗಂಡ-ಹೆಂಡತಿ ಅಂದ್ರೆ ಇವರ ಹಾಗಿರಬೇಕು' ಎಂದುಕೊಳ್ಳುತ್ತಾ ಮತ್ತೊಂದು ಜೋಡಿಯನ್ನು ಅರಸುತ್ತಾ ಹೊರಟಿದ್ದ.

= ಶಾರದಾ ವಿ. ಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com