ಭವಾನಿ ಕಹಾನಿ

ಭವಾನಿ ಕಹಾನಿ
Updated on: 

ಜೀವನದಲ್ಲಿ ಇನ್ನೊಬ್ಬರಿಗೆ ಆದರ್ಶವಾಗಿ ಬಾಳಬೇಕು ಎಂಬ ಕನಸು, ಬಿಡುವಿಲ್ಲದ ಕೆಲಸದ ನಡುವೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಾಮಾಜಿಕ ಸೇವೆ... ಇದು ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ, ದ.ಕ. ಜಿಲ್ಲಾ ಶುಶ್ರೂಷಕಿಯರ ಸಂಘದ ಅಧ್ಯಕ್ಷೆ ಭವಾನಿಯ ಬದುಕು.
ಶುಶ್ರೂಷಕಿಯಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ಭವಾನಿ, ತಮ್ಮ ಜೀವನದ ಇನ್ನೊಂದು ಮಗ್ಗುಲಿನಲ್ಲಿ ಈಜು, ಶಾಟ್‌ಪುಟ್, ಡಿಸ್ಕಸ್, ಟ್ರಿಪಲ್ ಜಂಪ್, ಹ್ಯಾಮರ್, ಥ್ರೋಬಾಲ್, ಟೆನ್ನಿಕಾಯ್ಟ್, ಪವರ್ ಲಿಫ್ಟಿಂಗ್, ಜಾನಪದ ನೃತ್ಯ, ನಾಟಕ, ಯಕ್ಷಗಾನದಲ್ಲೂ ಛಾಪು ಮೂಡಿಸಿದ್ದಾರೆ.
ಮೆಗಾ ಚಾಂಪಿಯನ್
ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟದ ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ, ಪವರ್ ಲಿಫ್ಟಿಂಗ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಶಾಟ್‌ಪುಟ್‌ನಲ್ಲಿ ಬೆಳ್ಳಿ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್‌ನ ಶಾಟ್‌ಪುಟ್, ಡಿಸ್ಕಸ್‌ನಲ್ಲಿ ಬೆಳ್ಳಿ, ಮಣಿಪುರ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್‌ನ ಶಾಟ್‌ಪುಟ್, ಡಿಸ್ಕಸ್, ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ, ಹೈದರಾಬಾದ್ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಶಾಟ್‌ಪುಟ್, ಡಿಸ್ಕಸ್‌ನಲ್ಲಿ ಚಿನ್ನ, ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ ಪದಕ... ಹೀಗೆ ಕ್ರೀಡಾಕೂಟದಲ್ಲಿ ಇವರ ಸಾಧನೆ ಇಷ್ಟಕ್ಕೆ ಮುಗಿಯುವುದಿಲ್ಲ.
ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಈಜು ಹಾಗೂ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಭವಾನಿ, ಮೈಸೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಯಲ್ಲಿ ಎರಡು ಬಾರಿ ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.
20ಕ್ಕೂ ಹೆಚ್ಚು ರಾಜ್ಯಮಟ್ಟ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. 6- 8 ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಭವಾನಿ, ಬೆಂಗಳೂರಿನಲ್ಲಿ ನಡೆದ ಏಷ್ಯನ್ ಓಪನ್ ಮಾಸ್ಟರ್ ಕ್ರೀಡಾಕೂಟದಲ್ಲಿ ಶಾಟ್‌ಪುಟ್ ಹಾಗೂ ರಿಲೇಯಲ್ಲಿ ಕಂಚಿನ ಪದಕ, ಮಲೇಷ್ಯಾ ಓಪನ್ ಮಾಸ್ಟರ್ ಕ್ರೀಡಾಕೂಟದ ಶಾಟ್‌ಪುಟ್‌ನಲ್ಲಿ ಚಿನ್ನ, ಡಿಸ್ಕಸ್‌ನಲ್ಲಿ ಬೆಳ್ಳಿ, ಜಾವಲಿನ್‌ನಲ್ಲಿ ಕಂಚು, ಬ್ಯಾಂಕಾಕ್ ಏಷ್ಯನ್ ಓಪನ್ ಮಾಸ್ಟರ್ ಕ್ರೀಡಾಕೂಟದಲ್ಲಿ ಶಾಟ್‌ಪುಟ್, ಡಿಸ್ಕಸ್, ಜಾವಲಿನ್‌ನಲ್ಲಿ ಬೆಳ್ಳಿ, ಶ್ರೀಲಂಕಾ ಏಷ್ಯನ್ ಓಪನ್ ಮಾಸ್ಟರ್ ಕ್ರೀಡಾಕೂಟದಲ್ಲಿ ಶಾಟ್‌ಪುಟ್, ಡಿಸ್ಕಸ್‌ನಲ್ಲಿ ಚಿನ್ನ, ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ ಪದಕ, ಸಿಂಗಾಪುರದಲ್ಲಿ ನಡೆದ 29ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಶಾಟ್‌ಪುಟ್, ಡಿಸ್ಕಸ್, ಲಾಂಗ್‌ಜಂಪ್‌ನಲ್ಲಿ ಮೊದಲ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶಾಟ್‌ಪುಟ್‌ನಲ್ಲಿ ಪ್ರಥಮ, ಟ್ರಿಪಲ್ ಜಂಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಕೀರ್ತಿ ಭವಾನಿಯವರದ್ದು.
ಸಾಂಸ್ಕೃತಿಕ ಸಾಧನೆ
ಮಂಗಳೂರು ಗೆಳೆಯರ ಬಳಗ ನಾಟಕರಂಗದ ಮೂಲಕ ವೇದಿಕೆ ಪ್ರವೇಶ ಮಾಡಿದ ಭವಾನಿ ಪೌರಾಣಿಕ ನಾಟಕಗಳಲ್ಲಿ ಝಾನ್ಸಿರಾಣಿ, ರಾಜಮಾತೆ, ಶ್ರೀದೇವಿ, ಸಿರಿಲಲಿತೆ, ದೇಯಿ ಪಾತ್ರಗಳನ್ನು ಹಾಗೂ ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿಯಾಗಿರುವ ಯಕ್ಷಗಾನದಲ್ಲಿ ಅನುಸಾಲ್ವ, ವೀರಭದ್ರ, ಅಗ್ನಿ, ಭೀಮನ ಪಾತ್ರವನ್ನೂ ಸಮರ್ಥವಾಗಿ ನಿಭಾಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳೂರಿನ ಎನ್‌ಜಿಒ ಒಂದರಲ್ಲಿ 10 ವರ್ಷ ಸೇವೆ ಸಲ್ಲಿಸಿರುವ ಭವಾನಿ, ತುಳು ಅಕಾಡೆಮಿ, ಮಹಿಳಾ ಮಂಡಲದಲ್ಲಿ ಈಗಲೂ ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ನೀರಿಗೆ ಇಳಿಯಲು ಹೆದರುತ್ತಿದ್ದ ಇವರು 40ನೇ ವಯಸ್ಸಿನಲ್ಲಿ ಈಜು ಕಲಿತು ರಾಷ್ಟ್ರಮಟ್ಟದಲ್ಲಿ ಮೂರು ಬೆಳ್ಳಿ ಪದಕ ಗಳಿಸಿದ್ದು ಸಾಧನೆಯೇ ಸರಿ.
ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಶ್ರೀಧರ್ ರೈ ಅವರಿಂದ ತರಬೇತಿ ಪಡೆದು ಕ್ರೀಡಾ ಕ್ಷೇತ್ರ ಪ್ರವೇಶಿಸಿದ ಭವಾನಿಗೆ ಯಕ್ಷಗಾನದತ್ತ ಆಸಕ್ತಿ ಬಾಲ್ಯದಿಂದಲೇ ಇತ್ತು. ನಂತರ ಉಪ್ಪಳ ಕೃಷ್ಣ ಮಾಸ್ಟರ್‌ರಿಂದ ಮೂರು ತಿಂಗಳ ಯಕ್ಷಗಾನ ತರಬೇತಿ ಪಡೆದು ಬಬ್ರುವಾಹನ ಕಾಳಗ ಯಕ್ಷಗಾನದಲ್ಲಿ ಅನುಸಾಲ್ವನ ಪಾತ್ರ ಮಾಡಿ ರಂಗಪ್ರವೇಶ ಪಡೆದರು.
ಶುಶ್ರೂಷಕಿಯಾಗಿ ಒಟ್ಟು 32 ವರ್ಷದಿಂದ ಜನಸೇವೆಯಲ್ಲಿ ತೊಡಗಿಕೊಂಡಿರುವ ಇವರು, ದ.ಕ. ಜಿಲ್ಲಾ ಶುಶ್ರೂಷಕಿ ಸಂಘಕ್ಕೆ 2011ರಲ್ಲಿ ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

= ವಿದ್ಯಾ ಇರ್ವತ್ತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com