

ಸಂಗೀತ- ಸಾಹಿತ್ಯಕ್ಕೆ ಮನ ಸೋಲದವರು ಯಾರಿದ್ದಾರೆ? ಹಾಗೊಂದು ವೇಳೆ ಇದ್ದರೆ ಅವರು ಪಶುಸಮಾನ ಎನ್ನುತ್ತದೆ ಸುಭಾಷಿತ. ಮಗುವಿನಿಂದ- ವೃದ್ಧರವರೆಗೆ ಎಲ್ಲರನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ ಸಂಗೀತ. ಅದರಲ್ಲೂ ದೇಸೀತನದ ಜಾನಪದ ಗೀತೆ ಪಂಡಿತ- ಪಾಮರರೆನ್ನದೆ ಎಲ್ಲರನ್ನೂ ರಂಜಿಸಿ ಅತೀವ ಆನಂದವನ್ನು ಕೊಡುವುದಲ್ಲದೆ, ಬದುಕುವ ರೀತಿಯನ್ನೂ ಹೇಳುತ್ತದೆ.
ಈ ಸಾಹಿತ್ಯವನ್ನು ಉಳಿಸಿ ಬೆಳೆಸುತ್ತಿರುವವರಲ್ಲಿ ಹರಿಹರದ ಕತ್ತಿಗೆ ಪರಮೇಶ್ವರಪ್ಪನವರೂ ಒಬ್ಬರು. ವೃತ್ತಿಯಲ್ಲಿ ಹರಿಹರದ ಗ್ರಾಸಿಂ ಇಂಡಸ್ಟ್ರಿಯಲ್ಲಿ ಸೇವೆ ಸಲ್ಲಿಸುತ್ತಲೇ ಪ್ರವೃತ್ತಿಯಾಗಿ ಈ ಕಲೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಮನೆಯಲ್ಲಿ ಅವರ ತಂದೆ ಪ್ರತಿ ಸಂಜೆ ಎಲ್ಲರನ್ನೂ ಸೇರಿಸಿಕೊಂಡು ಏಕತಾರಿ ಹಿಡಿದು ಭಜನೆ ಮಾಡುತ್ತಿದ್ದುದು ಚಿಕ್ಕಂದಿನಲ್ಲೇ ಆಸಕ್ತಿ ಮೂಡಿಸಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶಾಲೆಯಲ್ಲಿ ಓದುತ್ತಿರುವಾಗ ಚೆನ್ನಾಗಿ ಹಾಡುತ್ತಾನೆಂದು ಶಾಲೆಯ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಇವರಿಂದಲೇ ಮಾಡಿಸುತ್ತಿದ್ದರು. ಹಾಗಾಗಿ ವೇದಿಕೆಯಲ್ಲಿ ಹಾಡುವುದು ಲೀಲಾಜಾಲವಾಯಿತು. ಹತ್ತನೇ ತರಗತಿಯ ನಂತರ ಒಮ್ಮೆ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಹಾಡಿದುದನ್ನು ಎಲ್ಲರೂ ಮೆಚ್ಚಿದ್ದು ಅವರ ಮೊದಲ ಕಾರ್ಯಕ್ರಮವಾದರೆ, ಇತ್ತೀಚೆಗೆ ಹರಿಹರದಲ್ಲಿ ನಡೆದ ಜಿಲ್ಲಾ ಕಾರ್ಯಕ್ರಮದಲ್ಲಿ ನೀಡಿದ್ದು 2006ನೇ ಕಾರ್ಯಕ್ರಮವಂತೆ! 58 ವರ್ಷದವರಾದ ಪರಮೇಶ್ವರಪ್ಪ 35 ವರ್ಷದಿಂದ ಸಂಪೂರ್ಣವಾಗಿ ಗಾಯನಕ್ಕೆ ಅರ್ಪಿಸಿಕೊಂಡವರು. ತಾವು ನಡೆದು ಬಂದ ದಾರಿಗೆ ತಂದೆ ಬಸಪ್ಪ ಗುಂಡಾಭಕ್ತರ ಹಾಗೂ ತರೀಕರೆಯ ಕೆ.ಆರ್. ಲಿಂಗಪ್ಪ ಸ್ಫೂರ್ತಿಯೆಂದು ಸ್ಮರಿಸುತ್ತಾರೆ.
ಪಕ್ಕವಾದ್ಯಗಳೊಂದಿಗೆ ಏಕತಾರಿ ಮೀಟುತ್ತಾ, ಚಿಟಿಕೆ ಹಾಕುತ್ತಾ, ಸುಶ್ರಾವ್ಯವಾಗಿ ಹಾಡುವ ಪರಮೇಶ್ವರಪ್ಪನವರ ಜೊತೆಗೆ ಕಂಜರ, ಕಬಾಸ್, ಗಾಜಿನಬಾಟಲ್, ಬೀಟೇಗಣೆ/ ಕುದುರೆಗಣೆಗಳಿಂದ ವಿಶೇಷ ನಾದ ಹೊಮ್ಮಿಸಿ ಕಾರ್ಯಕ್ರಮಗಳಿಗೆ ಮೆರಗು ನೀಡುವ ಸಂಗಡಿಗರು ಇದ್ದಾರೆ. ಕೆಲವೊಮ್ಮೆ ಒಬ್ಬರೇ ಏಕತಾರಿ, ಚಿಟಿಕೆಯೊಂದಿಗೆ ಕಾರ್ಯಕ್ರಮ ನೀಡಿದ್ದೂ ಇದೆ. ಶಿಶುನಾಳ ಷರೀಫರು, ನಾಗಾನಂದ ಶಿವಯೋಗಿಗಳು, ನಿಜಗುಣಶಿವಯೋಗಿಗಳು, ಸರ್ಪಭೂಷಣ ಶಿವಯೋಗಿಗಳು, ಶಂಕರಾನಂದ ಮುಂತಾದವರ ತತ್ವಪದಗಳನ್ನೂ ಹಾಡಿ ಎಲ್ಲರ ಮನಸೂರೆಗೊಳ್ಳುತ್ತಾರೆ. ಹಾಸ್ಟೆಲ್ನಲ್ಲಿರುವ ಮಕ್ಕಳಿಗೆ ಹಾಡು ಕಲಿಸಲು ಇವರಿಗೆ ಆಮಂತ್ರಣ ಬಂದಾಗ ಅತ್ಯುತ್ಸಾಹದಿಂದ ಹೋಗಿ ಕಲಿಸಿದ್ದಾರೆ.
ಪುಸ್ತಕವಿಲ್ಲದೆಯೇ ಸಾವಿರಾರು ಹಾಡುಗಳನ್ನು ಹಾಡಬಲ್ಲ ಇವರಿಗೆ ತತ್ವಪದಗಳನ್ನೂ, ಜಾನಪದ ಗೀತೆಗಳನ್ನೂ ಹಾಡುವುದು ರಕ್ತಗತವಾಗಿದೆ. ಶಿವಮೊಗ್ಗದ ವೇಣುಗೋಪಾಲ್ ಹಾಗೂ ಮಡಿವಾಳಪ್ಪನವರಿಂದ ಹಿಂದೂಸ್ಥಾನಿ ಸಂಗೀತ ಕಲಿತು ಸೀನಿಯರ್ ಪರೀಕ್ಷೆ ಮಾಡಿದ್ದಾರೆ. ಜಾನಪದ ಹಾಡುಗಳಲ್ಲಿ ಹಿಂದೂಸ್ಥಾನಿ ರಾಗದ ಛಾಯೆ ಗುರುತಿಸುತ್ತಾರೆ. ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆವ ಅನೇಕ ಯುವಜನ ಮೇಳಗಳಿಗೆ ತೀರ್ಪುಗಾರರೂ ಆಗಿದ್ದರು. ಸುಗಮ ಸಂಗೀತ, ಜಾನಪದ ಗೀತೆ ಹೇಳಿಕೊಡುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗ್ರಾಮೀಣಸಿರಿ ಪ್ರಶಸ್ತಿ ಗಳಿಸಿರುವ ಇವರನ್ನು ಅನೇಕ ಸಂಘ- ಸಂಸ್ಥೆಗಳು ಸನ್ಮಾನಿಸಿವೆ. ಪರಮೇಶ್ವರಪ್ಪನವರು ಮೊಟ್ಟಮೊದಲಿಗೆ ಕರ್ನಾಟಕ ಜಾನಪದ ಕ್ಯಾಸೆಟ್ ಲೋಕದಲ್ಲಿ ಹಾಡಿದ- 'ಕನ್ನಿಕೇರಿ ಹುಡುಗಿ ಒಬ್ಬಳು ಕನಕರಾಯನ ಜಾತ್ರೆಯಲ್ಲಿ ಮಿಣಕ ಮಿಣಕ ಮಾಡುತಾಳ ಏನು ಸಿಂಗಾರ' ಎಂಬ ಹಾಡು ಅವರಿಗೆ ಬಹಳ ಕೀರ್ತಿ ತಂದುಕೊಟ್ಟಿದೆ. 'ಜಾನಪದ ನಮ್ಮಪದ'ವೆಂಬ ಪುಸ್ತಕ ಸಂಗ್ರಹಿಸಿದ್ದಾರೆ. 12ನೇ ಶತಮಾನದಲ್ಲಿದ್ದ ಚನ್ನಪ್ಪ ಸ್ವಾಮಿಯ ಕುರಿತಾದ 1000 ಹಾಡುಗಳನ್ನು 'ಜಾನಪದದಲ್ಲಿ ಚನ್ನಪ್ಪಸ್ವಾಮಿ' ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ. ಮಾರಿಕೊಪ್ಪದ ಹಳದಮ್ಮದೇವಿಯ ಕಥೆ ಹಾಡುಗಳ ಸಂಗ್ರಹ ಅಚ್ಚಿನಲ್ಲಿದೆ.
ಶಿವಮೊಗ್ಗದ ಡಂಗುರ ಸೌಂಡ್ಸ್ನವರ ಹಬ್ಬ ಬಂತು ಹಬ್ಬ, ಹಸಿರು ಧ್ವನಿ, ರಸಗಂಗೆ, ಮಲೆಯ ಮಹದೇಶ್ವರ ಸ್ವಾಮಿ ಭಾಗ-2 ಎಂಬ ಕ್ಯಾಸೆಟ್ಗಳಲ್ಲಿ ಹಾಡಿದ್ದಾರೆ. ಇವರಿಂದ ಜಾನಪದ ಲೋಕಕ್ಕೆ ಮತ್ತಷ್ಟು ಸೇವೆ ಸಲ್ಲಲಿ. ಈ ಸಾಧಕರಿಗೆ ನೀವೂ ಅಭಿನಂದಿಸಲು ಮೊ. 9902217723ಗೆ ಕರೆ ಮಾಡಿ.
- ಸೀತಾ ಎಸ್. ನಾರಾಯಣ