ಬಾಗಳಿ ಬಾಸಿಂಗ

ಉತ್ತರ ಕರ್ನಾಟಕದಲ್ಲಿ ಮದುವೆ ಸಂಪ್ರದಾಯಗಳಲ್ಲಿ ಅಗ್ರಗಣ್ಯ ಪರಿಕರಗಳಲ್ಲಿ ಬಾಸಿಂಗ, ಹೂವಿನ ದಂಡೆ ಸಹ...
ಬಾಗಳಿ ಬಾಸಿಂಗ
Updated on: 

ಉತ್ತರ ಕರ್ನಾಟಕದಲ್ಲಿ ಮದುವೆ ಸಂಪ್ರದಾಯಗಳಲ್ಲಿ ಅಗ್ರಗಣ್ಯ ಪರಿಕರಗಳಲ್ಲಿ ಬಾಸಿಂಗ, ಹೂವಿನ ದಂಡೆ ಸಹ ಸೇರಿವೆ. ಆಧುನಿಕ ವಿವಾಹ ಪದ್ಧತಿಯಲ್ಲಿ ಮದುವೆಯಾಗುವ ಕಟ್ಟುಪಾಡು ಸಡಿಲಿಕೆಯಾಗಿ, ಬಾಸಿಂಗದ ಬಲವಿಲ್ಲದೇ ಮದುವೆಗಳಾಗುತ್ತಿವೆ. ಬಾಸಿಂಗಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ ಎನ್ನುವ ಕೊರಗು ಸಂಪ್ರದಾಯಸ್ಥರದ್ದು. ಇಂಥ ಆತಂಕದ ನಡುವೆಯೇ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಬಾಗಳಿ ಮಲ್ಲಪ್ಪ ಬಾಸಿಂಗವನ್ನು ವಿಶಿಷ್ಟ, ಆಕರ್ಷಕವಾಗಿ ತಯಾರಿಸಿ, ಅಳಿವಿನಂಚಿನಲ್ಲಿರುವ ಕಲೆ, ಶಾಸ್ತ್ರ ಸಂಸ್ಕೃತಿ, ಪರಂಪರೆಯ ಉಳಿವಿಗೆ ದೊಡ್ಡ ಕೊಡುಗೆ ನೀಡುತ್ತಿರುವುದು ವಿಶೇಷ.
ಬಾಗಳಿ ಮಲ್ಲಪ್ಪ 10ನೇ ವಯಸ್ಸಿನಲ್ಲೇ ಬಾಸಿಂಗ ತಯಾರಿಸಿದವರು. ಅಂದಿನಿಂದ ಸತತ ಆರು ದಶಕಗಳ ಕಾಲ ಬಾಸಿಂಗ ಮಾಡುತ್ತಾ ಬಂದಿರುವ ಮಲ್ಲಪ್ಪರಿಗೀಗ 66 ವರ್ಷ. ಸಹಜವಾಗಿ ಇವರಿಗೆ ಈ ಕಲೆ ಸಿದ್ಧಿಸಿದೆ. ಆದರೆ ಇತ್ತೀಚೆಗೆ ಮದುವೆಗಳು ಆಡಂಬರಕ್ಕಷ್ಟೇ ಮಹತ್ವ ನೀಡುತ್ತಿರುವುದು, ರೆಡಿಮೇಡ್ ವಸ್ತುಗಳೇ ಎಲ್ಲೆಲ್ಲೂ ತಮ್ಮ ಛಾಪು ಮೂಡಿಸುತ್ತಿರುವ ಫಲವಾಗಿ ಮಲ್ಲಪ್ಪ ಈ ಕಸುಬಿನಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಈ ಮೊದಲು ಬಾಸಿಂಗ ಮಾಡಿ ಸುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿದ್ದವರೀಗ ತಾಲೂಕಿಗಷ್ಟೇ ಸೀಮಿತ. ಈ ಕಲೆ ಪೂರ್ವಜರಿಂದ ಬಂದ ಬಳುವಳಿ ಎನ್ನುವ ಕಾರಣಕ್ಕೆ ಇದರಿಂದ ಸಂಪೂರ್ಣ ವಿಮುಖಗೊಂಡಿಲ್ಲ. ಹೀಗಾಗಿಯೇ ಈ ಭಾಗದಲ್ಲಿ ಮಲ್ಲಪ್ಪನ ಕೈಯಲ್ಲಿ ಅರಳಿದ ಬಾಸಿಂಗಗಳಿಗೆ ಮಾತ್ರ ಇಂದಿಗೂ ಮನ್ನಣೆ, ಬೇಡಿಕೆಯ ಮಹಾಪೂರ.
ಮುತ್ತಿನ, ರಟ್ಟಿನ ಬಾಸಿಂಗಗಳ ನಡುವೆ ಇವರ ಬೆಂಡಿನಿಂದ ಮಾಡಿದ ಗುಡಿ ಬಾಸಿಂಗ, ಕಮಾನು ಬಾಸಿಂಗ, ಸಾದಾ ಬಾಸಿಂಗ ಗಮನ ಸೆಳೆಯುತ್ತವೆ. ಜೋಳದ ದಂಟು, ಬಣ್ಣದ ಹಾಳೆ, ಸುನೇರಿ ಹಾಳೆ, ಕನ್ನಡಿ ಹರಳು, ಮುತ್ತು, ಮನೆದೇವರ ಚಿತ್ರ, ಕಮಾನು, ಟಿಕಳಿ, ಹೂವು, ದಾರ... ಇತ್ಯಾದಿ ಬಾಸಿಂಗ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳು. ಇವರ ವಿಭಿನ್ನ ತಯಾರಿಕೆ ಶೈಲಿ, ಕಲಾತ್ಮಕ ಮೇಲ್ಮೈ ಸೌಂದರ್ಯ, ನೀಡುವ ನೈಜ ಹಾಗೂ ಅಂತಿಮ ಸ್ಪರ್ಶ ಮನಸೂರೆಗೊಳ್ಳುತ್ತದೆ.
ಬೆಂಡಿನ ಬಾಸಿಂಗಗಳಲ್ಲಿ ಗಣಪತಿ, ಈಶ್ವರ, ಬಸವಣ್ಣ, ದೇವರಗುಡಿ, ಕುಂಭ, ಹೂವು, ಕಳಸ, ಪ್ರಾಣಿ-ಪಕ್ಷಿ ರಚಿಸುತ್ತಾರೆ. ಥೇಟ್ ಕಳಸದ ಹಾಗೆ ಕಾಣುವ ಬಾಸಿಂಗಕ್ಕೆ ಮಲ್ಲಪ್ಪ ಗೋಪುರ ಜೋಡಿಸಿ, ಹಸಿರು, ಹಳದಿ ಹಾಗೂ ಕೆಂಪು ಬಣ್ಣದ ಹಾಳೆಗಳನ್ನು ಬಳಸಿ ಅಲಂಕರಿಸಿ ಜೀವ ತುಂಬುತ್ತಾರೆ. ಆರ್ಡರ್ ಕೊಡುವವರು ಸ್ವಲ್ಪ ಸಮಯ ಕೊಟ್ಟರೆ ಅವರ ಮನೆ ದೇವರು, ಇಷ್ಟ ದೇವರ ಫೋಟೋ ಬಳಸಿ ಬಾಸಿಂಗ ಮಾಡಿಕೊಡುತ್ತಾರೆ. ಈ ವೇಳೆ ಬಾಸಿಂಗದಲ್ಲಿ ಬೆಂಡುಗಳ ಜೋಡಣೆಗೆ ಜಾನಪದ ಶಾಸ್ತ್ರದಂತೆ ಇಂದಿಗೂ ಮಲ್ಲಪ್ಪ ಜಾಲಿಮುಳ್ಳುಗಳನ್ನು ಬಳಸುವುದು ವಿಶೇಷ.



ಬಾಸಿಂಗ ಸೇರಿದಂತೆ ಇತರೆ ಕೈ ಕಸುಬುಗಳ ಹಿಂದಿನ ಮಹತ್ವದ ಬಗ್ಗೆ ಸಾಮಾನ್ಯ ಅರಿವು ಹೊಂದಿ, ಅದರ ಘನತೆ, ಗೌರವವನ್ನು ಕಾಪಾಡುವುದರ ಜೊತೆಗೆ ಪರಂಪರೆಯನ್ನು ಉಳಿಸಬೇಕು.
- ಮಲ್ಲಪ್ಪ


- ಸ್ವರೂಪಾನಂದ ಎಂ. ಕೊಟ್ಟೂರು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com