

ನಾನು ನನ್ನ ಬಾಲ್ಯವನ್ನು ಕಳೆದದ್ದೇ ಅಜ್ಜ-ಅಜ್ಜಿಯ ಆಶ್ರಯದಲ್ಲಿ. ಆ ವಿಷಯದಲ್ಲಿ ನನ್ನೆಲ್ಲ ಸ್ನೇಹಿತರಿಗಿಂತ ನಾನು ಲಕ್ಕಿ. ನಾನು ಅವರಿಗೆ ಕೊಟ್ಟಷ್ಟು ಕಾಟ ಅವರ ನಾಲ್ಕು ಮಕ್ಕಳೂ ಕೊಟ್ಟಿರಲಿಕ್ಕಿಲ್ಲ. ಮಧ್ಯ ರಾತ್ರಿ ಎದ್ದು ನನಗೆ ಕುಡಿಯಲು ಸಾರು ಬೇಕು ಎಂದಾಗ ನನ್ನ ಅಜ್ಜ ಉಪ್ಪಿನಕಾಯಿ ರಸಕ್ಕೆ ನೀರು ಬೆರೆಸಿ ಕೊಟ್ಟಿದ್ದಾರೆ. ನಾನು ಅದನ್ನು ಸಾರು ಎಂದೇ ಭಾವಿಸಿ ಕುಡಿದಿದ್ದೇನೆ! ಅವರು ಮಲಗಿದ್ದಾಗ ಅವರ ಮುಖದ ಮೇಲೆ ಚಿತ್ರ ಬಿಡಿಸಿ ನನ್ನ ಕೌಶಲ್ಯ ಪ್ರದರ್ಶಿಸಿದ್ದೇನೆ. ಅವರು ಒಗೆದಿಟ್ಟ ಬಟ್ಟೆಗಳನ್ನು ಬಾವಿಯೊಳಗೆ ಹಾಕಿದ್ದೇನೆ. ಅವರ ಶ್ಲೋಕದ ಪುಸ್ತಕದಲ್ಲಿ ನನಗೆ ಇಷ್ಟವಿದ್ದ ಅಕ್ಷರಗಳನ್ನು ಸೇರಿಸಿ ವಿಷ್ಣು ಸಹಸ್ರನಾಮದ ಬದಲು 'ಮಾನಸ ಸಹಸ್ರನಾಮ' ಮಾಡಿಬಿಟ್ಟಿದ್ದೇನೆ. ಅವರು ತಲೆಕೂದಲಿಗೆ ಹಚ್ಚಲು ತಯಾರಿಸಿದ ಎಣ್ಣೆಯನ್ನು ಗಿಡಕ್ಕೆ ನೀರುಣಿಸಿದಂತೆ ಸುರಿದಿದ್ದೇನೆ. ಬಿಸಿಲಿಗೆ ಇಟ್ಟ ಹಪ್ಪಳ-ಸಂಡಿಗೆಗಳು ಕುದಿಯುವ ಎಣ್ಣೆಯ ಮುಖ ನೋಡುವ ಮುನ್ನ ನನ್ನ ಹೊಟ್ಟೆ ಸೇರಿದ್ದವು. ಹೇಳಿದ ಕಥೆಯನ್ನು ಮತ್ತೆ-ಮತ್ತೆ ಅವರಿಂದ ಹೇಳಿಸಿದ್ದೇನೆ. ಇಷ್ಟಾದರೂ ಒಂದೂ ದಿನವಾದರೂ ಅವರು ನನಗೆ ಬೈಬೇಕಿತ್ತು, ಹೊಡೆಯಬೇಕಿತ್ತು, ಅಟ್‌ಲೀಸ್ಟ್ ಗದರಿಸಬೇಕಿತ್ತು. ಊಹೂಂ, ಯಾವೊಂದನ್ನೂ ಅವರು ಮಾಡಲಿಲ್ಲ. ಅವರಿಗೆ ಮೊಮ್ಮಗಳು ಮಾಡಿದ್ದೆಲ್ಲ ಚೆಂದವೇ! ಆದರೆ ನನ್ನ ಕಿತಾಪತಿಗಳು ನನ್ನ ಪೋಷಕರಿಗೆ ತಲೆ ನೋವಾಗಿತ್ತು. ನನ್ನನ್ನು ಹಿಡಿಯಲು ಆ ಕಡೆ- ಈ ಕಡೆ ಓಡಾಡುತ್ತಿದ್ದರು(ಹೀಗಾಗಿ ಅವರ ಆರೋಗ್ಯ ಚೆನ್ನಾಗಿರುವುದಕ್ಕೆ ನಾನೇ ಕಾರಣ!). ಪೋಷಕರಿಗೆ ಹೆದರುತ್ತಿದ್ದರೂ ನನ್ನ ಚೇಷ್ಟೆ ನಿಲ್ಲಲಿಲ್ಲ. ಏಕೆಂದರೆ ಅಜ್ಜ- ಅಜ್ಜಿ ಯಾವತ್ತೂ ನನ್ನ ರಕ್ಷಣೆಗಿದ್ದರು. ಅದೇ ಧೈರ್ಯದಲ್ಲಿ ನನ್ನ ಸಾಹಸಗಳನ್ನು ಮುಂದುವರಿಸುತ್ತಿದ್ದೆ.
ಅಪ್ಪ-ಅಮ್ಮನನ್ನು ಬೆದರಿಸಲು- ಗದರಿಸಲು ಕೇವಲ ಅಜ್ಜ-ಅಜ್ಜಿಗೆ ಮಾತ್ರ ಸಾಧ್ಯ. ಮೊಮ್ಮಕ್ಕಳ ತಪ್ಪಿದ್ದರೂ, ಕೈ ಮಾಡಿದ್ದಕ್ಕೆ ಪೋಷಕರಿಗೆ ರೈಟ್-ಲೆಫ್ಟ್ ಬೈಗಳು ಸಿಗುತ್ತಿತ್ತು. ಹಾಗಾಗಿ ಅಜ್ಜ-ಅಜ್ಜಿ ಯಾವತ್ತಿಗೂ ನಮ್ಮ ಹೀರೋ-ಹಿರೋಯಿನ್! ಆ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಖುಷಿಯಾಗುತ್ತದೆ. ಅಜ್ಜ-ಅಜ್ಜಿಯ ಪ್ರಪಂಚ ಮೊಮ್ಮಕ್ಕಳ ಸುತ್ತವೇ ತಿರುಗುತ್ತದೆ. ಅವರಿಗೆ ತಮ್ಮ ಬಾಲ್ಯದ, ಅಥವಾ ತಮ್ಮ ಮಕ್ಕಳ ಬಾಲ್ಯದ ನೆನಪು ಕಡಿಮೆ ಇದ್ದೀತು. ಆದರೆ ತಮ್ಮ ಎಲ್ಲ ಮೊಮ್ಮಕ್ಕಳ ಬಾಲ್ಯದ ನೆನಪು ಖಂಡಿತ ಇರುತ್ತದೆ.
ಇಂದು ಅನೇಕರು ಅಜ್ಜ-ಅಜ್ಜಿಯನ್ನು ಪಡೆಯುವಷ್ಟು ಭಾಗ್ಯವಂತರಲ್ಲ. ಭಾಗ್ಯವಿದ್ದರೂ ಅನೇಕರು ವಯಸ್ಸಾದವರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಸ್ವಂತ ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಹೋಗಿಬಿಡುತ್ತಾರೆ. ಅಂಥವರು ತಮ್ಮ ಪೋಷಕರಿಗೆ ಮಾತ್ರವಲ್ಲ, ತಮ್ಮ ಮಕ್ಕಳಿಗೂ ಅನ್ಯಾಯ ಮಾಡುತ್ತಿದ್ದಾರೆ. ತಾವು ಮಾಡಿದ ತಪ್ಪನ್ನು ತಮ್ಮ ಮಕ್ಕಳು ಕಲಿಯುತ್ತಾರೆ ಎನ್ನುವುದನ್ನು ಮರೆತುಬಿಡುತ್ತಾರೆ. ಏನೇ ಆಗಲಿ, ನನ್ನಂತೆ ಎಲ್ಲರಿಗೂ ಅವರ ಅಜ್ಜ ಅಜ್ಜಿಯೇ ಹೀರೋ ಹೀರೋಯಿನ್ ಆಗುವ ಭಾಗ್ಯ ಸಿಗಲಿ.
- ಅದಿತಿಮಾನಸ ಟಿ.ಎಸ್.