

ಆ ಮನೆಯೇ ಒಂದು ಸಂಗೀತ ದೇಗುಲ. ಅಲ್ಲಿ ಹೆಜ್ಜೆ ಇಟ್ಟರೂ ಸಾಕು ಝಲ್ ಎಂಬ ಶಬ್ದ ಎಲ್ಲಿಂದಲೋ ಕೇಳಿಬರುತ್ತದೆ. ಅದೊಂದು 'ಮ್ಯೂಸಿಕ್ ಮ್ಯೂಸಿಯಂ' ಎಂದರೆ ಅತಿಶಯೋಕ್ತಿ ಆಗಲಾರದು. 30ಕ್ಕೂ ಹೆಚ್ಚು ಬಗೆಯ ಸಂಗೀತ ಪರಿಕರಗಳು ಆ ಮನೆಯನ್ನು ಸಂಗೀತದ ದೇಗುಲವನ್ನಾಗಿಸಿವೆ. ಅಲ್ಲಿ ನಿತ್ಯವೂ ಮೇಜರ್ ಬಿ.ಎನ್. ಮಳಿಗಿ ಎಂಬ ಪೂಜಾರಿಯಿಂದ ಸಂಗೀತದ ಪೂಜೆ ನಡೆಯುತ್ತದೆ.
ಹಾವೇರಿಯ ಇಜಾರಿ ಲಕ್ಮಾಪುರದ ಮೇಜರ್ ಬಿ.ಎನ್. ಮಳಿಗಿ ಮನೆಯೇ ಈ ಸಂಗೀತ ದೇಗುಲ. 70ರ ಇಳಿ ವಯಸ್ಸಿನಲ್ಲೂ ಮಳಿಗಿಯವರ ಕ್ರಿಯಾಶೀಲತೆ ಮಾದರಿಯಂತಿದೆ. ಸಂಗೀತವಷ್ಟೇ ಅಲ್ಲದೆ ಸಾಹಿತ್ಯ, ನಾಟಕ, ನಿರ್ದೇಶನ, ಕವನ, ಅಭಿನಯ ಹೀಗೆ ವಿವಿಧ ಪ್ರಕಾರಗಳಲ್ಲಿ ಮೇಜರ್ ಮಳಿಗಿ ಸಾಧನೆ ಮಾಡಿದ್ದಾರೆ. ತಮ್ಮ ಮನೆಯ ನೆಲಮಹಡಿಯನ್ನು ಸಂಗೀತದ ಮ್ಯೂಸಿಯಂ ಆಗಿ ಪರಿವರ್ತಿಸಿರುವ ಅವರು, ಅಲ್ಲಿ 30ಕ್ಕೂ ಹೆಚ್ಚು ಬಗೆಯ ಸಂಗೀತ ಪರಿಕರಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಎಲ್ಲವನ್ನೂ ಅವರು ನುಡಿಸಬಲ್ಲರು. ಪ್ರಸಾಧನ ಕಲೆಯೂ ಕರಗತ.
ಮೇಜರ್ ಬಿ.ಎನ್. ಮಳಿಗಿ ಅವರದ್ದು ಬಹುಮುಖ ಪ್ರತಿಭೆ. ಪದವಿ ಕಾಲೇಜಿನ ಹಿಂದಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಶಿವಮೊಗ್ಗ ಕುವೆಂಪು ವಿವಿ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾಗಿ, ಎನ್ಸಿಸಿ ಅಧಿಕಾರಿಯಾಗಿ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ. ಸೇವೆಯಲ್ಲಿದ್ದಾಗಲೇ ಅವರು ಮಾಡಿದ ಸಾಧನೆ ಬೆಟ್ಟದಷ್ಟು. ಸತತ 16 ವರ್ಷ ದೆಹಲಿಯಲ್ಲಿ ಗಣರಾಜ್ಯೋತ್ಸವದ ಶಿಬಿರದಲ್ಲಿ ಇವರು ಕರ್ನಾಟಕ- ಗೋವಾ ಎನ್ಸಿಸಿ ನಿರ್ದೇಶನಾಲಯದ ಅಧಿಕಾರಿಯಾಗಿದ್ದರು. ಆ ವೇಳೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಇವರ ತಂಡಕ್ಕೇ ಪ್ರಶಸ್ತಿ ಕಟ್ಟಿಟ್ಟ ಬುತ್ತಿಯಾಗಿತ್ತು. ಇಂದಿರಾಗಾಂಧಿ, ಅಟಲ್ಬಿಹಾರಿ ವಾಜಪೇಯಿ ಮೊದಲಾದ ಗಣ್ಯರಿಂದ ಪ್ರಶಸ್ತಿ ಪಡೆದ ಇವರು, ಅಸಾಧಾರಣ ಪ್ರತಿಭಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳಿಂದ ಶಾಶ್ವತ ಮೇಜರ್ ಪದವಿ ಪಡೆದಿದ್ದರು.
ಕಿತ್ತೂರ ಕೇಸರಿ, ರಾಮಾಯಣ ದೃಶ್ಯಾವಳಿ, ರಜಪೂತ ರತ್ನ, ದಿವಾಳಿ, ಆಸ್ಪತ್ರೆ ಅವಾಂತರ ಸೇರಿದಂತೆ 10ಕ್ಕೂ ಹೆಚ್ಚು ನಾಟಕ ರಚಿಸಿದ್ದಾರೆ. ಬಿ.ವಿ. ಕಾರಂತ ನಿರ್ದೇಶನದಲ್ಲಿ ಕಿಂಗ್ಲಿಯರ್ ಪಾತ್ರ ಸೇರಿದಂತೆ 40ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ, ನಿರ್ದೇಶನ, ಸಂಗೀತ ನಿರ್ದೇಶನ, ಹಿಂದಿ ಹಾಗೂ ಕನ್ನಡ ಗೀತೆಗಳ ರಚನೆ, ಸಂಗೀತ ಸಂಯೋಜನೆ, ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ನೃತ್ಯ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ ಮೇಜರ್.
ಮೇಜರ್ ಮಳಿಗಿ ಮನೆಯಲ್ಲಿ ನಶಿಸಿ ಹೋಗುತ್ತಿರುವ ಅನೇಕ ಜಾನಪದ ವಾದ್ಯಗಳಿಂದ ಹಿಡಿದು ಚೀನಾ, ಪಾಶ್ಚಾತ್ಯ ಸಂಗೀತ ಪರಿಕರಗಳೂ ಇವೆ. ತಂತು ವಾದ್ಯ, ಚರ್ಮ ವಾದ್ಯ, ಕಾಷ್ಠ ವಾದ್ಯ, ಎಲೆಕ್ಟ್ರಾನಿಕ್ ವಾದ್ಯಗಳು ಮಳಿಗಿ ಮ್ಯೂಸಿಯಂನಲ್ಲಿ ನೋಡಲು ಸಿಗುತ್ತವೆ. ಚೈನಾ ಬ್ಲಾಕ್, ಕಂಜಿರಾ, ನಾಲ ತರಂಗ, ಜಲ ತರಂಗ, ಮಾರ್ಕೂಸ್, ಕ್ಲಾರಿಯೋನೆಟ್, ವಯಲಿನ್, ತಂಬೂರಿ, ಮೃದಂಗ, ಮೆಂಡೋಲಿನ್, ಬಾನ್ಸುರಿ, ಗಿಟಾರ್, ಡೊಳ್ಳು, ಕ್ಯಾಸಿಯೋ, ಹಾರ್ಮೋನಿಯಂ, ಸಿತಾರ್, ಶಹನಾಯಿ, ಸ್ಯಾಕ್ಸೋಫೋನ್, ತಾಳ ಮುಂತಾದ ಸಂಗೀತ ಪರಿಕರಗಳನ್ನು ಸಂಗ್ರಹಿಸಿ, ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ವಾದ್ಯಗಳ ಸಂಗ್ರಹದ ಜತೆಗೆ ಅದನ್ನು ನುಡಿಸುವಲ್ಲಿ ಪ್ರಭುತ್ವವನ್ನೂ ಮೇಜರ್ ಮಳಿಗಿ ಪಡೆದಿರುವುದು ಮತ್ತೊಂದು ವಿಶೇಷ.
ಕುಟುಂಬದ ಕಲಾ ಪೋಷಣೆ
ಸುತ್ತಮುತ್ತಲಿನ ಮಕ್ಕಳಿಗೆ ಉಚಿತವಾಗಿ ಸಂಗೀತ ಹೇಳಿಕೊಡುತ್ತಾರೆ. ಪತ್ನಿ, ಮಗ ಸೊಸೆ ಕುಟುಂಬದವರೆಲ್ಲರೂ ಸಂಗೀತದಲ್ಲಿ ಪ್ರಭುತ್ವ ಹೊಂದಿದ್ದಾರೆ. ಇಡೀ ಕುಟುಂಬವೇ ಕಲೆಯನ್ನು ಪೋಷಿಸಿ ಬೆಳೆಸುತ್ತಿದೆ. ಲಕ್ಷಾಂತರ ಮೌಲ್ಯದ ಸಂಗೀತ ಪರಿಕರಗಳನ್ನು ಒಪ್ಪವಾಗಿಟ್ಟು ಸಂರಕ್ಷಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ತನ್ನ ವೃತ್ತಿ ಜೀವನದ ಬಳಿಕವೂ ಹೇಗೆ ಪ್ರವೃತ್ತಿ ಬೆಳೆಸಿಕೊಂಡು ಎಷ್ಟು ಕ್ರಿಯಾಶೀಲನಾಗಿರಬಹುದು ಎನ್ನಲು ಹಾವೇರಿಯ ಮೇಜರ್ ಬಿ.ಎನ್. ಮಳಿಗಿ ಮಾದರಿ.
- ಚಿತ್ರ, ಲೇಖನ: ನಾರಾಯಣ ಹೆಗಡೆ