ಸಾಕು ಸೋಂಕು

ಸಾಕು ಸೋಂಕು
Updated on: 

ಸಾಕುಪ್ರಾಣಿಗಳಿಂದ ಹರಡುವ ಕಾಯಿಲೆಗಳ ಪೈಕಿ ಕಂದು ರೋಗವು ಪ್ರಮುಖ. ಯಾಕೆಂದರೆ ರೈತರಿಂದ ಹಿಡಿದು ಸಮಾಜದ ಎಲ್ಲ ವರ್ಗದವರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಆದರೆ, ಮುಖ್ಯವಾಹಿನಿಯಲ್ಲಿ ಬರುವಂಥವರು ರೈತರು, ಕುರಿಗಾರರು, ಕಸಾಯಿಖಾನೆ ಹಾಗೂ ಮಾಂಸದಂಗಡಿ ಕಾರ್ಮಿಕರು ಮತ್ತು ಪಶು ವೈದ್ಯರು.
ಕಂದು ರೋಗ ಅಥವಾ ಬ್ರುಸೆಲ್ಲೋಸಿಸ್ ರೋಗವು ಬ್ರುಸೆಲ್ಲಾ ಅಬಾರ್ಟಸ್ ಬ್ಯಾಕ್ಟೀರಿಯಾದಿಂದ ಬರುತ್ತದೆ. ಪ್ರಾಣಿಗಳು ಒಮ್ಮೆ ಈ ರೋಗಗಕ್ಕೆ ತುತ್ತಾದರೆ ಜೀವನಪೂರ್ತಿ ರೋಗ ಹರಡುತ್ತವೆ. ಈ ರೋಗವಿದ್ದ ಹಸು, ಎಮ್ಮೆ, ಕುರಿ, ಮೇಕೆ, ಕುದುರೆ, ಹಂದಿ ಮತ್ತು ನಾಯಿ ಗರ್ಭದ ಕೊನೆಯ ತ್ರೈಮಾಸಿಕ ಹಂತದಲ್ಲಿ ಕಂದು ಹಾಕುತ್ತವೆ. ಇವುಗಳಲ್ಲಿ ಮೇಕೆಯಿಂದ ಮನುಷ್ಯನಿಗೆ ಸೋಂಕು ತಗುಲಿದಲ್ಲಿ ರೋಗ ಲಕ್ಷಣ ಅತ್ಯಂತ ಪರಿಣಾಮಕಾರಿಯಾಗಿರುತ್ತವೆ.

ಲಕ್ಷಣಗಳು
ಕಂದು ರೋಗ ತಗುಲಿದ ಮನುಷ್ಯರಲ್ಲಿ ಕಂಡುಬರುವ ಲಕ್ಷಣಗಳಲ್ಲಿ ಬಿಟ್ಟು ಬಿಟ್ಟು ಜ್ವರ ಬರುವುದು, ತಲೆನೋವು, ನಿರುತ್ಸಾಹ, ಮಾಂಸಖಂಡ ಹಾಗೂ ಸಂದುಗಳ ನೋವು, ನಿದ್ರಾಹೀನತೆ ಮತ್ತು ಹಸಿವಾಗದಿರುವುದು. ಇಂಥ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯುವುದೊಳಿತು. ನಿರ್ಲಕ್ಷ್ಯ ಮಾಡಿದರೆ ರೋಗ ಉಲ್ಬಣಗೊಂಡು ರಕ್ತನಾಳಗಳ ಉರಿಯೂತ, ವೃಷಣ ನಾಳಗಳ ಉರಿಯೂತ, ಮೊಣಕಾಲು, ಭುಜ, ಬೆನ್ನುಮೂಳೆ ಮತ್ತು ಸೊಂಟದ ಸಂದುಗಳ ಉರಿಯೂತ ಕಾಣಿಸಿಕೊಳ್ಳುವುದು. ಪುರುಷರಲ್ಲಿ ವೃಷಣ ನಾಳಗಳ ಉರಿಯೂತದಿಂದ ನಪುಂಸಕತೆಯಿಂದ ಬಳಲಿದರೆ ಬಸಿರು ಹೆಂಗಸರಲ್ಲಿ ಅಕಾಲ ಜನನ ಅಥವಾ ಗರ್ಭಪಾತವಾಗುವುದು.

ಹೇಗೆ ಹರಡುತ್ತೆ?
ಕಂದು ರೋಗ ಸಾಮಾನ್ಯ ಜನರಿಗೆ ಹರಡುವ ವಾಹಿನಿಯಲ್ಲಿ ಮುಖ್ಯವಾದುದು ಪಾಶ್ಚರೀಕರಿಸದೆ ಅಥವಾ ಕಾಯಿಸದೆ ಕುಡಿಯುವ ಹಾಲು ಹಾಗೂ ತಾಯಿಯ ಎದೆ ಹಾಲಿನಿಂದ ಮಗುವಿಗೆ, ಕಲುಷಿತ ಆಹಾರ, ನೀರು, ಗಾಳಿಯಿಂದ ಉಸಿರಾಟ ಹಾಗೂ ಕಣ್ಣಿನ ಶ್ಲೇಷ್ಮ ಪೊರೆ ಮೂಲಕ ಮತ್ತು ಚರ್ಮದ ಗಾಯದ ಮೂಲಕ ಸೋಂಕು ತಗುಲಿದ ಉದಾಹರಣೆಗಳಿವೆ. ಪಶುಪಾಲಕ ರೈತರು, ಕುರಿಗಾರರು, ಪಶುವೈದ್ಯರು, ಕಸಾಯಿಖಾನೆ ಹಾಗೂ ಮಾಂಸದಂಗಡಿ ಕಾರ್ಮಿಕರು ನೇರವಾಗಿ ರೋಗಗ್ರಸ್ತ ಪ್ರಾಣಿಗಳ ಸಂಪರ್ಕಕ್ಕೆ ಬರುವುದರಿಂದ ಈ ವರ್ಗದ ಜನರಲ್ಲಿ ಕಂದುರೋಗ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಆದ್ದರಿಂದ ರೈತರು, ಕುರಿಗಾರರು ಕಂದು ಹಾಕಿದ ಕರುವನ್ನು ಬರಿಗೈಯಿಂದ ಮುಟ್ಟದೆ ಜಾಗ್ರತೆಯಿಂದ ಬೇರೆ ಪ್ರಾಣಿಗಳ ಸಂಪರ್ಕಕ್ಕೆ ಬಾರದಂತೆ ಹೂಳಬೇಕು.

ಮುನ್ನೆಚ್ಚರಿಕೆಗಳೇನು?
-    ಜಾನುವಾರುಗಳ ರಕ್ತಪರಿಕ್ಷೆ ಮತ್ತು ರೋಗಗ್ರಸ್ತ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ಬೇರ್ಪಡಿಸುವುದು.
-    ರೋಗಗ್ರಸ್ತ ಎಮ್ಮೆ, ಆಡು, ಕುರಿಗಳನ್ನು ದಯಾಮರಣಕ್ಕೆ ಒಳಪಡಿಸುವುದು ಸೂಕ್ತ.
-    6 ತಿಂಗಳ ಹಸು ಮತ್ತು ಎಮ್ಮೆ ಕರುಗಳಿಗೆ ಬ್ರುಸೆಲ್ಲಾ ಲಸಿಕೆ ಹಾಕಿಸುವುದು.
-    ಕಸಾಯಿಖಾನೆ ಮತ್ತು ಮಾಂಸದಂಡಿಯಲ್ಲಿ ಕೆಲಸ ಮಾಡುವವರು ಸ್ವಚ್ಛತೆ ಕಡೆ ಗಮನಹರಿಸಬೇಕು.
-    ಜನರ ಆರೋಗ್ಯ ಆಹಾರ ಧಾನ್ಯ, ಹಣ್ಣು, ತರಕಾರಿ, ಮತ್ತು ಜಾನುವಾರು ಹಾಗೂ ಅವುಗಳ ಉತ್ಪನ್ನಗಳ ಗುಣಮಟ್ಟ ಮತ್ತು ಸ್ವಚ್ಛತೆಯ ಮೇಲೆ ಅವಲಂಬಿಸಿದೆ ಎಂಬುದು ವಾಸ್ತವ.

- ಡಾ. ರಾಜು ಬ. ಮೇತ್ರಿ
(ಮೊ. 9844528892)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com