ಕೆಲವು ಹಣ್ಣುಗಳು, ತರಕಾರಿ ಮತ್ತು ಕೈಯ್ಯಲ್ಲೊಂದು ಹರಿತವಾದ ಚಾಕು... ಏನು ಅಡುಗೆ ಮಾಡುತ್ತಾರೆ ಎಂದುಕೊಂಡಿರಾ? ಇಲ್ಲ, ಇವರು ಕಲಾವಿದರು. ಕೈಗೆ ತರಕಾರಿ, ಹಣ್ಣು, ಚಾಕು ಸಿಕ್ಕರೆ ಚಕಚಕನೆ ಅದ್ಭುತ ಕಲಾಕೃತಿ ಸೃಷ್ಟಿಸುವ ಮೋಡಿಗಾರ.
ಹರೀಶ್‌ಕುಮಾರ್. ಬಿಬಿಎಂ ಪದವೀಧರ. ಶಿವಮೊಗ್ಗದ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಕಂಪ್ಯೂಟರ್ ಇನ್‌ಸ್ಟ್ರಕ್ಟರ್. ರಾಜ್ಯದ ಯಾವ ಮೂಲೆಯಲ್ಲೇ ಫಲಪುಷ್ಪ ಪ್ರದರ್ಶನವಿದ್ದರೂ ಕಾಲೇಜಿಗೆ ರಜೆ ಹಾಕಿ ಅಲ್ಲಿಗೆ ಹಾಜರ್. ಜನ ಇವರನ್ನು 'ವೆಜಿಟೇರಿಯನ್ ಕಲಾವಿದ' ಎಂದು ಗುರುತಿಸಿದರೂ ಇವರು 'ನಾನ್ ವೆಜಿಟೇರಿಯನ್!'
ಸ್ವಯಂ ಗುರು!
ಇವರ ಕೈಚಳಕವೇ ಹಾಗಿದೆ. ಹಣ್ಣು, ತರಕಾರಿ ಸಿಕ್ಕರೆ ಕೆಲವೇ ನಿಮಿಷಗಳಲ್ಲಿ ವಿಧವಿಧ ಕಲಾಕೃತಿ, ಭಾವಚಿತ್ರ ಕೆತ್ತನೆ ರೆಡಿ.
ಚಿತ್ರಕಲೆಯಲ್ಲಿ ಹರೀಶ್ ಅವರಿಗೆ ಚಿಕ್ಕಂದಿನಿಂದಲೇ ಆಸಕ್ತಿ. ಇದರಲ್ಲಿ ಪಳಗಿದಾಗ ಕೊಬ್ಬರಿಯಲ್ಲಿ ಕಲಾಕೃತಿ ಮಾಡಲು ಆರಂಭಿಸಿದರು. ಬಳಿಕ ಹೀಗೆ ಒಮ್ಮೆ ಕಲ್ಲಂಗಡಿಯಲ್ಲಿ ಭಾವಚಿತ್ರ ಕೆತ್ತಿದರು. ಇದು ಅವರ ಕಲಾ ಬದುಕಿಗೆ ಮುಖ್ಯ ತಿರುವು ನೀಡಿತು. ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿದರು. ಕೆಲಸ ಮಾಡುತ್ತಿರುವ ಕಾಲೇಜಿನಿಂದಲೂ ಉತ್ತಮ ಸ್ಪಂದನೆ ದೊರಕಿತು. ಪ್ರತಿಭೆ ಬೆಳಗಲು, ಕಲಾ ಸೊಬಗು ಇಡೀ ರಾಜ್ಯಕ್ಕೆ ಪಸರಿಸಲು ಇಷ್ಟು ಸಾಕಾಯ್ತು. ಇವರ 'ಕಲ್ಲಂಗಡಿ ಭಾವಚಿತ್ರ' ರಾಜ್ಯದಲ್ಲಿ ಮಾತ್ರವಲ್ಲ, ಮಹಾರಾಷ್ಟ್ರದ ಪುಣೆ, ದೇಶದ ರಾಜಧಾನಿ ದೆಹಲಿಯವರೆಗೂ ಹೋಗಿ ಪ್ರದರ್ಶನ ಕಂಡುಬಂದಿದೆ.
ಹೇಗೆ ರಚನೆ?
ನೋಡಲು ತುಂಬಾ ಸರಳವಾಗಿ ಕಂಡರೂ ಹಣ್ಣು, ತರಕಾರಿಗಳಲ್ಲಿ ಕಲಾಕೃತಿ ರಚಿಸುವುದು ಬಲು ಕಷ್ಟ ಮತ್ತು ತಾಳ್ಮೆ ಅಗತ್ಯ. ಒಮ್ಮೆ ಕೆತ್ತಿದ ಮುಖದ ಆಕೃತಿಯನ್ನು ಮೂರರಿಂದ ನಾಲ್ಕು ದಿನ ಮಾತ್ರ ಇಡಲು ಸಾಧ್ಯ. ಮುಖದ ಆಕೃತಿಗೆ ಕುಂಬಳಕಾಯಿ ಮತ್ತು ಕಲ್ಲಂಗಡಿ ಬಳಸಿದರೆ, ಕಲಾಕೃತಿಗಳಿಗೆ ತೆಂಗಿನ ಗರಿ, ಸೋರೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಬಾಳೆದಿಂಡು, ಕ್ಯಾರೆಟ್, ಮೂಲಂಗಿ, ಲಿಂಬು ಬಿದಿರಿನ ಕಡ್ಡಿ ಬಳಸುತ್ತಾರೆ. ಮಂಗಳೂರಲ್ಲಿ ತೆಂಗಿನ ಗರಿಯಲ್ಲಿ ಸಿದ್ಧಪಡಿಸಿದ ಯಕ್ಷಗಾನದ ಕಲಾಕೃತಿಗೆ ಬರೋಬ್ಬರಿ 4 ತಾಸು ಹಿಡಿದಿದೆ. ಕಲ್ಲಂಗಡಿಯಲ್ಲಿ ಮುಖದ ಆಕೃತಿ ಸಿದ್ಧಪಡಿಸಲು 6 ರಿಂದ 7 ನಿಮಿಷ ಸಾಕು!
2005 ರಿಂದಲೇ ಹಣ್ಣಿನಲ್ಲಿ ಪ್ರಸಿದ್ಧ ವ್ಯಕ್ತಿಗಳ ಮುಖದ ಆಕೃತಿ ಮಾಡುತ್ತಿರುವ ಹರೀಶ್‌ಕುಮಾರ್, ಈ ಕಲೆಯಲ್ಲಿ ಪಳಗಿರುವ ಕರ್ನಾಟಕದ ಏಕೈಕ ಕಲಾವಿದರೂ ಹೌದು. ಹಲವು ಸ್ಪರ್ಧೆಗಳಲ್ಲಿ ಬಹುಮಾನ, ರಾಜ್ಯದ ವಿವಿಧೆಡೆ ಸನ್ಮಾನಗಳು ಇವರಿಗೆ ಸಂದಿವೆ. 2008 ರಲ್ಲಿ ದೆಹಲಿಯಲ್ಲಿ ನಡೆದ ಪ್ರದರ್ಶನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮೈಸೂರು ದಸರಾದಲ್ಲಿ 3 ಬಾರಿ ಪ್ರದರ್ಶನ, ಗಂಗಾವತಿ ಸಾಹಿತ್ಯ ಸಮ್ಮೇಳನ, ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ ಇವರ ಕೆತ್ತನೆಯ ಮುಖವರ್ಣಿಕೆಗಳು ಪ್ರದರ್ಶನಗೊಂಡು ಜನಮನ ಸೂರೆಗೊಂಡಿವೆ.
ಮುಂದೆ ಥೈಆರ್ಟ್
ಕಲೆಯಲ್ಲಿ ಸದಾ ಪ್ರಯೋಗಶೀಲತೆ ನಡೆಸುತ್ತಿರುವ ಹರೀಶ್ ಅವರು ಮುಂದೆ ಥೈ ಆರ್ಟ್ ರಚಿಸಲು ಯೋಚಿಸುತ್ತಿದ್ದಾರೆ. ಇದು ಬಾಳೆ ಎಲೆಯಲ್ಲಿ ರಚಿಸುವ ಕಲಾಕೃತಿಯಾಗಿದ್ದು, ಮೂಲತಃ ಥೈಲ್ಯಾಂಡ್ ದೇಶದಿಂದ ಬಂದ ಕಲಾರೂಪ. ಈ ಬಗ್ಗೆ ಯಾವುದೇ ತರಬೇತಿ ಇಲ್ಲದೆಯೂ, ಸ್ವತಃ ಇವರೇ ಪ್ರಯತ್ನ ಮಾಡುತ್ತಿದ್ದಾರೆ. ಹರೀಶ್‌ಕುಮಾರ್ ಸಂಪರ್ಕ: 9886386565.
-ರಾಘವೇಂದ್ರ ಅಗ್ನಿಹೋತ್ರಿ