ತಲೆಯೊಳಗೆ ಯೋಜನೆಗಳ ಪ್ರವಾಹ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವಕಾಶಗಳ ಕೊರತೆ.
ಇದು ಮಲೆನಾಡಿನ ನೆಲದ ಅಭಿಮಾನದ ಹುಡುಗ, ಯಕ್ಷ ಕಲಾವಿದ, ಕಿರುತೆರೆ ನಿರ್ದೇಶಕ ರಮೇಶ್ ಬೇಗಾರ್ ಕಥೆ.
ಡಬ್ಬಿಂಗ್ ಸಂಸ್ಕೃತಿಯು ಸ್ವಂತಿಕೆಯನ್ನೇ ನೆಚ್ಚಿಕೊಂಡವರನ್ನು ಹೇಗೆ ಕಷ್ಟಕ್ಕೆ ಸಿಲುಕಿಸಿದೆ ಎಂಬುದಕ್ಕೆ ಬೇಗಾರ್ ಉತ್ತಮ ನಿದರ್ಶನ. 25 ವರ್ಷದ ಸಾಂಸ್ಕೃತಿಕ ಬದುಕಿನಲ್ಲಿ ್ಲ ಅನೇಕ ಬಾರಿ ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದವರು ಬೇಗಾರ್. ಶೃಂಗೇರಿಯಂಥ ಮಲೆನಾಡಿನ ಮೂಲೆಯಲ್ಲಿ ಕುಳಿತೇ ಸಾಂಸ್ಕೃತಿಕ ಕ್ರಾಂತಿಗೆ ಹಾಗೂ ಹಲವು ಮೊದಲುಗಳಿಗೆ ಕಾರಣರಾದವರು .
ಕಾಲೇಜು ಜೀವನದಲ್ಲೇ ಕ್ರಾಂತಿಯ ಸೆಳೆತಕ್ಕೆ ಸಿಕ್ಕು, ರಂಗಭೂಮಿಯನ್ನು ವೇದಿಕೆಯಾಗಿಸಿಕೊಂಡು, ಸಂಪೂರ್ಣ ಕಲೆಗೇ ಸಮರ್ಪಿತರಾದವರು. ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ನಟಿಸಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ವಿಜೇತರಾಗಿ ಹರೆಯದಲ್ಲೇ ಹೆಸರು ಮಾಡಿದರು. ಕಲೆಯ ಸೆಳೆತ ಮಲೆನಾಡಿನ ಉಸಿರಂತಿರುವ ಯಕ್ಷಗಾನದತ್ತ ಸೆಳೆದದ್ದು ಆಶ್ಚರ್ಯವಲ್ಲ. ಅಲ್ಲಿಯೂ ಭಾಗವತರಾಗಿ, ಹೊಸಹೊಸ ಪ್ರಯೋಗಗಳ ವಾರಸುದಾರಾಗಿ ಮೆರೆದರು.
ಆಡಿಯೋ ಕ್ಯಾಸೆಟ್ ರೂಪದಲ್ಲಿ ಹಲವಾರು ಪ್ರಸಂಗಗಳನ್ನು ಹೊರತಂದು ಯಕ್ಷಗಾನಕ್ಕೊಂದು ಮಾರುಕಟ್ಟೆಯ ಆಯಾಮ ಒದಗಿಸಿದ ಕೀರ್ತಿ ಇವರಿಗೇ ಸಲ್ಲಬೇಕು. ಇವರು ಹೊರತಂದ ಪೌರಾಣಿಕ ಪ್ರಸಂಗಗಳ ಜತೆಗೆ ಇವರದೇ ಕಲ್ಪನೆಯ 'ಅಧಿಕ ಪ್ರಸಂಗ', 'ಹುಲಿಯಾದ ಕಾಳ' ಮೊದಲಾದ ಹಾಸ್ಯ ಪ್ರಸಂಗಗಳು ನಾಡಿನೆಲ್ಲೆಡೆ ಪ್ರಸಿದ್ಧಿ ಗಳಿಸಿದವು. ಅವರೊಬ್ಬ ಸಾಹಸಿಗ. ಹಲವಾರು ಹೊಸ ವಿಧದ ಪ್ರಯೋಗಗಳನ್ನು ಮಾಡುತ್ತಾ ತಾನೂ ಬೆಳೆದದ್ದಲ್ಲದೇ ಇತರರನ್ನೂ ಬೆಳೆಸಿದರು. ಭಾಗವತರಾದ ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ, ನಾರಾಯಣ ಶಬರಾಯರಂಥರವರ ಮೊದಲ ಆಡಿಯೊ ಕ್ಯಾಸೆಟ್ ಹೊರ ತಂದ ಹೆಗ್ಗಳಿಕೆಯೂ ಇವರದ್ದೇ.
ಕಿರುತೆರೆಯಲ್ಲೂ ವಿಕ್ರಮ
ಇವರ ಸಾಧನಾ ಕ್ಷೇತ್ರ ಇಷ್ಟಕ್ಕೇ ಸೀಮಿತವಾಗದೇ ಕಿರುತೆರೆಯತ್ತ ವಿಸ್ತರಿಸಿತು. ದೂರದರ್ಶನದಲ್ಲಿ ಪ್ರವೇಶ ಗಿಟ್ಟಿಸುವುದೇ ಸಾಹಸದ ಮಾತಾಗಿದ್ದ ದಿನಗಳವು. ಗುಣಮಟ್ಟ ಕಲಾತ್ಮಕತೆಯನ್ನು ಅಳೆದು ಸುರಿದು ಕಾರ್ಯಕ್ರಮವನ್ನು ಆಯ್ಕೆ ಮಾಡುತ್ತಿದ್ದ ಆ ದಿನಗಳಲ್ಲೂ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡರು. ಪರಿಭ್ರಮಣ, ಮಲೆನಾಡ ಮಡಿಲಿಂದ, ರಕ್ಷಾ ಸೇರಿದಂತೆ ಏಳು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಅವು ಇನ್ನಷ್ಟು ಜನಪ್ರಿಯತೆ ತಂದುಕೊಟ್ಟವು. ಜೀ ಟಿ.ವಿ.ಯಲ್ಲಿ ಇವರ 'ಏಕೆ ಹೀಗೆ ನಮ್ಮ ನಡುವೆ' ಧಾರಾವಾಹಿ 120 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿತು. ಅನೇಕ ಸಾಕ್ಷ್ಯ ಚಿತ್ರಗಳನ್ನು ಕೂಡ ನಿರ್ಮಿಸಿದ್ದಲ್ಲದೇ ಬೃಹತ್ ಕಾರ್ಯಕ್ರಮಗಳ ಸಂಘಟಕರಾಗಿ, ನಿರೂಪಕರಾಗಿಯೂ ಯಶಸ್ವಿಯಾದರು.
ಮತ್ತೊಂದು ಮುಖ
ರಮೇಶ್ ಯಶಸ್ಸಿನ ತುತ್ತ ತುದಿಯಲ್ಲಿರುವಾಗಲೇ ಟಿ.ವಿ. ಮಾಧ್ಯಮಗಳಲ್ಲಿ ಬದಲಾವಣೆಯ ಗಾಳಿ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಯಶಸ್ಸು ಕಂಡ ಕಾರ್ಯಕ್ರಮಗಳನ್ನೇ ಕನ್ನಡಕ್ಕೆ ತರುವ ಅಭ್ಯಾಸ ಶುರುವಾಗಿ ಟಿ.ಆರ್.ಪಿ.ಯೇ ಪ್ರಾಮುಖ್ಯವಾಯಿತು. ಅದರ ಮುಂದೆ ರಮೇಶ್‌ರಂಥ ದೇಶೀಯ ಪ್ರತಿಭೆಗಳನ್ನು ಮಾತನಾಡಿಸುವವರಿಲ್ಲದಾಯಿತು. ಎಲ್ಲ ಇದ್ದೂ ಏನೂ ಇಲ್ಲದ ಸ್ಥಿತಿ. ಪ್ರತಿ ಬಾರಿ ಹೊಸ ಹೊಸ ಯೋಜನೆಗಳನ್ನು ಹಿಡಿದುಕೊಂಡು ಚಾನೆಲ್‌ಗಳ ಬಾಗಿಲು ತಟ್ಟಿದಾಗಲೂ ನಿರಾಸೆಯೇ ಅದಕ್ಕೆ ಉತ್ತರವಾಗತೊಡಗಿತು. ಪರಿಣಾಮವಾಗಿ ಐದು ವರ್ಷ ಕೆಲಸವಿಲ್ಲದೇ ಸಂಕಷ್ಟಗಳನ್ನು ಅನುಭವಿಸಬೇಕಾಯಿತು. ಕಲೆಯನ್ನೇ ನಂಬಿಕೊಂಡಿದ್ದ ರಮೇಶ್ ಇಂಥ ಕಷ್ಟದ ದಿನಗಳನ್ನು ಕನಸಲ್ಲೂ ನಿರೀಕ್ಷಿಸಿರಲಿಲ್ಲವೇನೋ...ಇಂದಿಗೂ ರಮೇಶ್ ಅವಕಾಶಗಳಿಗಾಗಿ ಕಾಯುತ್ತಲೇ ಇದ್ದಾರೆ.
ಈ ಮಧ್ಯೆ ರಮೇಶ್ ಬೇಗಾರ್ ಅವರ ಪ್ರತಿಭೆ ಮತ್ತು ಸಾಮರ್ಥ್ಯ ಗುರುತಿಸಿದ ಕರ್ನಾಟಕ ಸರಕಾರ ಅವರನ್ನು ರಾಜ್ಯ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸದಸ್ಯರನ್ನಾಗಿ ಕಳೆದ ವರ್ಷ ನೇಮಿಸಿತು. ಅನೇಕ ಕಡೆ ಅಕಾಡೆಮಿ ವತಿಯಿಂದ ಕಾರ್ಯಾಗಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಅವರೀಗ ಸಕ್ರಿಯ ಸದಸ್ಯರಾಗಿದ್ದಾರೆ. ಅವರು ಸಾಂಸ್ಕೃತಿಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಸಂದ ಸಂದರ್ಭದಲ್ಲಿ ಕಳೆದ ವರ್ಷ ಅವರ ಕುರಿತಾದ ಪುಸ್ತಕ ಕೂಡ ಬಿಡುಗಡೆಯಾಗಿ ಶೃಂಗೇರಿಯಲ್ಲಿ ನಾಗರಿಕ ಸನ್ಮಾನ ಕೂಡ ನೆರವೇರಿದೆ.
-ವಿಶ್ವನಾಥ ಸುಂಕಸಾಳ