ವೈವಿಧ್ಯಮಯ ಕಲೆಗಳ ಬೀಡಾಗಿರುವ ಮಲೆನಾಡಿನಲ್ಲಿ ಕಾಷ್ಠದಲ್ಲಿ ಮೂರ್ತಿ ಕೆತ್ತನೆ ಮಾಡುವವರು ಹಲವರಿದ್ದಾರೆ. ಅವರಲ್ಲಿ ಸ್ವರ್ಣವಲ್ಲಿಯ ನಾಗರಾಜ ಗುಡಿಗಾರ ವಿಶಿಷ್ಟವಾಗಿ ಕಾಣುತ್ತಾರೆ.
ಹೆತ್ತವರು ಸಿರಿವಂತರಲ್ಲ. ಬಡತನದ ಮಧ್ಯೆ ಕಷ್ಟ - ನೋವುಗಳನ್ನು ಸಹಿಸಿಕೊಂಡು ಜೀವನದ ನೌಕೆ ಸಾಗುತ್ತಿದೆ. ಇಂಥ ಕುಟುಂಬದಲ್ಲಿ ಜನಿಸಿದ ನಾಗರಾಜ ಗುಡಿಗಾರರಿಗೆ ಹರೆಯದಲ್ಲಿಯೇ ಮುಳ್ಳಿನ ಹಾಸಿಗೆಯ ಮೇಲೆ ನಡೆಯುವ ಅನಿವಾರ್ಯತೆ ಇತ್ತು. ತುತ್ತು ಕೂಳಿಗೂ ದುಡಿದೇ ತಿನ್ನಬೇಕಾದ ಪರಿಸ್ಥಿತಿಯ ಮಧ್ಯೆಯೂ ಇವರು ಪಿಯುಸಿವರೆಗೆ ಓದಿದ ನಾಗರಾಜ, ಉನ್ನತ ಶಿಕ್ಷಣದ ಹಂಬಲ ಬದಿಗೊತ್ತಿ ದುಡಿಯಲು ಆರಂಭಿಸಿದರು. ಮನೆತನದ ಮೂಲ ವೃತ್ತಿಯಾದ ಗುಡಿಗಾರರ ಕಸುಬನ್ನು ರೂಢಿಸಿಕೊಳ್ಳಲು ಸ್ವಪ್ರೇರಣೆಯಿಂದ ಅದರಲ್ಲಿ ತಲ್ಲೀನರಾದರು.
ಉ.ಕ ಜಿಲ್ಲೆ ಶಿರಸಿ ತಾಲೂಕಿನ ಸೋಂದಾ- ಸ್ವರ್ಣವಲ್ಲಿಯ ಮಂಜುನಾಥ ಗುಡಿಗಾರ ಹಾಗೂ ಶಾಂತಾ ದಂಪತಿ ಪುತ್ರ ನಾಗರಾಜ. ಆರಂಭದಲ್ಲಿ ಬನವಾಸಿ ಬಳಿಯ ಜಡೆಯ ಮಂಜುನಾಥಪ್ಪ ಮೇಸ್ಟ್ರಲ್ಲಿ ಶ್ರೀಗಂಧದ ಕೆತ್ತನೆ ಕೆಲಸ ಕಲಿಯಲು ಪ್ರಾರಂಭಿಸಿದರು. ಮೂರ್ತಿ ರಚನೆ, ಫ್ರೇಮ್, ಮಾಲೆ ಸಿದ್ಧಪಡಿಸುವುದು... ಇತ್ಯಾದಿ ಕೆಲಸಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಮನನ ಮಾಡಿಕೊಂಡರು. ಸುಮಾರು ಎರಡು ವರ್ಷ ಅಲ್ಲಿ ಗಂಧದ ಕೆತ್ತನೆಯ ಕೆಲಸದ ಬಗ್ಗೆ ಪ್ರಾಥಮಿಕ ಅಭ್ಯಾಸ. ಆಮೇಲೆ ಮಾವ ಬಿ.ಜಿ. ಮಂಜುನಾಥ ಅವರಲ್ಲಿ ಮೂರ್ತಿ ಕೆತ್ತನೆ ಕುರಿತ ಅಧ್ಯಯನ. ಕೆಲಕಾಲ ಸಾಗರದಲ್ಲಿಯೇ ನೆಲೆಸಿ, ಮಾವನವರಿಂದ ಶ್ರೀಗಂಧ ಹಾಗೂ ಕಾಷ್ಠಗಳಿಂದ ವಿವಿಧ ವಿಗ್ರಹಗಳ ರಚನೆಯಲ್ಲಿ ಸುದೀರ್ಘವಾದ ಅಧ್ಯಯನ, ಅನುಭವ ಪಡೆದುಕೊಂಡರು. ಬಳಿಕ ಸ್ವತಂತ್ರವಾಗಿ ಕೆತ್ತನೆಯ ಕಾರ್ಯದಲ್ಲಿ ತಲ್ಲೀನರಾದರು.
ಪ್ರಪ್ರಥಮವಾಗಿ ಗಣೇಶನ ಮೂರ್ತಿ ಸಿದ್ಧಪಡಿಸಿದ ಅವರು ಈಗ, ಶ್ರೀಗಂಧ ಹಾಗೂ ಕಾಷ್ಠದಿಂದ ಎಲ್ಲ ಬಗೆಯ ಮೂರ್ತಿಗಳ ಕೆತ್ತನೆಯಲ್ಲಿ ಸಿದ್ಧಹಸ್ತರು. ಗಣಪತಿ, ಆಜಂನೇಯ, ದೇವಿ, ಬಸವ, ನಾಗರ, ...... ಇತ್ಯಾದಿ ಮೂರ್ತಿಗಳನ್ನು ಸುಲಭವಾಗಿ ಸಿದ್ಧಪಡಿಸುತ್ತಾರೆ. ಅಲ್ಲದೇ, ಮುತ್ತಿನಕೆರೆಯ ವೆಂಕಟ್ರಮಣ ದೇವಸ್ಥಾನಕ್ಕೆ ಚೆನ್ನಕೇಶವ, ಸ್ವರ್ಣವಲ್ಲಿ ಮಠಕ್ಕೆ ಆಂಜನೇಯ, ಉಮಚಗಿ- ಹುಳಗೋಳ ದೇವಸ್ಥಾನಗಳಿಗೆ ಕಾಷ್ಠದ ಗಣಪತಿ ಮೂರ್ತಿ, ಹುಳಸೇಹೊಳ್ಳಿ ದೇವಸ್ಥಾನಕ್ಕೆ ಆರು ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ನಾಗರಾಜ ಗುಡಿಗಾರರೇ ನಿರ್ಮಿಸಿಕೊಟ್ಟಿದ್ದಾರೆ. ಇದುವರೆಗೆ ಸಾವಿರಕ್ಕೂ ಹೆಚ್ಚು ಈಶ್ವರನ ಮೂರ್ತಿ ರಚಿಸಿಕೊಟ್ಟಿರುವ ನಾಗರಾಜ ಗುಡಿಗಾರರ ಕಲಾ ಕೌಶಲವನ್ನು ಪ್ರಶಂಸಿಸಲೇಬೇಕು.
ಶ್ರೀಗಂಧದಿಂದ ವಿವಿಧ ವಸ್ತುಗಳನ್ನು ತಯಾರಿಸುವುದರಲ್ಲಿಯೂ ಗುಡಿಗಾರರದು ಎತ್ತಿದ ಕ್ಕೆ. ಮಂಟಪ, ಗಂಧದ ಪ್ರೇಮ, ಮಾಲೆ, ಚಿಕ್ಕಚಿಕ್ಕ ಮೂರ್ತಿ.... ಇನ್ನಿತರ ಅಲಂಕಾರ ಹಾಗೂ ನಿತ್ಯಬಳಕೆಯ ಅವಶ್ಯಕ ವಸ್ತುಗಳನ್ನು ಸಿದ್ಧಪಡಿಸುವುದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ತಾವು ತಯಾರಿಸಿದ ಶ್ರೀಗಂಧದ ಐಟಂಗಳನ್ನು 'ಕಾವೇರಿ ಕರಕುಶಲ ಗಂಧದ ಸಂಕೀರ್ಣ'ದ ಮೂಲಕ ಮಾರಾಟ ಮಾಡುತ್ತಾರೆ. ಈ ಗುಡಿಗಾರರು ಗಂಧದಲ್ಲಿ ಒಂದುವರೆ ಇಂಚಿನಿಂದ 4 ಇಂಚಿನ ಎತ್ತರದವರೆಗಿನ ಪುಟ್ಟ ಮೂರ್ತಿಗಳನ್ನೂ ಮಾಡಬಲ್ಲರು.
ಸ್ವರ್ಣವಲ್ಲಿಯ ನಾಗರಾಜರ ಕೈಚಳಕದಿಂದ ರೂಪ, ಆಕಾರ ಪಡೆದುಕೊಂಡ ಗಂಧದ ಹಾಗೂ ಕಾಷ್ಠದ ಮೂರ್ತಿ, ಇನ್ನಿತರ ಕರಕುಶಲ ವಸ್ತುಗಳು ಯಲ್ಲಾಪುರ, ಶಿರಸಿ, ಸಿದ್ದಾಪುರ, ಹೊನ್ನಾವರ, ಕುಮಟಾ..... ಇತ್ಯಾದಿ ತಾಲೂಕುಗಳ ಗ್ರಾಮೀಣ ಪ್ರದೇಶದ ವಿವಿಧ ಊರುಗಳಲ್ಲಿ ಪ್ರತಿಷ್ಠಾಪನೆಯಾಗಿವೆ. ಅಲ್ಲದೇ, 'ಗಡಿಕೈ ನಾರಾಯಣ ಹೆಗಡೆ ಅವರ ಮೂಲಕ ರಾಜ್ಯದ ವಿವಿಧ ಕಡೆಗಳಿಗೂ ತಾನು ಸಿದ್ಧಪಡಿಸಿದ ಮಂಟಪ, ಶಿಲಾಮೂರ್ತಿಗಳು ಹೋಗಿವೆ' ಎಂದು ನಾಗರಾಜ ಗುಡಿಗಾರ ಹೆಮ್ಮೆಯಿಂದಲೇ ಹೇಳುತ್ತಾರೆ. ಇವರು ಎಲ್ಲಾ ಬಗೆಯ ಸ್ಮರಣಿಕೆಗಳನ್ನು ಉತ್ಪಾದಿಸುತ್ತಿದ್ದು, ಅದಕ್ಕೂ ಉತ್ತಮ ಬೇಡಿಕೆಯಿದೆ ಎನ್ನುತ್ತಾರೆ.
ಸ್ವರ್ಣವಲ್ಲಿ ಮಠದಲ್ಲಿ ಈಗ ಇರುವ ಗರ್ಭಗುಡಿಯ ಕಾಷ್ಠದ ಬಾಗಿಲ ಚೌಕಟ್ಟಿಗೆ ನಾಗರಾಜ ಗುಡಿಗಾರರೇ ಆಕರ್ಷಕವಾಗಿ ಕೆತ್ತನೆ ಮಾಡಿದ್ದಾರೆ. ಇವರ ಸೂಕ್ಷ್ಮ ಹಾಗೂ ನಾಜೂಕಿನ ಕೆತ್ತನೆಯ ಕೆಲಸದ ಬಗ್ಗೆ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸೇರಿದಂತೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗುಡಿಗಾರರ ಸಂಪರ್ಕ: 08384-279459 ಅಥವಾ 9762327855.
ಚಿತ್ರ - ಬರಹ: ಗಣಪತಿ ಹಾಸ್ಪರ