ಜಾದೂ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ? ಜಾದೂ ನಿಮಗೆ ವಿಸ್ಮಯ ಅನ್ನಿಸಬೇಕಿದ್ದರೆ ಜಾದೂಗಾರ ಅಷ್ಟು ಪಳಗಿರಬೇಕು. ಮ್ಯಾಜಿಕ್ ಮಾಯಾಜಾಲ ಸೃಷ್ಟಿಸುವ ಕೌಶಲ ಹೊಂದಿರುವವರಲ್ಲಿ ಕುಂದಾಪುರ ತಾಲ್ಲೂಕು ಹೆಮ್ಮಾಡಿಯ ಸತೀಶ್ ಕೂಡ ಒಬ್ಬರು.
ಇವರು ಸತೀಶ್ ಹೆಮ್ಮಾಡಿ ಎಂದೇ ಖ್ಯಾತರು. 'ಭ್ರಮಾಲೋಕ' ಸೃಷ್ಟಿಸಲು ತೊಡಗಿದ್ದು ದಶಕದ ಹಿಂದೆ. ಪಿಯುಸಿ ವ್ಯಾಸಂಗ ಮುಗಿಸಿದ ತಕ್ಷಣ ಆಕರ್ಷಿಸಿದ್ದು ಜಾದೂ. ಸತೀಶ್ ಜಾದೂ ಆರಿಸಿಕೊಂಡಿದ್ದು ಹವ್ಯಾಸಕ್ಕೂ ಅಲ್ಲ, ಏನಾದರೂ ಸಾಧನೆ ಮಾಡುವ ಇರಾದೆಯಿಂದಲೂ ಅಲ್ಲ. ಹೊಟ್ಟೆಪಾಡಿಗಾಗಿ ಇದೇ ಕ್ಷೇತ್ರ ಆರಿಸಿಕೊಂಡ ಇವರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಮ್ಯಾಜಿಶಿಯನ್.
ಕೃಷ್ಣ ರಾಮ ನಾಯ್ಕ ಮತ್ತು ಪದ್ಮಾವತಿ ದಂಪತಿ ಪುತ್ರ ಸತೀಶ್ ಹೆಮ್ಮಾಡಿ. ಸಹೋದರ ಪ್ರಕಾಶ್ ಹೆಮ್ಮಾಡಿ ಕೂಡ ಜಾದೂಗಾರ. ಅವರ ಕೈ ಚಳಕ ಕಂಡು ಆಕರ್ಷಿತರಾಗಿ ಜಾದೂ ಕಲಿತವರು ಸತೀಶ್. 11 ವರ್ಷ ಹಿಂದೆ 'ಭ್ರಮಾಲೋಕ' ಎನ್ನುವ 11 ಜನರ ತಂಡ ಕಟ್ಟಿಕೊಂಡು ರಸಿಕರಿಗೆ ಮನರಂಜನೆ ನೀಡುತ್ತಿದ್ದಾರೆ. ಆಸಕ್ತರಿಗೆ ಜಾದೂ ತರಬೇತಿಯನ್ನೂ ನೀಡುತ್ತಿದ್ದಾರೆ. ಹಟ್ಟಿಯಂಗಡಿ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಶಾಲೆ ಮಕ್ಕಳಿಗೂ ಜಾದೂ ಕಲಿಸುತ್ತಿದ್ದಾರೆ.
ಈವರೆಗೆ 947 ಕಾರ್ಯಕ್ರಮ ನೀಡಿರುವ ಇವರು ಕೇರಳ, ಗೋವಾ, ಆಂಧ್ರಪ್ರದೇಶಗಳಲ್ಲೂ ತಮ್ಮ ಮಾಯಾವಿದ್ಯೆ ಪ್ರದರ್ಶಿಸಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ಜಾದೂವಿನಲ್ಲಿ ಯಾವಾಗಲೂ ಹೊಸತನ ಹುಡುಕಲು ಪ್ರಯತ್ನಪಡುವ ಇವರು ಉಡುಪಿಯಲ್ಲಿ ನಡೆದ ಅಂತಾರಾಷ್ಟ್ರೀಯ ಜಾದೂ ಸಮ್ಮೇಳನದಲ್ಲಿ ಕೆನಡಾದ ಪ್ರಸಿದ್ಧ ಜಾದೂಗಾರ ಡೀನ್ ಗುನ್ನರ್ ಸನ್ ಮಾಡಿದ ಮಿಲ್ಕ್ ಕ್ಯಾನ್ ಎಸ್ಕೇಪ್ ಎನ್ನುವ ಪ್ರಸಿದ್ಧ ಜಾದೂವನ್ನು ಭಾರತದಲ್ಲಿ ಮೊದಲ ಬಾರಿಗೆ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಈಗ ಅದೇ ಇವರ ಟ್ರಂಪ್ ಕಾರ್ಡ್.
ಮಿಲ್ಕ್ ಕ್ಯಾನ್ ಎಸ್ಕೇಪ್ ಮಾತ್ರವಲ್ಲದೇ ಫೈರ್ ಎಸ್ಕೇಪ್, ಇಂಡಿಯನ್ ರೋಪ್ ಟ್ರಿಕ್, ವಾಟರ್ ಎಸ್ಕೇಪ್, ಬ್ಲೈಂಡ್ ರೈಡಿಂಗ್, ಮಾತನಾಡುವ ಗೊಂಬೆ ಹೀಗೆ ನಾನಾ ತರಹದ ಪ್ರದರ್ಶನಗಳು ಇವರ ಜಾದೂಗಳು ಮನಸ್ಸಿಗೆ ತುಂಬಾ ಖುಷಿಯನ್ನು ನೀಡುತ್ತವೆ.
ಮಿಲ್ಕ್ ಕ್ಯಾನ್ ಎಸ್ಕೇಪ್ ಮಾತ್ರವಲ್ಲದೇ ಫೈರ್ ಎಸ್ಕೇಪ್, ಇಂಡಿಯನ್ ರೋಪ್ ಟ್ರಿಕ್, ವಾಟರ್ ಎಸ್ಕೇಪ್, ಬ್ಲೈಂಡ್ ರೈಡಿಂಗ್, ಮಾತನಾಡುವ ಗೊಂಬೆ ಹೀಗೆ ನಾನಾ ತರಹದ ಪ್ರದರ್ಶನಗಳು ಇವರ ಜಾದೂಗಳು ಮನಸ್ಸಿಗೆ ತುಂಬಾ ಖುಷಿಯನ್ನು ನೀಡುತ್ತವೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಜಾದೂ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಸತೀಶ್, ಕುಂದಾಪುರದ ರೋಟರಿ, ರೋಟರ್ಯಾಕ್ಟ್ ಮತ್ತಿತರ ಸಂಸ್ಥೆಗಳ ಗೌರವಕ್ಕೂ ಪಾತ್ರರಾಗಿದ್ದಾರೆ.
ಹಣಕ್ಕಿಂತ ಮಾನವೀಯತೆ ಮುಖ್ಯ
ಹೆಮ್ಮಾಡಿಯವರದ್ದು ಸಮಾಜಮುಖಿ ಧೋರಣೆ. 2008ರಲ್ಲಿ 500ನೇ ಜಾದೂ ಪ್ರದರ್ಶನದಲ್ಲಿ ಬಂದ ಹಣದಲ್ಲಿ ಕುಂದಾಪುರದ ಚೈತನ್ಯ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ರು. 25,000 ಅನ್ನು ದೇಣಿಗೆ ನೀಡಿದ್ದಾರೆ. ಅಲ್ಲದೇ ಕ್ಯಾನ್ಸರ್‌ನಿಂದ ಬಳಲುತ್ತಿರುವ ಆಯೇಷಾ ಸುಲ್ತಾನ ಎನ್ನುವ ಹುಡುಗಿಯ ಒಂದೇ ಆಸೆ ಜಾದೂ ಕಲಿಯುವುದು ಎಂದು ತಿಳಿದು ಅವಳಿಗೆ ಅದರಲ್ಲಿ ತರಬೇತಿ ಕೊಟ್ಟು ಆಕೆಯ ಜಾದೂ ಪ್ರದರ್ಶನ ಏರ್ಪಡಿಸಿದ್ದರು. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವುದು, ಕೈಲಾದ ಸಹಾಯ ಮಾಡುವುದರಲ್ಲೂ ಇವರು ಮುಂದು.
= ಅಶ್ವಿನಿ .ಎನ್ ಹಕ್ಲಾಡಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ,
ಮಂಗಳೂರು ವಿವಿ, ಮಂಗಳಗಂಗೋತ್ರಿ, ಕೊಣಾಜೆ